ಕುವೆಂಪು, ದೇಜಗೌ ಕನ್ನಡದ ಸಾಂಸ್ಕೃತಿಕ ರಾಯಭಾರಿಗಳು: ಡಾ.ಸಿಪಿಕೆ

KannadaprabhaNewsNetwork |  
Published : Jul 11, 2025, 01:47 AM IST
15 | Kannada Prabha

ಸಾರಾಂಶ

ಕುವೆಂಪು, ದೇಜಗೌ ಎರಡು ಚೇತನಗಳು ಕನ್ನಡ ಸಾಂಸ್ಕೃತಿಕ ರಾಯಭಾರಿಗಳು. ಕುವೆಂಪು ಅವರ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷವಾಗುತ್ತದೆ ಎಂಬ ಮಾತು ದೇಜಗೌ ಅವರಿಗೆ ತುಂಬಾ ಆಪ್ತವಾದದ್ದು, ಇವತ್ತಿಗೂ ಅಂತಹ ವ್ಯಕ್ತಿಯನ್ನು ಕಂಡಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಈ ಯುಗ ಕುವೆಂಪು ಎನ್ನುವುದು ಸತ್ಯ. ಹಾಗೆಯೇ ದೇಜಗೌ ಯುಗ ಎಂದೂ ಕರೆಯಬಹುದು. ಒಬ್ಬರನ್ನು ಬಿಟ್ಟು ಇನ್ನೊಬ್ಬರನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್‌ ಅಭಿಪ್ರಾಯಪಟ್ಟರು.

ವಿಜಯನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪದ್ಮಶ್ರೀ ಡಾ. ದೇಜಗೌ ಅವರ 110ನೇ ಜಯಂತಿ ಅಂಗವಾಗಿ ದೇಜಗೌ ನೆನಪಿನಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುವೆಂಪು, ದೇಜಗೌ ಎರಡು ಚೇತನಗಳು ಕನ್ನಡ ಸಾಂಸ್ಕೃತಿಕ ರಾಯಭಾರಿಗಳು. ಕುವೆಂಪು ಅವರ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷವಾಗುತ್ತದೆ ಎಂಬ ಮಾತು ದೇಜಗೌ ಅವರಿಗೆ ತುಂಬಾ ಆಪ್ತವಾದದ್ದು, ಇವತ್ತಿಗೂ ಅಂತಹ ವ್ಯಕ್ತಿಯನ್ನು ಕಂಡಿಲ್ಲ. ಕನ್ನಡ ಅಧ್ಯಯನ ಸಂಸ್ಥೆಯ ರೂವಾರಿ, ಕುವೆಂಪು ವಿವಿಗೆ ಬುನಾದಿ, ಮುಕ್ತ ವಿವಿಗೆ, ಜಾನಪದ ವಿವಿಗೂ ತಳಹದಿಯಾದ ಮಹಾ ಶಿಲ್ಪಿ ದೇಜಗೌ. ಅವರು ಅನೇಕರ ಬದುಕನ್ನು ರೂಪಿಸಿದ ಸ್ಮರಣಿಯರು ಎಂದು ಅವರು ಹೇಳಿದರು.

ದೇಜಗೌ ಅವರು ಒಬ್ಬ ಗದ್ಯ ಸಾಮ್ರಾಟ, ದೈತ್ಯ ಲೇಖಕ. ಭಾಷಾಂತರ ಎಂಬುದು ಮಹತ್ವದ ಕಲೆ ಎನ್ನುವುದು ಇವತ್ತು ನಮಗೆ ಗೊತ್ತಾಗಿದೆ. ಬೂಕರ್ ಪ್ರಶಸ್ತಿ, ನೊಬೆಲ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಷಾಂತರ ಆಧಾರ. ಭಾಷಾಂತರ ಕ್ಷೇತ್ರದಲ್ಲಿ ದೇಜಗೌ ಅವರು ಮುಂಚೂಣಿಯಲ್ಲಿ ಇದ್ದಿದ್ದಾಗಿ ಅವರು ತಿಳಿಸಿದರು.

ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ದೇಜಗೌ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ, ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡಕ್ಕೆ ಹೆಚ್ಚು ಮನ್ನಣೆ ದೊರೆಯಬೇಕೆಂಬ ಅದಮ್ಯ ಆಸಕ್ತಿ ಇತ್ತು. ಬರವಣಿಗೆಗೆ ಹೆಚ್ಚು ಪ್ರೋತ್ಸಾಹ ನೀಡುತಿದ್ದರು. ಕುವೆಂಪು ಅವರನ್ನು ದೇಶದಾದ್ಯಂತ ಮೆರವಣಿಗೆ ಮಾಡಿದವರು ದೇಜಗೌ ಅವರು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಪದ್ಮಾ ಶೇಖರ್, ಡಾ.ಸಿ. ನಾಗಣ್ಣ, ಸಾಹಿತಿ ಡಾ. ಲತಾ ರಾಜಶೇಖರ್, ಡಾ. ರಾಜಶೇಖರ್, ಕಸಾಪ ಮಾಜಿ ಅಧ್ಯಕ್ಷ ವೈ.ಡಿ. ರಾಜಣ್ಣ, ರಂಗಕರ್ಮಿ ರಾಜಶೇಖರ ಕದಂಬ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ. ಚಂದ್ರಶೇಖರ್, ಜಯಪ್ಪ ಹೊನ್ನಾಳಿ, ರಂಗನಾಥ ಮೈಸೂರು, ಸತೀಶ್ ಜವರೇಗೌಡ, ಮೂಗೂರು ನಂಜುಂಡಸ್ವಾಮಿ ಮೊದಲಾದವರು ಇದ್ದರು.

ನಾಳೆ ಫ.ಗು.ಹಳಕಟ್ಟಿ ಜಯಂತಿ: ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕನ್ನಡಪ್ರಭ ವಾರ್ತೆ ಮೈಸೂರು

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ವಿಜಯಪುರದ ವಚನ ಸಂಗ್ರಹ ಪಿತಾಮಹ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಸಂಯುಕ್ತವಾಗಿ ಜು.12ರ ಬೆಳಗ್ಗೆ 10.30ಕ್ಕೆ ನಗರದ ಶ್ರೀ ಹೊಸಮಠದ ಶ್ರೀ ನಟರಾಜ ಸಭಾ ಭವನದಲ್ಲಿ ವಚನ ಸಂಗ್ರಹ ಪಿತಾಮಹ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಜಯಂತಿ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಹಾದೇವಪ್ಪ ತಿಳಿಸಿದರು.

ಈ ಕಾರ್ಯಕ್ರಮವನ್ನು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಉದ್ಘಾಟಿಸುವರು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜಜ ಸ್ವಾಮೀಜಿ ಕಿರುಪುಸ್ತಕ ಬಿಡುಗಡೆಗೊಳಿಸುವರು. ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅತಿಥಿಯಾಗುವರು. ಆನಂದಕುಮಾರ್ ಕಂಬಳಿಹಾಳ್ ಅವರು ವಚನ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.

ಮಹಾಸಭಾದ ಚಂದ್ರಶೇಖರಯ್ಯ, ಶಿವಮಲ್ಲಪ್ಪ, ಸಿದ್ದಲಿಂಗಸ್ವಾಮಿ, ಶಿವಲಿಂಗಪ್ಪ, ರೇಚಣ್ಣ ಇದ್ದರು.

PREV