ಜಾತಿಗಣತಿ ಪ್ರಧಾನಿ ಮೋದಿ ಬದ್ಧತೆಯ ಪ್ರತಿಬಿಂಬ: ಪಿ.ಸಿ.ಮೋಹನ್

KannadaprabhaNewsNetwork |  
Published : Jul 11, 2025, 01:47 AM IST
೧೦ಕೆಎಲ್‌ಆರ್-೮ಕೋಲಾರದ ಡೂಂಲೈಟ್ ವೃತ್ತದ ಓಂಶಕ್ತಿ ಫೌಂಡೇಷನ್ ಕಚೇರಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಜಾತಿ ಗಣತಿಯ ಸಾಮಾಜಿಕ ನ್ಯಾಯದ ಪೂರ್ವಭಾವಿ ಸಭೆಯಲ್ಲಿ ಸಂಸದ ಪಿ.ಸಿ.ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಕೆಲವು ರಾಜ್ಯಗಳು ಜಾತಿ ಗಣತಿಯ ಸಮೀಕ್ಷೆಗಳನ್ನು ನಡೆಸಿದ್ದರೂ, ಈ ಸಮೀಕ್ಷೆಗಳು ಪಾರದರ್ಶಕತೆ ಮತ್ತು ಉದ್ದೇಶದಲ್ಲಿ ಭಿನ್ನವಾಗಿವೆ.

ಕನ್ನಡಪ್ರಭ ವಾರ್ತೆ ಕೋಲಾರಜಾತಿಗಣತಿ ಜಾರಿಗೆ ತರುವುದು ರಾಷ್ಟ್ರ ಮತ್ತು ಸಮಾಜದ ಒಟ್ಟಾರೆ ಹಿತಾಸಕ್ತಿಗಳು ಮತ್ತು ಮೌಲ್ಯಗಳ ಕಡೆಗೆ ಪ್ರಸ್ತುತ ಮೋದೀಜೀಯವರ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಅಭಿಪ್ರಾಯಪಟ್ಟರು.ನಗರದ ಡೂಂಲೈಟ್ ವೃತ್ತದ ಓಂಶಕ್ತಿ ಫೌಂಡೇಷನ್ ಕಚೇರಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಜಾತಿ ಗಣತಿಯ ಸಾಮಾಜಿಕ ನ್ಯಾಯದ ಕುರಿತು ನಡೆದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಜಿಲ್ಲೆಗಳ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕೆಲವು ರಾಜ್ಯಗಳು ಜಾತಿ ಗಣತಿಯ ಸಮೀಕ್ಷೆಗಳನ್ನು ನಡೆಸಿದ್ದರೂ, ಈ ಸಮೀಕ್ಷೆಗಳು ಪಾರದರ್ಶಕತೆ ಮತ್ತು ಉದ್ದೇಶದಲ್ಲಿ ಭಿನ್ನವಾಗಿವೆ. ಕೆಲವನ್ನು ಸಂಪೂರ್ಣವಾಗಿ ರಾಜಕೀಯ ದೃಷ್ಟಿಕೋನದಿಂದ ನಡೆಸಲಾಗಿದ್ದು, ಸಮಾಜದಲ್ಲಿ ಅನುಮಾನಗಳನ್ನು ಸೃಷ್ಟಿಸಿವೆ. ಸರ್ಕಾರದ ಸೌಲಭ್ಯಗಳ ಸಮರ್ಪಕ ಹಂಚಿಕೆ, ಸಮಾನತೆ ಸಾಧನೆಗೆ ಈ ಜಾತಿ ಗಣತಿ ಅತಿ ಮುಖ್ಯವಾಗಿದ್ದು, ಮೋದಿಯವರ ಈ ದಿಟ್ಟ ಹಾಗೂ ಜನಸ್ನೇಹಿ ನಿರ್ಧಾರ ಚರಿತ್ರಾರ್ಹ ಎಂದು ತಿಳಿಸಿದರು.

ಈ ಎಲ್ಲಾ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ನಮ್ಮ ಸಾಮಾಜಿಕ ರಚನೆಯು ರಾಜಕೀಯ ಒತ್ತಡದಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಜಾತಿ ಗಣತಿಯನ್ನು ಪ್ರತ್ಯೇಕ ಸಮೀಕ್ಷೆಯಾಗಿ ನಡೆಸುವ ಬದಲು ಮುಖ್ಯ ಜನಗಣತಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಇದು ಸಮಾಜವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಗೊಳ್ಳುವುದನ್ನು ಮತ್ತು ದೇಶದ ಪ್ರಗತಿಯು ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.ಮಾಜಿ ವಿಧಾನಸಭಾ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ್ ಮಾತನಾಡಿ, ಮೋದಿ ದೂರದೃಷ್ಟಿ, ಜನಪರ ಕಾಳಜಿಗೆ ಸಾಟಿಯೇ ಇಲ್ಲ, ದೇಶ ರಕ್ಷಣೆಯಿಂದ ಓರ್ವ ಸಾಮಾನ್ಯ ವ್ಯಕ್ತಿಯ ಬದುಕಿನ ರಕ್ಷಣೆಯವರೆಗೂ ಅವರು ಆಲೋಚನೆ ಮಾಡುತ್ತಾರೆ ಎಂದರು.ಕೇಂದ್ರ ಸರ್ಕಾರದ ಜಾತಿ ಗಣತಿ ಸ್ವಾಗತಾರ್ಹವಾಗಿದ್ದು, ಈ ಹಿಂದೆ ಕೆಲವು ರಾಜ್ಯ ಸರ್ಕಾರಗಳಿಂದ ನಡೆದ ಜಾತಿ ಗಣತಿಗಳ ಕುರಿತು ಎದ್ದಿದ್ದ ವಿವಾದಗಳಿಗೆ ಇದು ಅಂತ್ಯವಾಡಲಿದೆ. ಇದನ್ನು ರಾಜಕೀಯವಾಗಿ ನೋಡದೇ ಪ್ರತಿಯೊಬ್ಬರು ಸಾಧಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಸಮ್ಮತಿ ನೀಡುವುದು ಮುಖ್ಯ ಎಂದರು.ಮಾಜಿ ಎಂಎಲ್ಸಿ ನೆಲನರೇಂದ್ರಬಾಬು ಮಾತನಾಡಿ, ಜಾತಿ ಗಣತಿಯ ರೂಪರೇಷೆಗಳು ಸಿದ್ದಗೊಂಡ ನಂತರ ಗಣತಿ ಕಾರ್ಯ ಆರಂಭವಾದಾಗ ಜನತೆ ಗಣತಿದಾರರು ಕೇಳಿದ ಮಾಹಿತಿಯನ್ನು ಸಮರ್ಪಕವಾಗಿ ನೀಡುವಂತೆ ಅರಿವು ಮೂಡಿಸುವ ಕೆಲಸವಾಗಲಿ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಕೇಂದ್ರ ಸರ್ಕಾರ ಇಡೀ ದೇಶದಲ್ಲಿಯೇ ಜಾತಿ ಗಣತಿ ನಡೆಸುವುದಾಗಿ ಘೋಷಿಸಿದ ನಂತರ ಕೆಲವು ರಾಜ್ಯಗಳು ನಡೆಸಿದ ಹಾಗೂ ನೆಡೆಸಲು ಉದ್ದೇಶಿಸಿರುವ ಜಾತಿಗಣತಿಗಳಿಗೆ ಅರ್ಥವಿಲ್ಲವಾಗಿದೆ ಮತ್ತು ಪ್ರಾಮುಖ್ಯತೆ ಕಳೆದುಕೊಂಡಿದೆ ಎಂದರು.ಸಭೆಯಲ್ಲಿ ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಗೋವಿಂದರಾಜು, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷರಾದ ಅಶ್ವಿನಿಶಂಕರ್, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸೋಮಶೇಖರ್, ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ಚಿಕ್ಕಬಳ್ಳಾಪುರ ಮಾಜಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ನಗರ ಅಧ್ಯಕ್ಷರು, ಬಿಜೆಪಿ ಸಹಕಾರ ಪ್ರಕೋಷ್ಟ ಜಿಲ್ಲಾ ಸಂಚಾಲಕ ಎಸ್.ಸುಧಾಕರ್ ಇದ್ದರು.

PREV