ಕನ್ನಡಪ್ರಭ ವಾರ್ತೆ ಮಂಡ್ಯ
ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಸ್ತಂಭ ನಿರ್ಮಾಣದ ಸಂದರ್ಭದಲ್ಲಿ ಪೊಲೀಸರು ಹಾಕಿರುವ ಅಮಾಯಕರ ಮೇಲಿನ ಕೇಸುಗಳನ್ನು ತೆಗೆಸುವುದು ನನ್ನ ಜವಾಬ್ದಾರಿ ಎಂದು ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.ನಗರದ ಕೆರಗೋಡು ಗ್ರಾಮದಲ್ಲಿ ಶ್ರೀಪಡುವಣ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಬುಧವಾರ ಪೂಜೆ ಸಲ್ಲಿಸಿ ನಂತರ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿ, ಗ್ರಾಮದಲ್ಲಿ ಹನುಮಧ್ವಜ ಹಾರಿಸುವ ಸಂದರ್ಭದಲ್ಲಿ ಪೊಲೀಸರು ಹಾಕಿರುವ ಕೇಸುಗಳನ್ನು ತೆಗೆಸುವ ಜವಾಬ್ದಾರಿ ನನ್ನದು, ಅದನ್ನು ಸರ್ಕಾರದಿಂದಲೇ ಆದೇಶ ಮಾಡಿಸುವ ಕೆಲಸ ಮಾಡುತ್ತೇನೆ ಎಂದರು.
ಕೇಸರಿ ಶಾಲು ಧರಿಸಿ ಮತಯಾಚನೆ:ತಾಲೂಕಿನ ಮರಿಲಿಂಗನದೊಡ್ಡಿ ಗ್ರಾಮಕ್ಕೆ ಆಗಮಿಸಿದ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೈಕ್ ರ್‍ಯಾಲಿ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ನಂತರ ಮೊದಲು ಶ್ರೀರಾಮಮಂದಿರದಲ್ಲಿ ಪೂಜೆ ಸಲ್ಲಿಸಿದರು.
ಕೇಸರಿ ಶಾಲು ಧರಿಸಿಯೇ ಪ್ರಚಾರದಲ್ಲಿ ತೊಡಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ನಂತರ ಕೆರಗೋಡು ಗ್ರಾಮದಲ್ಲಿ ಪಡುವಣ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಎರಡು ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳೊಂದಿಗೆ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.ಮುಖಂಡರಾದ ಸಿ.ಎಸ್.ಪುಟ್ಟರಾಜು, ಅಮರಾವತಿ ಚಂದ್ರಶೇಖರ್, ಅಶೋಕ್ ಜಯರಾಂ, ಬಿ.ಆರ್.ರಾಮಚಂದ್ರು, ಎಂ.ಎಸ್.ರಘುನಂದನ್, ಡಿ.ರಮೇಶ್, ಕೆ.ಎಸ್.ವಿಜಯ್ ಆನಂದ್ ಭಾಗವಹಿಸಿದ್ದರು.ತಾಯಂದಿರ ಬಗ್ಗೆ ಲಘುವಾಗಿ ಮಾತನಾಡಿಲ್ಲ, ಕಾಂಗ್ರೆಸ್ ಹೇಳಿಕೆ ತಿರುಚಿ ಅಪಪ್ರಚಾರ: ಎಚ್ಡಿಕೆಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆನಾನು ಮತ್ತು ನನ್ನ ಕುಟುಂಬ ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದೇನೆ ಹೊರತು ನಾನು ನಮ್ಮ ತಾಯಂದಿರ ಬಗ್ಗೆ ಎಂದಿಗೂ ಲಘುವಾಗಿ ಮಾತನಾಡಿಲ್ಲ. ನನ್ನ ಹೇಳಿಕೆ ತಿರುಚಿ ಕಾಂಗ್ರೆಸ್ ಅಪಪ್ರಚಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಮೂಲಕ ಹಣದ ಆಮಿಷ ಒಡ್ಡಿ ನಮ್ಮ ತಾಯಂದಿರನ್ನು ದಾರಿತಪ್ಪುವಂತೆ ಮಾಡಬೇಡಿ ಎನ್ನುವ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ. ತಾಯಂದಿರೇ ಎರಡು ಸಾವಿರದ ಆಸೆಗೆ ಬಲಿಯಾಗಬೇಡಿ. ನೀವು ಎಂದಿಗೂ ಕೈತುಂಬ ನೀಡುವವರಾಗಬೇಕೇ ಹೊರತು ಕೈಯೊಡ್ಡುವವರಾಗಬಾರದು ಎನ್ನುವುದು ನನ್ನ ಆಸೆ ಎಂದರು.ಕಾಂಗ್ರೆಸ್ ಸರ್ಕಾರ ತಾಯಂದಿರ ಖಾತೆಗೆ ಎರಡು ಸಾವಿರ ಹಣ ಹಾಕಿ ಪರೋಕ್ಷವಾಗಿ ಕುಟುಂಬದ ಯುಜಮಾನರ ಮೂಲಕ ಮಾಸಿಕ 5-6 ಸಾವಿರ ವಸೂಲಿ ಮಾಡಲಾಗುತ್ತಿದೆ. ಮದ್ಯದ ಬೆಲೆ ಏರಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು.ಗ್ಯಾರಂಟಿ ಯೋಜನೆಗಳಿಗಾಗಿ 1.05 ಲಕ್ಷ ಸಾವಿರ ಕೋಟಿ ಸಾಲ ಮಾಡಿದೆ. ಇದು ನನ್ನ ಕೊನೆ ಚುನಾವಣೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ರಾಜ್ಯದ ಜನರ ತಲೆ ಮೇಲೆ ಸಾಲ ಹೊರಿಸಿದ್ದೆ ಸಾಧನೆಯಾಗಿದೆ ಎಂದು ದೂರಿದರು.