ಸಂಪತ್ ತರೀಕೆರೆ
ಕನ್ನಡಪ್ರಭ ವಾರ್ತೆ, ಬೆಂಗಳೂರುಸರ್ಕಾರಗಳ ದುರಾಡಳಿತ, ಕನ್ನಡದ ಕಾಯ್ದೆಗಳು ಅನುಷ್ಠಾನಗೊಳ್ಳದಂತೆ ವಿಫಲಗೊಳಿಸುತ್ತಿರುವ ವ್ಯವಸ್ಥೆ ವಿರುದ್ಧ ಹೋರಾಡದಂತೆ ಕನ್ನಡಪರ ಹೋರಾಟಗಾರರ ಮೇಲೆ ಕೇಸುಗಳೆಂಬ ಅಸ್ತ್ರಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಕನ್ನಡಪರ ಹೋರಾಟ ನಡೆಸಿದ ದಿನದಂದು ಯಾವುದೇ ಕೇಸು ದಾಖಲಿಸದೆ ಕೇವಲ ವಶಕ್ಕೆ ಪಡೆದು ಕೆಲ ಗಂಟೆಗಳ ಬಳಿಕ ಬಿಡುಗಡೆ ಮಾಡಿ ಕಳುಹಿಸುವ ಪೊಲೀಸರು ಸಂಬಂಧವೇ ಇಲ್ಲದಂತಹ ನಾಲ್ಕೈದು ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಿರುವುದು ಗೊತ್ತಾಗುವುದು ನ್ಯಾಯಾಲಯದಿಂದ ಸಮನ್ಸ್ ಬಂದಾಗಲೇ. ಚಳವಳಿ, ಹೋರಾಟ, ಪ್ರತಿಭಟನೆಯಲ್ಲಿ ಯಾವುದೇ ಸಮಸ್ಯೆಗಳು ಆಗದಿದ್ದರೂ ಕರ್ತವ್ಯಕ್ಕೆ ಅಡ್ಡಿ, ವಾಹನ ಸಂಚಾರಕ್ಕೆ ಅಡ್ಡಿ, ಅಕ್ರಮ ಪ್ರವೇಶ ಸೇರಿದಂತೆ ಐದಾರು ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಿರುತ್ತಾರೆ ಎಂದು ಕೆಲ ಹೋರಾಟಗಾರರು ‘ಕನ್ನಡಪ್ರಭ’ದೊಂದಿಗೆ ಅಳಲು ತೋಡಿಕೊಂಡಿದ್ದಾರೆ.ಹೋರಾಟಗಾರರ ವಿರುದ್ಧ ರೌಡಿಶೀಟರ್ ಪಟ್ಟಿ!
ಆಟೋ ಚಾಲಕರು, ದಿನಗೂಲಿ ಮಾಡುವವರು, ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಹಲವರು ಪ್ರಾಮಾಣಿಕವಾಗಿ ಕನ್ನಡ ಪ್ರೀತಿಯಿಂದ ರಸ್ತೆಗಿಳಿದರೆ ಅವರ ಮೇಲೂ ಸುಳ್ಳು ಕೇಸುಗಳನ್ನು ದಾಖಲು ಮಾಡುವುದು ಕನ್ನಡಕ್ಕೆ ದ್ರೋಹ ಮಾಡಿದಂತೆ. ಕೆಲವು ಹೋರಾಟಗಾರರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿ, ಸ್ಟೇಷನ್‌ಗೆ ಕರೆಸಿ ಅವಮಾನ ಮಾಡಲಾಗುತ್ತಿದೆ. ಇದನ್ನು ಯಾವ ಹೋರಾಟಗಾರರೂ, ಪ್ರಜ್ಞಾವಂತರೂ ಸಹಿಸಲು ಸಾಧ್ಯವಿಲ್ಲ. ಕನ್ನಡ ಪರ ಧ್ವನಿ ಎತ್ತದಂತೆ ಬೆದರಿಕೆಯೊಡ್ಡುವ ಕಾರ್ಯವನ್ನು ಪೊಲೀಸ್ ಇಲಾಖೆ ಮತ್ತು ಸರ್ಕಾರಗಳು ಮಾಡುತ್ತಿರುವುದು ಖಂಡನೀಯ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ.ಸಲ್ಲದ ಕೇಸು ಅಕ್ಷಮ್ಯ:
ಕನ್ನಡವನ್ನೇ ಮುಖ್ಯ ಆಶಯವನ್ನಾಗಿ ಇಟ್ಟುಕೊಂಡು, ಕನ್ನಡದ ಅಸ್ಮಿತೆಗೆ ಧಕ್ಕೆ ಬರುವಂತಹ ಸಂದರ್ಭದಲ್ಲಿ ಕನ್ನಡ ನಾಡು, ನುಡಿಯ ಮೇಲಿನ ಪ್ರೇಮದಿಂದ ಹೋರಾಟ ಮಾಡಲು ಹೋದಂತಹ ವ್ಯಕ್ತಿಗಳನ್ನು ಹತ್ತಿಕ್ಕುವಂತಹ ಪ್ರಯತ್ನದಲ್ಲಿ ಬಂಧನ ಮಾಡುವುದು, ಇಲ್ಲಸಲ್ಲದ ಕೇಸು ದಾಖಲು ಮಾಡುವುದು ಅಕ್ಷಮ್ಯ ಎನ್ನುತ್ತಾರೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್.ಕೇಸುಗಳ ಒತ್ತಡಕ್ಕೆ ಕಣ್ಮರೆ:
ಎಡಗಡೆ ಎನ್ನಡ, ಬಲಗಡೆ ಎಕ್ಕಡ, ಮಧ್ಯೆ ಕನ್ನಡ ಎನ್ನುವಂತ ಪರಿಸ್ಥಿತಿ ಬೆಂಗಳೂರಿನಲ್ಲಿದೆ. ಇನ್ನು ಗಡಿಭಾಗದ ಕನ್ನಡಿಗರ ಪರಿಸ್ಥಿತಿಯಂತೂ ಶೋಚನೀಯ. ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೆ ನಿಜವಾದ ಭಾಷಾ ತ್ಯಾಗಿಗಳು, ತಪಸ್ವಿಗಳು ನಮ್ಮ ಕನ್ನಡಪರ ಹೋರಾಟಗಾರರು ಎಂದರೆ ತಪ್ಪಾಗಲಾರದು. ಆದ್ದರಿಂದ ಅವರ ಮೇಲಿನ ಎಲ್ಲ ಕೇಸುಗಳನ್ನು ಹಿಂಪಡೆಯಲೇಬೇಕು. ಕೇಸುಗಳನ್ನು ಇಟ್ಟುಕೊಂಡು ಹೋರಾಟಗಾರರನ್ನು ಬೆದರಿಸುವ ಪ್ರಯತ್ನಗಳು ನಾಚಿಕೆ ಪಡುವಂತದ್ದು ಎಂದು ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.-ಕೋಟ್-
ಕೇಸ್ ಹಿಂಪಡೆಯುವುದು ಘನತೆನಮ್ಮಿಂದ ತಪ್ಪಾದರೆ ಪ್ರಕರಣಗಳನ್ನು ದಾಖಲಿಸುವುದಕ್ಕೆ ನಮ್ಮ ತಕರಾರು ಇಲ್ಲ. ಹೋರಾಟಗಾರರ ಮೇಲೆ ಹೊರಿಸುವ ಸುಳ್ಳು ಆಪಾದನೆಗಳನ್ನು ಬಿಡಬೇಕು. ತಾನು ಕನ್ನಡದ ಪರ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ಕೇಸುಗಳನ್ನು ಕೈಬಿಟ್ಟರೆ ಸರ್ಕಾರಕ್ಕೊಂದು ಘನತೆ ಬರುತ್ತದೆ.-ಪ್ರವೀಣ್ ಕುಮಾರ್ ಶೆಟ್ಟಿ, ರಾಜ್ಯಾಧ್ಯಕ್ಷ, ಕರವೇಸನ್ಮಾನ ಮಾಡಿ, ಬಂಧನ ಅಲ್ಲಕನ್ನಡವನ್ನೇ ಉಸಿರಾಗಿಸಿಕೊಂಡ ಹೋರಾಟಗಾರರಿಗೆ ಸನ್ಮಾನ ಆಗಬೇಕೇ ಹೊರತು ಬಂಧನವಲ್ಲ. ಭಾಷಾ ರಕ್ಷಣೆ ಸರ್ಕಾರದ ಕರ್ತವ್ಯ. ಸರ್ಕಾರದ ಕರ್ತವ್ಯವನ್ನು ಹೋರಾಟಗಾರರು ವಿಸ್ತೃತಗೊಳಿಸಿ ತಾವು ಅದನ್ನು ಮಾಡುತ್ತಿದ್ದಾರೆ. ಇದು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಲ್ಲ. ಭಾಷೆಯ ಭಾವನೆಯನ್ನು ಸರ್ಕಾರದೊಂದಿಗೆ ಸಂವೇದನಾಶೀಲವಾಗಿ ಹಂಚಿಕೊಳ್ಳುವುದು. ಆದ್ದರಿಂದ ಕೇಸುಗಳನ್ನು ಅವರು ಹಿಂದಕ್ಕೆ ಪಡೆಯಲೇ ಬೇಕು.
- ಡಾ.ಸಿ.ಸೋಮಶೇಖರ್, ಮಾಜಿ ಅಧ್ಯಕ್ಷರು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ