ಶ್ರೀರಂಗಪಟ್ಟಣ : ಜನಮನ ಸೆಳೆದ ದಸರಾ ಅಂಗವಾಗಿ ಏರ್ಪಡಿಸಿದ್ದ 52 ಜೊತೆ ಕಾಟಾ ಕುಸ್ತಿ ಪಂದ್ಯಾವಳಿ

KannadaprabhaNewsNetwork | Updated : Oct 07 2024, 10:36 AM IST

ಸಾರಾಂಶ

ಶ್ರೀರಂಗಪಟ್ಟಣ, ತಾಲೂಕಿನ ಬಾಬುರಾಯನಕೊಪ್ಪಲು, ಗಂಜಾಂ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಬೆಳಗಾಂ ಸೇರಿದಂತೆ ಇತರೆಡೆಗಳಿಂದ ಸುಮಾರು 52 ಕ್ಕೂ ಹೆಚ್ಚು ಕಾಟಾ ಕುಸ್ತಿ ಪೈಲ್ವಾನರು ಆಗಮಿಸಿದ್ದರು.  

 ಶ್ರೀರಂಗಪಟ್ಟಣ : ದಸರಾ ಅಂಗವಾಗಿ ಏರ್ಪಡಿಸಿದ್ದ 52 ಜೊತೆ ಕಾಟಾ ಕುಸ್ತಿ ಪಂದ್ಯಾವಳಿ ಜನಮನ ಸೆಳೆದರೂ ಕುಸ್ತಿ ಪಟುಗಳಿಗೆ ಮೂಲ ಸೌಕರ್ಯದ ಕೊರತೆ ಕಾಡಿತು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ದಸರಾ ನಾಡ ಕುಸ್ತಿ ಪಂದ್ಯಾವಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಪೈಲ್ವಾನರ ಬೆನ್ನುತಟ್ಟುವ ಮೂಲಕ ಚಾಲನೆ ನೀಡಿದರು.

ಶ್ರೀರಂಗಪಟ್ಟಣ, ತಾಲೂಕಿನ ಬಾಬುರಾಯನಕೊಪ್ಪಲು, ಗಂಜಾಂ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಬೆಳಗಾಂ ಸೇರಿದಂತೆ ಇತರೆಡೆಗಳಿಂದ ಸುಮಾರು 52 ಕ್ಕೂ ಹೆಚ್ಚು ಕಾಟಾ ಕುಸ್ತಿ ಪೈಲ್ವಾನರು ಆಗಮಿಸಿದ್ದರು.

ಗೆಲುವಿಗಾಗಿ ಕೆಮ್ಮಣ್ಣು ಮಟ್ಟಿ ಮೇಲೆ ನಿಂತ ಪೈಲ್ವಾನರು ಸೆಣಸಾಡಿ ತೋಳು, ತೊಡೆ ತಟ್ಟಿ ಎದುರಾಳಿಯ ಮೈ ಮೇಲೆ ಬಿದ್ದರು. ಕೆಲವು ಪೈಲ್ವಾನರು ಅಂತಿಮವಾಗಿ ಗೆಲುವು ಸಾಧಿಸಿದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಗ್ರಾಮೀಣ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಲು ದಸರಾದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಈ ಹಿಂದೆ ಇದ್ ಕುಸ್ತಿ ಪರಂಪರೆಯನ್ನು ಪೈನ್ವಾನರುಗಳು ಜೀವಂತವಾಗಿ ಉಳಿಸಲು ಮುಂದಾಗಬೇಕು ಎಂದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಅಡಿಷನಲ್ ಎಸ್‌ಪಿ ಸಿ.ಇ ತಿಮ್ಮಯ್ಯ, ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ಡಿವೈಎಸ್ಪಿ ಮುರಳಿ, ತಾಪಂ ಇಒ ವೇಣು, ಮುಖ್ಯಾಧಿಕಾರಿ ಎಂ.ರಾಜಣ್ಣ, ವಾರ್ತಾ ಇಲಾಖೆ ಅಧಿಕಾರಿ ನಿರ್ಮಲಾ ಸೇರಿದಂತೆ ಹೆಸರಾಂತ ಪೈಲ್ವಾನರುಗಳು ಇದ್ದರು.

ಕುಸ್ತಿ ಪಟುಗಳಿಗೆ ಮೂಲಸೌಕರ್ಯದ ಕೊರತೆ:

ಪಂದ್ಯಾವಳಿ ವೇಳೆ ಕುಸ್ತಿ ಪಟುಗಳು ತಮ್ಮ ಬಟ್ಟೆ ಬದಲಾಯಿಸಿಕೊಳ್ಳಲು ಸೂಕ್ತ ಮೂಲ ಸೌಕರ್ಯ ಕಲ್ಪಿಸದ ಕಾರಣ ಕುಸ್ತಿ ಪಟುಗಳು ಬಯಲಿನಲ್ಲೆ ತಮ್ಮ ಬಟ್ಟೆ ಬದಲಾಯಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು.

ಚಿಕ್ಕ ಮಕ್ಕಳಿಂದ ವಯಸ್ಕರ ವರೆಗೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಿಕ್ಕಮಕ್ಕಳು ಬಯಲಿನಲ್ಲೇ ಬಟ್ಟೆ ಬದಲಾಯಿಸಿಕೊಂಡರೆ, ದೊಡ್ಡವರು ತಮ್ಮ ಪೋಷಕರು ಹಾಗೂ ಸಹ ಪಟುಗಳಿಂದ ಸುತ್ತುವರಿಸಿಕೊಂಡು ಬಟ್ಟೆ ಬದಲಾಯಿಸಿಕೊಂಡರು. ಮತ್ತೆ ಕೆಲವರು ಟ್ರಾಕ್ಟರ್, ಕಾಂಪೌಂಡ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಬಟ್ಟೆ ಬದಲಾಯಿಸಿಕೊಳ್ಳುವ ಪರಿಸ್ಥಿತಿ ಎದುರಾಯಿತು.

ರಾಜರ ಕಾಲದಿಂದಲೂ ಸಹ ಕುಸ್ತಿಗೆ ತನ್ನದೆ ಆದ ಮೌಲ್ಯ, ಗೌರವವಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಕರೆತಂದು ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ. ದಸರಾ ಆಚರಣೆಯಲ್ಲಿ ಸ್ಥಳೀಯವಾಗಿ ಯಾವುದೇ ಸಮಿತಿಗಳನ್ನು ರಚಿಸದೆ ಏಕಾಏಕಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಜವಾಬ್ದಾರಿ ವಹಿಸಿದ್ದರಿಂದ ಈ ರೀತಿ ಅಪಮಾನವಾಗಿದೆ ಎಂದು ಹೆಸರೇಳದ ಪೈಲ್ವಾನರೊಬ್ಬರು ಆರೋಪಿಸಿರು.

Share this article