ಗದಗ: ಮುಡಾ ಹಗರಣ ಮುಚ್ಚಿ ಹಾಕಲು ಹಾಗೂ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಸಿದ್ಧರಾಮಯ್ಯ ಜಾತಿ ಗಣತಿ ವಿಷಯ ಮುನ್ನೆಲೆಗೆ ತಂದಿದ್ದಾರೆ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಷರತ್ತು ಇಲ್ಲದೇ 14 ನಿವೇಶನ ಹಿಂದಿರುಗಿಸಿದ್ದಾರೆ. ಈ ಮೊದಲು ₹ 60 ಕೋಟಿ ಕೊಡಿ ನಿವೇಶನ ಕೊಡುತ್ತೇನೆ ಅಂತಿದ್ದರು. ಈಗ ಹಣ ಮತ್ತು ಬದಲಿ ನಿವೇಶನ ಯಾವುದನ್ನೂ ಕೇಳುತ್ತಿಲ್ಲ. ಈ ಹಗರಣದಿಂದ ಹೇಗಾದರೂ ಪಾರಾದರೆ ಸಾಕು ಅನ್ನೋ ಪರಿಸ್ಥಿತಿಗೆ ಬಂದಿದ್ದಾರೆ ಅದಕ್ಕಾಗಿ ಜಾತಿ ಗಣತಿ ವಿಷಯ ಚರ್ಚೆ ಮಾಡುತ್ತಿದ್ದಾರೆ.ಸರ್ಕಾರ ಬಿದ್ದರೆ ಬೀಳಲಿ, ಜಾತಿಗಣತಿ ಬಿಡುಗಡೆ ಮಾಡಿ ಎನ್ನುವ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತನ್ನನ್ನು ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಬಿ.ಕೆ. ಹರಿಪ್ರಸಾದ್‌ಗೆ ಸಿಎಂ ಸಿದ್ದರಾಮಯ್ಯ ಮೇಲೆ ಭಯಂಕರ ಸಿಟ್ಟಿದೆ. ಈ ನೆಪದ ಮೇಲಾದರೂ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸುವ ತಂತ್ರ ಹರಿಪ್ರಸಾದ್ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿಳಿವಳಿಕೆ ಮತ್ತು ನೈತಿಕತೆ ಇದ್ದರೆ ಇಷ್ಟರೊಳಗಾಗಲೇ ರಾಜೀನಾಮೆ ಕೊಡಬೇಕಿತ್ತು ಅದನ್ನು ಬಿಟ್ಟು ಅನಾವಶ್ಯಕವಾಗಿ ಏನೇನೋ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಳಿಸಲು ಈಗ ಕಾಂಗ್ರೆಸ್ ಪಕ್ಷದಲ್ಲಿ ಪ್ರಯತ್ನಗಳು ನಡೆದಿವೆ. ಇಳಿಸಬೇಕು ಅನ್ನೋ ತಂತ್ರದಿಂದ ಧ್ವನಿಗಳು ಏಳುತ್ತಿವೆ ಇದರ ಪರಿಣಾಮ ಸಧ್ಯದಲ್ಲಿ ತಿಳಿಯಲಿದೆ.ನನ್ನ ಧರ್ಮಪತ್ನಿಯನ್ನು ಬೀದಿಗೆ ತರುವ ಕೆಲಸ ಮಾಡುತ್ತಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಪಾಪ ಆ ಹೆಣ್ಣು ಮಗಳು ಯಾರ ಉಸಾಬರಿಯೂ ಇಲ್ಲದೇ ತಮ್ಮಷ್ಟಕ್ಕೆ ತಾವು ಇದ್ದರು. ಅವರ ಸಹೋದರನ ಹೆಸರಿನಲ್ಲಿ ಸೇಲ್ ಡೀಡ್ ಮಾಡಿಸುವುದು ಸೇರಿದಂತೆ ಇನ್ನಿತರ ವಿಷಯ ಕೆದಕುತ್ತ ಹೋದರೆ ಅದು ಮತ್ತೊಂದು ಹಗರಣವಾಗುತ್ತದೆ ಈ ವಿಷಯದಲ್ಲಿಯೂ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಕುರಿ ಕಾಯುವ ಮಗ ಎರಡು ಭಾರಿ ಸಿಎಂ ಆಗಿದ್ದಕ್ಕೆ ದ್ವೇಷ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಜಗದೀಶ ಶೆಟ್ಟರ್, ಮುಡಾ ಹಗರಣ ಬಾರದಿದ್ದರೆ ನಿಮ್ಮನ್ನು ಸಿಎಂ ಸ್ಥಾನದಿಂದ ಯಾಕೆ ಇಳಿಸಲು ಪ್ರಯತ್ನ ನಡೆಯುತ್ತಿದ್ದವು ಹೇಳಿ, ಸ್ವಯಂಕೃತ ಅಪರಾಧ ಮಾಡಿಕೊಂಡು ಈಗ ಅದಕ್ಕೆ ಜಾತಿ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜಾತಿ ಬಣ್ಣ ಹಚ್ಚಿ ಅದರ ಲಾಭ ಪಡೆಯುವ ನಿಮ್ಮ ತಂತ್ರಗಾರಿಕೆ ಜನರು ಗಮನಿಸುತ್ತಿದ್ದಾರೆ. ಇದಕ್ಕೆ ಯಾವ ಮನ್ನಣೆಯೂ ಸಿಗುವುದಿಲ್ಲ ಎಂದರು.