ಮೊದಲ ದಿನವೇ ಜಾತಿ ಗಣತಿ ಫಜೀತಿ : ಕೈಕೊಟ್ಟ ಆ್ಯಪ್

KannadaprabhaNewsNetwork |  
Published : Sep 23, 2025, 01:03 AM IST
ಮಂಡ್ಯದಲ್ಲಿ ಗಣತಿ | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಮೊದಲ ದಿನವಾದ ಸೋಮವಾರ ರಾಜ್ಯದ ಹಲವೆಡೆ ಸಮೀಕ್ಷಾ ಆ್ಯಪ್ ಕೈಕೊಟ್ಟ ಪರಿಣಾಮ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕರು ಪರದಾಡುವಂತಾಯಿತು.

 ಬೆಂಗಳೂರು:  ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಮೊದಲ ದಿನವಾದ ಸೋಮವಾರ ರಾಜ್ಯದ ಹಲವೆಡೆ ಸಮೀಕ್ಷಾ ಆ್ಯಪ್ ಕೈಕೊಟ್ಟ ಪರಿಣಾಮ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕರು ಪರದಾಡುವಂತಾಯಿತು.ಗಣತಿ ಕಾರ್ಯಕ್ಕಾಗಿ ಮಡಿಕೇರಿಯ ಬಿಆರ್‌ಸಿ ಕೇಂದ್ರದಲ್ಲಿ ಜಮಾವಣೆಗೊಂಡ ಶಿಕ್ಷಕರ ಕೈಗೆ ಸೋಮವಾರ ಗಣತಿಯ ಪಟ್ಟಿ ತಲುಪಿರಲಿಲ್ಲ. ಯಾವ ಊರಿಗೆ ಹೋಗಬೇಕು, ಯಾವ ಮನೆಗೆ ಹೋಗಬೇಕು ಎಂಬ ಮಾಹಿತಿಯಿಲ್ಲದೆ ಶಿಕ್ಷಕರು ಪರದಾಡಿದರು. ಸಮೀಕ್ಷಾ ಆ್ಯಪ್ ಕೂಡ ಡೌನ್‌ಲೋಡ್ ಆಗಲಿಲ್ಲ. ಇದರಿಂದ ಶಿಕ್ಷಕರು ಸಮಸ್ಯೆ ಅನುಭವಿಸುವಂತಾಯಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮೊದಲ ದಿನ ಸಮೀಕ್ಷೆ ಮಾಡುವ ಶಿಕ್ಷಕರ ಮೊಬೈಲ್‌ಗಳಿಗೆ ಆ್ಯಪ್ ಜೋಡಣೆ, ಅವರಿಗೆ ಸಮೀಕ್ಷೆಯ ಮನೆಗಳನ್ನು ನಿಗದಿಗೊಳಿಸುವ ಕೆಲಸವಷ್ಟೇ ಸಾಧ್ಯವಾಗಿದೆ. ಸಮೀಕ್ಷೆಗೆ ನಿಯೋಜಿಸಲ್ಪಟ್ಟಿರುವ ಶಿಕ್ಷಕರಿಗೆ ಮನೆ, ಮನೆ ಭೇಟಿಗೆ ಸಾಧ್ಯವಾಗಿಲ್ಲ. ಮಂಗಳವಾರದಿಂದ ಅಧಿಕೃತ ಸಮೀಕ್ಷೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಉಡುಪಿಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದ ಘಟನೆ ಕೂಡ ನಡೆಯಿತು. 

ಮೈಸೂರಿನಲ್ಲಿ ಸರ್ವರ್‌ ಡೌನ್‌ನಿಂದಾಗಿ ಸಮೀಕ್ಷಾ ಆ್ಯಪ್‌ ಡೌನ್‌ಲೋಡ್‌ ಆಗದೆ ಸಮಸ್ಯೆ ಎದುರಾಯಿತು. ಇದರಿಂದಾಗಿ ಆ್ಯಪ್‌ನಲ್ಲಿ ಮಾಹಿತಿ ಅಪ್‌ಡೇಟ್‌ ಆಗುತ್ತಿರಲಿಲ್ಲ. ಇದರಿಂದಾಗಿ ಕೇವಲ ಒಬ್ಬರ ಮನೆ ಸಮೀಕ್ಷೆ ಮಾತ್ರ ಸಾಧ್ಯವಾಗಿದೆ. ಹುಬ್ಬಳ್ಳಿಯಲ್ಲಿ ಬೆಳಗ್ಗೆ ಸರ್ವರ್ ಸಮಸ್ಯೆ ಎದುರಾಯಿತು. ಮಧ್ಯಾಹ್ನದ ವೇಳೆಗೆ ಪರಿಣಿತರು ಸಮಸ್ಯೆ ಸರಿಪಡಿಸಿದರು.

ಯಾದಗಿರಿಯಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಮಾಹಿತಿ ಅಪ್‌ಲೋಡ್‌ ಮಾಡಲು ಆಗುತ್ತಿಲ್ಲ. ಹೀಗಾಗಿ, ಸಿಬ್ಬಂದಿ ಮನೆ, ಮನೆಗೆ ತಿರುಗಿ ವಾಪಸ್‌ ಬಂದಿದ್ದು, ಸೋಮವಾರ ಸರ್ವೇ ಆರಂಭವಾಗಿಲ್ಲ. ಹಾವೇರಿಯಲ್ಲಿ ಮನೆಗಳಲ್ಲಿ ಸಮೀಕ್ಷೆಗಾಗಿ ಅಂಟಿಸಿದ ಸ್ಟಿಕ್ಕರ್‌ ನಲ್ಲಿನ ಯುಎಚ್‌ಐಡಿ ನಂಬರ್ ನ್ನು ಆ್ಯಪ್‌ನಲ್ಲಿ ಹಾಕಿದಾಗ ಓಪನ್ ಆಗ್ತಿರಲಿಲ್ಲ. ಹೀಗಾಗಿ, ಸರ್ವೇ ಕಾರ್ಯ ವಿಳಂಬವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಸರ್ವೇ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ. 

ರಾಯಚೂರಿನಲ್ಲಿ ಸಮೀಕ್ಷೆಗೆ ಹೋದ ಸಿಬ್ಬಂದಿ, ಆ್ಯಪ್‌ನಲ್ಲಿ ಇರುವ ಮಾಹಿತಿಗೂ, ವಾಸ್ತವದ ಮಾಹಿತಿಗೂ ತಾಳೆಯಾಗದೆ ವಾಪಸ್‌ ಬಂದ ಘಟನೆ ನಡೆಯಿತು. ಕೊಪ್ಪಳದಲ್ಲಿ ಶಶಿಧರ ಸವಡಿ ಎಂಬುವರ ಮನೆಯಲ್ಲಿ ಸರ್ವೇಗೆ ಚಾಲನೆ ನೀಡಿದ ಜಿಲ್ಲಾಧಿಕಾರಿಯವರೇ ಕುಟುಂಬ ಸದಸ್ಯರ ಮಾಹಿತಿ ದಾಖಲಿಸಲಾಗದೆ ಪರದಾಡಿದ ಪ್ರಸಂಗ ನಡೆಯಿತು.

PREV
Read more Articles on

Recommended Stories

ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ
ಕಷ್ಟ-ಸುಖ ಸಮನಾಗಿ ಸ್ವೀಕರಿಸಿದರೆ ಯಶಸ್ಸು ಸಾಧ್ಯ: ಅಮರೇಶ್ವರ ದೇವರು