ಕೊಪ್ಪಳ: ಗುರುವಾರ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಗೆ ಕಲ್ಲು ತೂರಾಟ ನಡೆಸಿದ್ದ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಸೇರಿದಂತೆ 16 ಜನರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸುತ್ತ ಪೊಲೀಸ್ ಬೀಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದನ್ನು ಖಂಡಿಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಏಕಾಏಕಿ ನುಗ್ಗಿ ಬ್ಯಾರೆಕೇಡ್ ಕಿತ್ತಾಕಿ ನೇರ ಕಾಂಗ್ರೆಸ್ ಕಚೇರಿ ಗೇಟ್‌ಗೆ ಮುತ್ತಿಗೆ ಹಾಕಿದ್ದರು. ಅಲ್ಲದೆ ಕಾಂಗ್ರೆಸ್ ಕಚೇರಿಯ ಗ್ಲಾಸ್‌ಗೆ ಎಂಎಲ್‌ಸಿ ಹೇಮಲತಾ ನಾಯಕ್ ಕಲ್ಲು ಸಹ ಎಸೆದಿದ್ದರು. ಈ ವೇಳೆ ಅವರೊಟ್ಟಿಗೆ ಇತರೆ ಮಹಿಳೆಯರೂ ಸಹ ಕಲ್ಲು ಎಸೆದಿದ್ದರು. ಈ ಹಿನ್ನೆಲೆ ಶುಕ್ರವಾರ ಕಾಂಗ್ರೆಸ್ ಕಚೇರಿ ಎದುರು ಬೀಗಿ ಭದ್ರತೆಗಾಗಿ ಪೊಲೀಸರು ಭದ್ರತೆ ಕಲ್ಪಿಸಿದ್ದು ಕಂಡು ಬಂದಿತು.
16 ಜನರ ವಿರುದ್ಧ ಪ್ರಕರಣ ದಾಖಲು:ನಗರದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ್ದು, ಕಲ್ಲು ತೂರಾಟ ಸಹ ಮಾಡಿದ ಹಿನ್ನೆಲೆ ಎಂಎಲ್ಸಿ ಹೇಮಲತಾ ನಾಯಕ ಸೇರಿ16 ಜನರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಮಲ್ಲಿಕಾರ್ಜುನ ಪೂಜಾರ ಎಂಬುವವರು ದೂರು ನೀಡಿದ್ದರಿಂದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎಂಎಲ್‌ಸಿ ಹೇಮಲತಾ ನಾಯಕ, ಜಯಶ್ರೀ ಆರೇರ, ವಾಣಿಶ್ರೀ ಮಠದ, ಕೀರ್ತಿ ಪಾಟೀಲ್, ಶೋಭಾ ನಗಾರಿ, ಮಲ್ಲಮ್ಮ ಬೇವೂರು, ವೀಣಾ ಬನ್ನಿಗೋಳ, ಮಾಧುಶ್ರೀ, ಪುಟ್ಟರಾಜ ಚೆಕ್ಕಿ, ಅಂದಪ್ಪ ಯಲ್ಲಣವರ, ಚನ್ನಬಸವರಾಜ ಗಾಳಿ, ಪ್ರಭುರಾಜ ಪಾಟೀಲ ಹುಲಗಿ, ರವಿಚಂದ್ರ ಮಾಲಿ ಪಾಟೀಲ, ಪ್ರಶಾಂತ ಕರುಗಲ್, ಅಶೋಕ ಗುಡದಳ್ಳಿ, ದೀಪಕ್ ಬಿ ವಿರುದ್ಧ ಗುಂಪು ಕಟ್ಟಿಕೊಂಡು ಅನಧೀಕೃತವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಿ ಕಲ್ಲುಗಳಿಂದ ಕಚೇರಿಯ ಗೇಟ್ ಹಾಗೂ ಕಚೇರಿಯ ಗ್ಲಾಸ್ ಹೊಡೆದು ಲಕ್ಷಾಂತರ ಹಾನಿ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರು ದಾಖಲಾಗಿದೆ.