ಜಿಪಂ ಚುನಾವಣೆ ಹಿನ್ನೆಲೆಯಲ್ಲಿ ಜಾತಿ ಜನಗಣತಿ ಗೊಂದಲ: ಸುಧಾಕರ ಶೆಟ್ಟಿ

KannadaprabhaNewsNetwork | Updated : Apr 16 2025, 12:40 AM IST

ಸಾರಾಂಶ

ಚಿಕ್ಕಮಗಳೂರು, ಜಿಪಂ ಹಾಗೂ ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾದ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಹೊರಟಂತಿದೆ. ಈ ಮೂಲಕ ಸಮಾಜಗಳ ನಡುವೆ ಕಂದಕ ಸೃಷ್ಟಿ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಅಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಪಂ ಹಾಗೂ ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾದ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಹೊರಟಂತಿದೆ. ಈ ಮೂಲಕ ಸಮಾಜಗಳ ನಡುವೆ ಕಂದಕ ಸೃಷ್ಟಿ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಅಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 11 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ಮಾಡಿದ ಜಾತಿ ಜನಗಣತಿ ವರದಿಯನ್ನು ಇದೀಗ ಬಿಡುಗಡೆ ಮಾಡಲು ಹೊರಟಿದ್ದಾರೆ. ಈ ವರದಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.

ಜಾತಿ ಜನಗಣತಿಗಾಗಿ 2014ರ ಏಪ್ರಿಲ್ ನಲ್ಲಿ ಕಾಂತರಾಜು ಅವರನ್ನು ನೇಮಕ ಮಾಡಲಾಯಿತು. ಇದಾಗಿ ಕೇವಲ 9 ತಿಂಗಳಲ್ಲಿಯೇ ಅವರು ಜಾತಿ ಜನಗಣತಿ ವರದಿ ನೀಡಿದ್ದಾರೆ. 9 ತಿಂಗಳಲ್ಲಿ ವೈಜ್ಞಾನಿಕ ವರದಿ ನೀಡಲು ಸಾಧ್ಯವೇ ಇಲ್ಲ. ಜನಗಣತಿ ಮಾದರಿಯಲ್ಲೇ ಜಾತಿ ಜನಗಣತಿಯನ್ನು ಮಾಡಬೇಕಿತ್ತು. ಆದರೆ, ಇದ್ಯಾವುದನ್ನು ಮಾಡದೆ ತಮಗೆ ಬೇಕಾ ದಂತೆ ವರದಿ ಸಿದ್ಧಪಡಿಸಿದಂತೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

2015ರಲ್ಲಿಯೇ ಕಾಂತರಾಜು ಸಿದ್ಧಪಡಿಸಿದ್ದ ಜಾತಿ ಜನಗಣತಿ ವರದಿ ಅಂದಿನ ಕಾಂಗ್ರೆಸ್ ಸರ್ಕಾರದ ಕೈ ಸೇರಿತ್ತು. 2018 ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಹೀಗಿರುವಾಗ ಆ ಅವಧಿಯಲ್ಲಿ ಏಕೆ ವರದಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಇದೀಗ ತಮ್ಮ ಪಕ್ಷ ಹಾಗೂ ಸರ್ಕಾರದಲ್ಲಿರುವ ಗೊಂದಲಗಳನ್ನು ಮುಚ್ಚಿ ಕೊಳ್ಳಲು ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.--- ಬಾಕ್ಸ್‌ --3.52 ಲಕ್ಷ ಬಂಟರಿದ್ದಾರಂತೆ

ರಾಜ್ಯದಲ್ಲಿ ಕೇವಲ 3.52 ಲಕ್ಷ ಬಂಟ ಸಮುದಾಯದವರಿದ್ದಾರೆ ಎಂದು ಜಾತಿ ಜನಗಣತಿಯಲ್ಲಿ ಹೇಳಲಾಗಿದೆ. ನನ್ನ ಮಾಹಿತಿ ಪ್ರಕಾರ ರಾಜ್ಯದಲ್ಲಿ 12 ಲಕ್ಷಕ್ಕೂ ಅಧಿಕ ಬಂಟ ಸಮುದಾಯದವರಿದ್ದಾರೆ ಎಂದು ಸುಧಾಕರ ಶೆಟ್ಟಿ ತಿಳಿಸಿದರು.

ಜಾತಿ ಜನಗಣತಿಯನ್ನು ಹೇಗೆ ಮಾಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ನನ್ನ ಕುಟುಂಬ ಹಾಗೂ ಸಂಬಂಧಿಕರ ಮನೆಯಲ್ಲಿ ಯೂ ಯಾವುದೇ ಮಾಹಿತಿ ಪಡೆದಿಲ್ಲ. ಹೀಗಿರುವಾಗ ಯಾವ ರೀತಿಯಲ್ಲಿ ಜಾತಿ ಜನಗಣತಿ ಮಾಡಿದ್ದಾರೆ ಎಂಬುದನ್ನು ಸರ್ಕಾರ ಕೂಡಲೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ರಾಜ್ಯದಲ್ಲಿ 7.12 ಕೋಟಿ ಜನರಿದ್ದಾರೆ. ಆದರೆ, ಜಾತಿ ಜನಗಣತಿಯಲ್ಲಿ 5.98 ಕೋಟಿ ಜನಸಂಖ್ಯೆ ತೋರಿಸ ಲಾಗಿದೆ. ಉಳಿದ 1.40 ಕೋಟಿ ಜನರನ್ನು ಜಾತಿ ಜನಗಣತಿಯಿಂದ ಏಕೆ ಕೈ ಬಿಡಲಾಗಿದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ 9 ಲಕ್ಷಕ್ಕೂ ಅಧಿಕ ಬಿಲ್ಲವರಿದ್ದಾರೆ. ಆದರೆ, ವರದಿಯಲ್ಲಿ 4 ಲಕ್ಷ ಜನ ಎಂದು ನಮೂದಿಸಲಾಗಿದೆ. ಈ ವರದಿ ಬಿಡುಗಡೆಯಾದರೆ ಎಲ್ಲಾ ಜಾತಿಯವರಿಗೂ ಅನ್ಯಾಯವಾಗಲಿದೆ. ಹೀಗಾಗಿ ಈ ವರದಿಯನ್ನು ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ಒತ್ತಾಯಿಸಿದರು.

---ಪೋಟೋ ಫೈಲ್‌ ನೇಮ್‌ 15 ಕೆಸಿಕೆಎಂ 4

Share this article