Cast aside indifference and cultivate a love for Kannada.
-ಕನ್ನಡ ಅಕ್ಷರ ಜಾತ್ರೆ
ಡಾ. ಗಜಾನನ ಶರ್ಮ ಕರೆ । ಭದ್ರಾವತಿ ತಾಲೂಕು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಕನ್ನಡಪ್ರಭ ವಾರ್ತೆ ಭದ್ರಾವತಿ
ಕನ್ನಡ, ನೆಲ, ಜಲ ಮತ್ತು ಭಾಷೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕಾಗಿದೆ. ತಾತ್ಸಾರ ಮನೋಭಾವದಿಂದ ಹೊರಬಂದು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕಾಗಿದೆ ಎಂದು ಸಾಹಿತಿ ಡಾ. ಗಜಾನನ ಶರ್ಮ ಕರೆ ನೀಡಿದರು.
ನ್ಯೂಟೌನ್, ಮಹಾತ್ಮಗಾಂಧಿ ಉದ್ಯಾನವನದ ಮುಂಭಾಗ, ಶ್ರೀರಾಮ ಸಮುದಾಯ ಭವನದಲ್ಲಿ ತಾಲೂಕು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕನ್ನಡ ಭಾಷೆಗೆ ಎಂದಿಗೂ ಸಾವಿಲ್ಲ. ಸಮೃದ್ಧವಾದ ಭಾಷೆ ನಮ್ಮದಾಗಿದ್ದು, ಇಂತಹ ಭಾಷೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.
ನಮ್ಮನ್ನು ನಾವು ಅವಲೋಕಿಸಿಕೊಳ್ಳುವ, ಕನ್ನಡ ನೆಲ, ಜಲ ಮತ್ತು ಭಾಷೆಯ ಪರಂಪರೆಯನ್ನು ಅರಿತುಕೊಳ್ಳುವ ಹಾಗೂ ಭವಿಷ್ಯದ ಬಗ್ಗೆ ಚಿಂತಿಸುವ ಉದ್ದೇಶಗಳನ್ನು ಇಂತಹ ಸಮ್ಮೇಳನಗಳು ಒಳಗೊಂಡಿವೆ. ಇದನ್ನು ನಾವೆಲ್ಲರೂ ಅರ್ಥಮಾಡಿಕೊಂಡು ಸಮ್ಮೇಳನ ಸಾರ್ಥಕಗೊಳ್ಳುವಂತೆ ಮಾಡಬೇಕೆಂದರು.
ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಮೈಸೂರು ಕಾಗದ ಕಾರ್ಖಾನೆ ಈ ಎರಡು ಕಾರ್ಖಾನೆಗಳು ತಾಲೂಕಿನ ಎರಡು ಕಣ್ಣುಗಳು. ಒಂದು ಮುಚ್ಚಿದೆ (ಎಂಪಿಎಂ) ಮತ್ತೊಂದು (ವಿಐಎಸ್ಎಲ್) ನಿದ್ರಾವಸ್ಥೆ ತಲುಪಿದೆ. ಈ ಎರಡೂ ಕಾರ್ಖಾನೆಗಳು ಯತಾಸ್ಥಿತಿಗೆ ಬರಬೇಕಾದಲ್ಲಿ ಕಾರ್ಮಿಕರಷ್ಟೇ ಅಲ್ಲ ನಾವೆಲ್ಲರೂ ಸೇರಿ ಹೋರಾಟ ಮಾಡುವ ಅಗತ್ಯವಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ, ವೈದ್ಯ ಸಾಹಿತಿ ಡಾ. ಕೃಷ್ಣ ಎಸ್ ಭಟ್ ಹೇಳಿದರು.
ಕನ್ನಡಿಗರು ಜಾಗೃತರಾಗಲಿ:
ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಆಶಯ ನುಡಿಗಳನ್ನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಕನ್ನಡಿಗರಿಗೆ ಕನ್ನಡ ನಾಡಿನಲ್ಲಿಯೇ ಉದ್ಯೋಗ ಲಭಿಸದಿರುವ ಪರಿಸ್ಥಿತಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕನ್ನಡಿಗರು ಜಾಗೃತರಾಗಬೇಕಾಗಿದೆ. ರಾಜ್ಯದಲ್ಲಿನ ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಲಭಿಸದಂತಾಗಿದೆ. ಹೊರ ರಾಜ್ಯದವರಿಗೆ ನಮ್ಮ ರಾಜ್ಯದಲ್ಲಿ ಉದ್ಯೋಗ ಲಭಿಸುತ್ತಿದ್ದು, ಪ್ರಸ್ತುತ ಕನ್ನಡರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ. ಈ ಕುರಿತು ನಮ್ಮನಾಳುವ ಸರ್ಕಾರ ಮೌನವಹಿಸಿರುವುದು ವಿಪರ್ಯಾಸದ ಸಂಗತಿ ಎಂದರು.
೨೫೦೦ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಒಳ್ಳೆಯ ದಿನಗಳು ಬರುವ ಸಂದರ್ಭ, ಸನ್ನಿವೇಶಗಳು ಅಷ್ಟಾಗಿ ಕಂಡು ಬರುತ್ತಿಲ್ಲ. ದ್ವಿಭಾಷಾ ನೀತಿಯನ್ನು ಜಾರಿಗೊಳಿಸಿ ಇಂದಿನ ಸರ್ಕಾರಗಳು ಅನ್ಯಾಯ ಮಾಡುತ್ತಿವೆ. ಇದನ್ನು ವಿರೋಧಿಸಿ ನ.೧೭ ರಿಂದ ನ.೨೩ ರವರೆಗೂ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಪ್ತಾಹ ಮಾಡುವ ನಿರ್ಧಾರ ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ರಾಷ್ಟ್ರಧ್ವಜಾರೋಹಣ ಹಾಗೂ ನಾಡಧ್ವಜಾರೋಹಣ ಮತ್ತು ಪರಿಷತ್ ಧ್ವಜಾರೋಹಣ ನೆರವೇರಿಸಲಾಯಿತು.
ಕನ್ನಡದ ರಥದಲ್ಲಿ ಮೆರವಣಿಗೆ:
ಸಮ್ಮೇಳನಾಧ್ಯಕ್ಷ ವೈದ್ಯ ಸಾಹಿತಿ ಡಾ. ಕೃಷ್ಣ ಎಸ್ ಭಟ್ ದಂಪತಿಯನ್ನು ನಗರದ ಕೆಎಸ್ಆರ್ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಶಿಕ್ಷಕ ಹಾಗೂ ಜಾನಪದ ಕಲಾವಿದ ಎಂ.ಆರ್. ರೇಣುಪ್ಪ ನೇತೃತ್ವಲ್ಲಿ ಡೊಳ್ಳು ಕುಣಿತ, ಜಾನಪದ ಕಲಾವಿದ ತಮಟೆ ಜಗದೀಶ್ ನೇತೃತ್ವದ ತಂಡ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಕನ್ನಡದ ರಥದಲ್ಲಿ ಮೆರವಣಿಗೆ ಮೂಲಕ ಸಮ್ಮೇಳನ ಸ್ಥಳ ಶ್ರೀರಾಮ ಸಮುದಾಯ ಭವನದವರೆಗೂ ಕರೆ ತರಲಾಯಿತು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ, ಹೋಬಳಿ ಘಟಕಗಳ ಅಧ್ಯಕ್ಷರು ಎಚ್.ಬಿ ಸಿದ್ದೋಜಿರಾವ್, ಎಚ್.ಸಿದ್ದಪ್ಪ, ಎಚ್.ಆರ್ ತೀರ್ಥಪ್ಪ ಇದ್ದರು.
ಫೋಟೊ: ಡಿ೧೪-ಬಿಡಿವಿಟಿ
ಭದ್ರಾವತಿ ನ್ಯೂಟೌನ್, ಮಹಾತ್ಮಗಾಂಧಿ ಉದ್ಯಾನವನದ ಮುಂಭಾಗ, ಶ್ರೀ ರಾಮ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ತಾಲೂಕು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನ ಸಾಹಿತಿ ಡಾ. ಗಜಾನನ ಶರ್ಮ ಉದ್ಘಾಟಿಸಿದರು.
ಫ್ಯಾನೆಲ್ಗೆ....ಫೋಟೊ: ಡಿ೧೪-ಬಿಡಿವಿಟಿ(ಎ)
ಭದ್ರಾವತಿಯಲ್ಲಿ ತಾಲೂಕು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷ ವೈದ್ಯ ಸಾಹಿತಿ ಡಾ. ಕೃಷ್ಣ ಎಸ್ ಭಟ್ ದಂಪತಿಯನ್ನು ಕೆಎಸ್ಆರ್ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಕನ್ನಡದ ರಥದಲ್ಲಿ ಮೆರವಣಿಗೆ ಮೂಲಕ ಸಮ್ಮೇಳನ ಸ್ಥಳ ಶ್ರೀರಾಮ ಸಮುದಾಯ ಭವನದವರೆಗೂ ಕರೆ ತರಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.