ಕನ್ನಡಪ್ರಭ ವಾರ್ತೆ ಮಂಡ್ಯಜಾತಿ ಹೆಸರಿನಲ್ಲಿ ಹಿಂದೂಗಳನ್ನು ವಿಭಜನೆ ಮಾಡುವುದು ಜಾತಿ ಗಣತಿ ಹಿಂದಿನ ಕಾಂಗ್ರೆಸ್‌ನ ಷಡ್ಯಂತ್ರವಾಗಿದೆ ಎಂದು ಹಿಂದೂ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಅವರಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗಸೇನೆ ವತಿಯಿಂದ ಆಯೋಜಿಸಿದ್ದ ಮಂಡ್ಯ ಹಿಂದೂ ಮಹೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಹಿಂದೂಗಳನ್ನು ವೀರಶೈವ, ಲಿಂಗಾಯತ, ಒಕ್ಕಲಿಗ, ಕುರುಬ, ಕುಂಬಾರ ಹೀಗೆ ಜಾತಿ ಹೆಸರಿನಲ್ಲಿ ಗುರುತಿಸಿ ವಿಭಜಿಸಲಾಗುತ್ತಿದೆ. ಮುಸಲ್ಮಾನರಲ್ಲಿ ಅನೇಕ ಜಾತಿಗಳಿವೆ. ಅವರನ್ನು ಜಾತಿ ಹೆಸರಿನಲ್ಲಿ ಗುರುತಿಸುವ ಪ್ರಯತ್ನಕ್ಕೆ ಯಾರೊಬ್ಬರೂ ಮುಂದಾಗಲಿಲ್ಲ. ಅವರಲ್ಲಿರುವ ಎಲ್ಲಾ ಜಾತಿಯವರನ್ನು ಒಟ್ಟಾಗಿ ಮುಸಲ್ಮಾನರು ಎಂದು ಗುರುತಿಸುತ್ತಾ ಹಿಂದೂಗಳನ್ನು ಒಡೆದು ಅಳುತ್ತಿದ್ದಾರೆ ಎಂದು ಕಿಡಿಕಾರಿದರು.ಮುಸಲ್ಮಾನರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೋರಿಸುವುದರೊಂದಿಗೆ ಬಜೆಟ್‌ನಲ್ಲಿ ದೊಡ್ಡ ಪಾಲನ್ನು ನೀಡುವುದು ಕಾಂಗ್ರೆಸ್ ನೀತಿಯಾಗಿದೆ. ಇದು ಮುಸ್ಲಿಮರ ತುಷ್ಠೀಕರಣವಲ್ಲದೆ ಮತ್ತೇನು ಎಂದು ಟೀಕಿಸಿದರು.ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಕಾಲದಿಂದಲೂ ಮುಸ್ಲಿಮರ ತುಷ್ಠೀಕರಣ ನೀತಿ ಅನುಸರಿಸುತ್ತಾ ಬಂದಿದ್ದಾರೆ. ಉಜ್ಜಯಿನಿ ಜ್ಯೋತಿರ್ಲಿಂಗ ದೇಗುಲ ಮುಸ್ಲಿಮರ ದಾಳಿಗೊಳಗಾಗಿ ನಾಶವಾಗಿತ್ತು. ಅದರ ಪುನರ್‌ನಿರ್ಮಾಣಕ್ಕೆ ಹಣ ಕೇಳಿದಾಗ ಮುಸಲ್ಮಾನರಿಗೆ ನೋವಾಗುತ್ತದೆ ಎಂದು ನೆಹರು ಹಣ ಕೊಡಲಿಲ್ಲ. ಕೊನೆಗೆ ಹಿಂದೂಗಳೇ ಹಣ ಸಂಗ್ರಹಿಸಿ ದೇಗುಲ ಮರು ನಿರ್ಮಾಣ ಮಾಡಿದರು. ಅಂಬೇಡ್ಕರ್ ಕಾಶ್ಮೀರದಲ್ಲಿ 370ನೇ ವಿಧಿ ಜಾರಿಗೊಳಿಸುವುದನ್ನು ವಿರೋಧಿಸಿದ್ದರು. ಮುಸಲ್ಮಾನರ ತುಷ್ಠೀಕರಣಗೊಳಿಸುವ ಏಕೈಕ ಉದ್ದೇಶದಿಂದ ನೆಹರು ಜಾರಿಗೊಳಿಸಿದರು ಎಂದು ಹೇಳಿದರು.ಇಂದಿರಾಗಾಂಧಿ ಸಂವಿಧಾನ ಪೀಠಿಕೆಗೆ ಸೆಕ್ಯುಲರ್ ಪದವನ್ನು ಸೇರಿಸಿ ಅಂಬೇಡ್ಕರ್ ಸಂವಿಧಾನದ ಪೀಠಿಕೆಯನ್ನೇ ತಿದ್ದಿದರು. ಸಂವಿಧಾನಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು. 1913ರಲ್ಲಿ ಸ್ಥಾಪನೆಯಾದ ವಕ್ಫ್ ಕಾಯಿದೆಯನ್ನು 1951 ರಿಂದ 2013ರವರೆಗೆ ಬಲಗೊಳಿಸುತ್ತಲೇ ಬಂದರು.ಸಂವಿಧಾನ ವಿರೋಧಿಯಾಗಿದ್ದ ವಕ್ಫ್ ಕಾಯಿದೆಗೆ ತಿದ್ದುಪಡಿ ತಂದು ಎಲ್ಲರಿಗೂ ನ್ಯಾಯ ದೊರಕಿಸಲಾಗಿದೆ. ವಕ್ಫ್ ಕಾಯಿದೆಗೆ ತಿದ್ದುಪಡಿ ತಂದಿರುವುದರ ವಿರುದ್ಧ ಮುಸಲ್ಮಾನರನ್ನು ಬೀದಿಗಿಳಿದು ಬೆಂಕಿ ಹಚ್ಚುವಂತೆ ಪ್ರಚೋದಿಸುತ್ತಿದ್ದಾರೆ. ಇಂತಹ ಜನವಿರೋಧಿ ಕಾಯಿದೆಗೆ ಮುಸಲ್ಮಾನರೇ ಖುಷಿಪಡುತ್ತಿದ್ದರೂ ಅವರನ್ನು ದಾರಿತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಮುಂಬೈನಲ್ಲಿ ಮೇಲಿನ ದಾಳಿ ಪ್ರಕರಣದಲ್ಲಿ ಕಸಬ್ ಕೈಗೆ ಕೇಸರಿ ದಾರ ಕಟ್ಟಿಸಿ ಇದನ್ನು ಹಿಂದೂಗಳ ತಲೆಗೆ ಕಟ್ಟುವ ಪ್ರಯತ್ನ ನಡೆದಿತ್ತು. ಕಾಂಬಳೆ ಎಂಬ ಪೊಲೀಸ್ ಪೇದೆ ತನ್ನ ಪ್ರಾಣಾರ್ಪಣೆ ಮಾಡಿ ಕಸಬ್‌ನನ್ನು ಹಿಡಿದ ಪರಿಣಾಮ ಪಾಕಿಸ್ತಾನದ ಕುಕೃತ್ಯ ಬಯಲಾಯಿತು ಎಂದು ಹೇಳಿದರು.ಇದೀಗ ದಾಳಿಯ ರೂವಾರಿ ರಾಣಾನನ್ನು ಅಮೆರಿಕಾದಿಂದ ಭಾರತಕ್ಕೆ ಕರೆಸಿಕೊಂಡು ಇಲ್ಲಿನ ಕಾನೂನಿನೆದುರು ಮಂಡಿಯೂರುವಂತೆ ಮಾಡಿದ್ದಾರೆ. ಇದು ಭಾರತದ ತಾಕತ್ತು. ರಾಣಾನನ್ನು ಭಾರತಕ್ಕೆ ಕರೆತಂದಿರುವುದರಿಂದ ಹಲವು ರಾಜಕಾರಣಿಗಳಿಗೆ ನಡುಕ ಶುರುವಾಗಿದೆ. ದಾಳಿಗೆ ಪ್ರೇರಣೆ ನೀಡಿದವರು ಯಾರು, ಯಾರೆಲ್ಲಾ ನೆರವಾಗಿದ್ದರು ಎಂಬೆಲ್ಲಾ ಮಾಹಿತಿಗಳು ರಾಣಾ ಬಳಿ ಇರುವುದಾಗಿ ತಿಳಿಸಿದರು.ಪ್ರಸ್ತುತ ದಿನಗಳಲ್ಲಿ ಯಾವ ಮುಸಲ್ಮಾನ ದೇಶದಲ್ಲೂ ನೆಮ್ಮದಿ ಇಲ್ಲ. ಮುಸಲ್ಮಾನರಿರುವ ದೇಶಗಳಲ್ಲೇ ಮುಸಲ್ಮಾನರನ್ನು ಕಂಡರೆ ಸಹಿಸಲಾಗುತ್ತಿಲ್ಲ. ಸೌದಿ ಅರೇಬಿಯಾಕ್ಕೆ ಪ್ಯಾಲೆಸ್ತೇನಿಯರ ಬಗ್ಗೆ ಆಕ್ರೋಶವಿದೆ. ರಷ್ಯಾ, ಜರ್ಮನಿ, ಇಸ್ರೇಲ್ ದೇಶಗಳಿಗೂ ಮುಸಲ್ಮಾನರನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಬಾಂಗ್ಲಾ, ಪಾಕಿಸ್ತಾನ, ಅಪ್ಘಾನಿಸ್ತಾನದಲ್ಲೂ ಮುಸ್ಲಿಮರು ಮುಸಲ್ಮಾನರ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿರುವ ಮುಸಲ್ಮಾನರು ಇನ್ಯಾವ ರಾಷ್ಟ್ರದಲ್ಲಿ ಬದುಕಲು ಸಾಧ್ಯ ಎಂದು ಪ್ರಶ್ನಿಸಿದರು.ಶ್ರೀರಾಮನನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಅನುಯಾಯಿಗಳಿದ್ದಾರೆ. ಥೈಲ್ಯಾಂಡ್ ದೇಶದ ರಾಜ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಪ್ರಮಾಣವಚನ ಸ್ವೀಕರಿಸುತ್ತಾನೆ. ಕಾಂಬೋಡಿಯಾದಲ್ಲೂ ಶ್ರೀರಾಮನಿಗೆ ಮಹತ್ವದ ಸ್ಥಾನವಿದೆ. ಹಿಂದೂ ಧರ್ಮ ಸುಮಾರು 25 ಸಾವಿರ ವರ್ಷಗಳಷ್ಟು ಹಳೆಯದ್ದಾಗಿದ್ದು, ವಿಶ್ವದ ಜನರಿಗೆ ಬಟ್ಟೆ ಹಾಕುವುದನ್ನು ಕಲಿಸಿದ್ದು ಹಿಂದೂ ಧರ್ಮದವರು ಎಂದು ಎದೆತಟ್ಟಿಕೊಂಡು ಹೇಳಿದರು.ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವಿಶ್ವಹಿಂದೂಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮ, ಧರ್ಮಪ್ರಚಾರಕ ಸೂರ್ಯನಾರಾಯಣ ಜೀ, ಬಲರಾಮೇಗೌಡ, ರಾಘವೇಂದ್ರ, ದುರ್ಗಾವಾಹಿನಿ ಪ್ರಮುಖ್ ರೇಖಾ ಇತರರಿದ್ದರು.