ಅನುಮತಿ ಇಲ್ಲದೆ ಹಾವೇರಿಯಲ್ಲಿ ಬೃಹತ್ ಮರ ಕಟಾವು, ಕೇಸ್ ದಾಖಲು

KannadaprabhaNewsNetwork |  
Published : Jun 18, 2026, 02:00 AM IST
ಹಾವೇರಿ ಸ್ಥಳೀಯ ಬಸವೇಶ್ವರ ನಗರದ ಸರ್ಕಾರಿ ಜಾಗದಲ್ಲಿದ್ದ ಬೃಹದಾಕಾರದ ಮಳೆಮರವನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಸಂಪೂರ್ಣವಾಗಿ ಕಡಿಯಲಾಗಿದೆ. | Kannada Prabha

ಸಾರಾಂಶ

ಹಾವೇರಿ ಬಸವೇಶ್ವರ ನಗರದ ಸರ್ಕಾರಿ ಜಾಗದಲ್ಲಿದ್ದ ಬೃಹತ್‌ ಮರಗಳನ್ನು ಇಲಾಖೆಯ ಅನುಮತಿ ಪಡೆಯದೆ ಬುಡ ಸಮೇತ ಕಟಾವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ.

ಹಾವೇರಿ: ಸ್ಥಳೀಯ ಬಸವೇಶ್ವರ ನಗರದ ಸರ್ಕಾರಿ ಜಾಗದಲ್ಲಿದ್ದ ಬೃಹತ್‌ ಮರಗಳನ್ನು ಇಲಾಖೆಯ ಅನುಮತಿ ಪಡೆಯದೆ ಬುಡ ಸಮೇತ ಕಟಾವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ.

ಬಸವೇಶ್ವರ ನಗರದ ಜಗದೀಶ ಮಾಗಾವಿ ಅವರ ಮನೆ ಎದುರಿನ ರಸ್ತೆಯ ಪಕ್ಕದ ಸರ್ಕಾರಿ ಜಾಗದಲ್ಲಿದ್ದ ಮಳೆಮರವನ್ನು ಅನಧಿಕೃತವಾಗಿ ಕಡಿದಿರುವ ಕುರಿತು ಬುಧವಾರ ಬೆಳಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ದೊರಕಿತ್ತು. ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮರವನ್ನು ಸಂಪೂರ್ಣವಾಗಿ ಕಡಿದಿರುವುದು ಕಂಡು ಬಂದಿದೆ.

ಪ್ರಕರಣದ ಹಿನ್ನೆಲೆ: ಈ ಕುರಿತು ಮಾಹಿತಿ ನೀಡಿರುವ ಡಿಎಫ್‌ಒ ಅಕ್ಷಯ ಪ್ರಕಾಶ್ಕರ್, ಬಸವೇಶ್ವರ ನಗರ 8 ಮತ್ತು 9ನೇ ಕ್ರಾಸ್ ನಿವಾಸಿಗಳು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೀದಿ ಬದಿ ಅಪಾಯಕಾರಿಯಾಗಿ ಬೆಳೆದಿದ್ದ ಮರಗಳ ತೆರವಿಗೆ ಸಂಬಂಧಿಸಿ ಮಾ. 27ರಂದು ಮನವಿ ಸಲ್ಲಿಸಿದ್ದರು. ಹಾವೇರಿ ನಗರ ವ್ಯಾಪ್ತಿಯ ಒಟ್ಟು 13 ಅಪಾಯಕ್ಕೆ ಕಾರಣವಾಗಬಹುದಾದ ಮರಗಳ ಕಟಾವಿನ ಕುರಿತು ನಗರಸಭೆ ಪೌರಾಯುಕ್ತರಿಂದ ಅಭಿಪ್ರಾಯ ಪಡೆಯಲಾಗಿತ್ತು. ಮೇ 26ರಂದು ಪೌರಾಯುಕ್ತರು ಸಂಬಂಧಿತ ಮರಗಳನ್ನು ತೆರವುಗೊಳಿಸಬಹುದೆಂದು ವರದಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರು, ಜಗದೀಶ ಮಾಗಾವಿ ಅವರ ಮನೆ ಎದುರಿನ ಮಳೆಮರದ ರೆಂಬೆ-ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಚಾಚಿಕೊಂಡಿದ್ದು, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ರೆಂಬೆ-ಕೊಂಬೆಗಳನ್ನು ಮಾತ್ರ ಕಟಾವಣೆ ಮಾಡಬೇಕೆಂದು ವರದಿ ಸಲ್ಲಿಸಿದ್ದರು.

ಅದರಂತೆ ವಲಯ ಅರಣ್ಯಾಧಿಕಾರಿ ಮರದ ರೆಂಬೆ-ಕೊಂಬೆಗಳನ್ನು ಮಾತ್ರ ಕತ್ತರಿಸಲು ಅನುಮತಿ ನೀಡಿದ್ದು, ಈ ಕಾರ್ಯವನ್ನು ಸಿಕಂದರ್‌ ಬಾಷಾ ಹತ್ತಿಮತ್ತೂರ ಅವರಿಗೆ ವಹಿಸಲಾಗಿತ್ತು. ಆದರೆ ರೆಂಬೆ-ಕೊಂಬೆಗಳನ್ನು ಮಾತ್ರ ಕತ್ತರಿಸಬೇಕಿದ್ದ ಸ್ಥಳದಲ್ಲಿ ಸಂಪೂರ್ಣ ಮರವೇ ಕಟಾವಣೆಯಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಕೃತ್ಯವು ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಾನುಭವಿಗಳಿಗೆ ಸ್ವ ಉದ್ಯೋಗಕ್ಕೆ ಸೌಲಭ್ಯ ಕಲ್ಪಿಸಿಕೊಡಿ
ರೈತರ ಚಿತ್ತ ಇರಲಿ ಸಾವಯವ, ನೈಸರ್ಗಿಕ ಕೃಷಿಯತ್ತ