ಜಾತಿಗಣತಿ 5ದಿನ ವಿಸ್ತರಣೆ : ಅ.12ರವರೆಗೆ ಶಾಲಾ ಅವಧಿ ಬದಲು

KannadaprabhaNewsNetwork |  
Published : Oct 07, 2025, 01:03 AM ISTUpdated : Oct 07, 2025, 05:22 AM IST
ಜಾತಿ ಗಣತಿ | Kannada Prabha

ಸಾರಾಂಶ

 ಸಮೀಕ್ಷೆಗೆ ಈ ಹಿಂದೆ ನಿಗದಿ ಮಾಡಿದ್ದ ಅ.7ರ ಗಡುವನ್ನು ಐದು ದಿನಗಳ ಕಾಲ ಅಂದರೆ ಅ.12ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.   ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಗೆ ತೀವ್ರ ಆಗ್ರಹ ವ್ಯಕ್ತವಾದ ಬೆನ್ನಲ್ಲೇ   ವಿಸ್ತರಣೆ  - ಗಣತಿ ಶೇ.80ರಷ್ಟು   ಪೂರ್ಣ ಹಿನ್ನೆಲೆ  5ದಿನ ವಿಸ್ತರಣೆ

 ಬೆಂಗಳೂರು :  ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಈ ಹಿಂದೆ ನಿಗದಿ ಮಾಡಿದ್ದ ಅ.7ರ ಗಡುವನ್ನು ಐದು ದಿನಗಳ ಕಾಲ ಅಂದರೆ ಅ.12ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಮೀಕ್ಷೆಗೆ ಈ ಮೊದಲು ನಿಗದಿಪಡಿಸಿದ್ದ ಗಡುವು ಮಂಗಳವಾರಕ್ಕೆ ಮುಕ್ತಾಯಗೊಳ್ಳಲಿದ್ದು, ಅ.6ರವರೆಗೆ ಜಿಬಿಎ ಹೊರತುಪಡಿಸಿ 1.15 ಕೋಟಿ ಕುಟುಂಬಗಳ ಅಂದರೆ ಶೇ.80.39ರಷ್ಟು ಗಣತಿಯಷ್ಟೇ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಗೆ ತೀವ್ರ ಆಗ್ರಹ ವ್ಯಕ್ತವಾದ ಬೆನ್ನಲ್ಲೇ ಸಮೀಕ್ಷೆಯ ಗಡುವನ್ನು ಅ.12 ರವರೆಗೆ ವಿಸ್ತರಣೆ ಮಾಡಲಾಗಿದೆ.

ಇದಕ್ಕಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ತರಗತಿಗಳ ಸಮಯವನ್ನೂ ಬದಲಿಸಿದ್ದು, ಅ.8 ರಿಂದ ಅ.12 ರವರೆಗೆ ಶಾಲಾ ತರಗತಿಗಳನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಿರ್ವಹಿಸಬೇಕು. ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯ ನಿರ್ವಹಿಸುವುದು. ಸಮೀಕ್ಷೆಯನ್ನು ರಜಾ ದಿನಗಳಲ್ಲೂ ಕೈಗೊಂಡು ಅ.12ರ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಸೂಚನೆ ಮೇರೆಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಇನ್ನು ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಅ.4 ರಿಂದ ಸಮೀಕ್ಷೆ ಶುರುವಾಗಿದ್ದು, ದಸರಾ ರಜೆಗಳು ಮುಗಿದಿರುವ ಹಿನ್ನೆಲೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲೂ ಅ.8 ರಿಂದ ಅ.24 ರವರೆಗೆ ಬೆಳಗ್ಗೆ 8 ರಿಂದ 1 ಗಂಟೆವರೆಗೆ ತರಗತಿಗಳನ್ನು ನಡೆಸಬೇಕು. ಬಳಿಕದ ಅವಧಿಯಲ್ಲಿ ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಜಿಬಿಎ ವ್ಯಾಪ್ತಿಯಲ್ಲಿ ಅ.24ರ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

1.15 ಕೋಟಿ ಕುಟುಂಬಗಳ ಸಮೀಕ್ಷೆ ಪೂರ್ಣ:

ಜಿಬಿಎ ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ ಒಟ್ಟು 1.43 ಕೋಟಿ ಕುಟುಂಬಗಳ ಸಮೀಕ್ಷೆ ಗುರಿಯಡಿ ಭಾನುವಾರದ ವರೆಗೆ 1,10 ಕೋಟಿ ಕುಟುಂಬಗಳಿಂದ ದತ್ತಾಂಶ ಸಂಗ್ರಹ ಪೂರ್ಣಗೊಂಡಿತ್ತು. ಸೋಮವಾರ 5,52,407 ಕುಟುಂಬಗಳ ಸಮೀಕ್ಷೆ ಮುಗಿದಿದೆ. ಒಟ್ಟಾರೆ 1,15,56,752 ಕುಟುಂಬದ ಸಮೀಕ್ಷೆ ಮುಕ್ತಾಯಗೊಂಡಿದ್ದು, ಈ ಮೂಲಕ 4,32,74,823 ಮಂದಿಯ ದತ್ತಾಂಶವನ್ನು ಯಶಸ್ವಿಯಾಗಿ ಸಂಗ್ರಹಿಸಿದಂತಾಗಿದೆ.

ರಾಜ್ಯಾದ್ಯಂತ ಸೆ.22 ರಂದು ಸಮೀಕ್ಷೆ ಶುರುವಾದರೂ ಗ್ರೇಟರ್ ಬೆಂಗಳೂರು ಆಡಳಿತ ವ್ಯಾಪ್ತಿಯಲ್ಲಿ ಅ.4ರಿಂದ ಸಮೀಕ್ಷೆಗೆ ಚಾಲನೆ ದೊರಕಿದೆ.

ಒಟ್ಟು 39,83,335 ಕುಟುಂಬಗಳ ಪೈಕಿ 2,60,900 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಸೋಮವಾರ ಒಂದೇ ದಿನ 1,36,277 ಕುಟುಂಬಗಳ ದತ್ತಾಂಶ ಸಂಗ್ರಹ ಪ್ರಕ್ರಿಯೆ ಮುಗಿದಿದೆ.

ಹೆಚ್ಚುವರಿ ಕಾಲಾವಕಾಶ: ಡಾ.ಕೆ.ಎ.ದಯಾನಂದ್‌

ಜಿಬಿಎ ಹೊರತುಪಡಿಸಿ ರಾಜ್ಯದಲ್ಲಿ ಸಮೀಕ್ಷೆ ಶೇ.80 ರಷ್ಟು ಪ್ರಗತಿ ಕಂಡಿದೆ. ಆದರೆ ವಾಣಿಜ್ಯ ಕಟ್ಟಡ, ತೋಟದ ಮನೆ, ಯಾರೂ ವಾಸವಿರದ ಮನೆಗಳನ್ನೂ ಸಮೀಕ್ಷೆಗೆ ಗಣನೆಗೆ ತೆಗೆದುಕೊಳ್ಳಲಾಗಿದೆ. ಇವುಗಳನ್ನು ಕೈಬಿಡಲು ಅವಕಾಶ ನೀಡಿದ್ದು, ಶೇಕಡಾವಾರು ಸಮೀಕ್ಷಾ ಪ್ರಮಾಣ ಹೆಚ್ಚಾಗಬಹುದು. ಆದರೂ ಸಮೀಕ್ಷೆಗೆ ಯೋಗ್ಯವಾದ ಯಾವುದೇ ಮನೆಯೂ ಸಮೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಹೀಗಾಗಿ ಅ.12ರವರೆಗೆ ಶಾಲಾ ಕರ್ತವ್ಯದ ಜತೆಗೆ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ್ ಹೇಳಿದ್ದಾರೆ.

ಬೆಂಗಳೂರಿಗೆ ಅ.24ರ ಗಡುವು

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಅ.4 ರಿಂದ ಸಮೀಕ್ಷೆ ಶುರುವಾಗಿದ್ದು, ಅಭಿಯಾನ ಪೂರ್ಣಕ್ಕೆ ಅ.24ರ ಗಡುವು ನೀಡಲಾಗಿದೆ. ಈಗಾಗಲೇ ದಸರಾ ರಜೆಗಳು ಮುಗಿದಿರುವ ಹಿನ್ನೆಲೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲೂ ಅ.8 ರಿಂದ ಅ.24 ರವರೆಗೆ ಬೆಳಗ್ಗೆ 8 ರಿಂದ 1 ಗಂಟೆವರೆಗೆ ತರಗತಿ ನಡೆಸಬೇಕು. ಬಳಿಕದ ಅವಧಿಯಲ್ಲಿ ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ

PREV
Read more Articles on

Recommended Stories

ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ
ಹಿಂದೂ ಸಮಾಜ ಸಂಘಟನೆಯೇ ಆರ್.ಎಸ್.ಎಸ್ ಗುರಿ: ರಾಘವೇಂದ್ರ ಕಾಗವಾಡ