ಮಹಿಳಾ ಸಬಲೀಕರಣ ಉಪನ್ಯಾಸ
ಮಹಿಳೆಯರ ಮೇಲಿನ ದೌರ್ಜನ್ಯವು ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿದೆ. ಕೌಟಂಬಿಕ ಹಿಂಸಾಚಾರ, ಮಹಿಳೆಯರ ವಿರುದ್ಧದ ತಾರತಮ್ಯ ಹಾಗೂ ಪಕ್ಷಪಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಉಪನ್ಯಾಸಕಿ ಹಾಗೂ ವಾಗ್ಮಿ ನಾಗಶ್ರೀ ತ್ಯಾಗರಾಜ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಚನ್ನಕೇಶವ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ಹಾಗೂ ಸರಸ್ವತಿ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣ ನಿರ್ಣಾಯಕವಾಗಿದೆ. ಶಿಕ್ಷಣ ಹಾಗೂ ಆರೋಗ್ಯದಂತಹ ಕೆಲವು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯ ಹೊರತಾಗಿಯೂ ದೇಶದ ಮಹಿಳೆಯರು ಇನ್ನೂ ಪೂರ್ಣ ಸಬಲೀಕರಣಕ್ಕೆ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಎಂದು ವಿಷಾದಿಸಿದರು.ತಾಳ್ಮೆ, ದೈವಿಕ ಗುಣವಿರುವ ಶಿಕ್ಷಕರ ಶಿಸ್ತು ಇತರರಿಗೆ ಮಾದರಿಯಾಗಿರುತ್ತದೆ. ಒಂದು ಕಾಲಘಟ್ಟದಲ್ಲಿ ಗುರುಗಳಿಗೆ ಕೈ ಮುಗಿದು ಕರೆತರುವ ದಿನಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಗುರುಗಳೇ ವಿದ್ಯಾರ್ಥಿಗಳಿಗೆ ಕೈ ಮುಗಿದು ಕರೆತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಸ್ಕಾರಯುತ ಶಿಕ್ಷಣ ದೂರವಾಗುತ್ತಿರುವುದೇ ಕಾರಣವಾಗಿದೆ. ಸಾಹಿತ್ಯದ ಹಾಗೂ ಶಿಸ್ತಿನ ಶಿಕ್ಷಣ ದೊರಕಿದರೆ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು.
ಜಗತ್ತಿನಲ್ಲಿ ಪುರುಷರಿಗಿಂತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸಮಾಜವನ್ನು ಮುಂದೆ ಕೊಂಡೊಯ್ಯುವ ಮಹಿಳೆಯರನ್ನು ಗೌರವಿಸುವುದು ಇದರ ಉದ್ದೇಶವಾಗಿದೆ. ಸಮಾಜದಲ್ಲಿ ಮಹಿಳೆಯರ ಬಗ್ಗೆ ಜಾಗೃತಿ ಮೂಡಿಸಲು, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅವರನ್ನು ಪ್ರೋತ್ಸಾಹಿಸಲು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ಇದೇ ವೇಳೆ ಸುಮಾರು ೧೫೦ಕ್ಕೂ ಹೆಚ್ಚು ಶಿಕ್ಷಕಿಯರನ್ನು ಗೌರವಿಸಲಾಯಿತು.
ಬೇಲೂರು ಪಟ್ಟಣದ ಶ್ರೀ ಚನ್ನಕೇಶವ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ಸಬಲೀಕರಣ ಉಪನ್ಯಾಸ ಹಾಗೂ ಸರಸ್ವತಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.