ಚಿಕ್ಕಮಗಳೂರುಜಾತಿ ಗಣತಿಯಲ್ಲಿ ರಾಜ್ಯದಲ್ಲಿ 2 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮಾಜವನ್ನು 65 ಲಕ್ಷಕ್ಕೆ ಇಳಿಸಲಾಗಿದೆ ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಾತಿ ಗಣತಿಯಲ್ಲಿ ರಾಜ್ಯದಲ್ಲಿ 2 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮಾಜವನ್ನು 65 ಲಕ್ಷಕ್ಕೆ ಇಳಿಸಲಾಗಿದೆ ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.ನಗರದ ಶ್ರೀ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದಿಂದ ಆಯೋಜಿಸಿದ್ಧ ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗ ಮಾನೋತ್ಸವ ಮತ್ತು ಶ್ರೀ ಭಕ್ತಿ ಭಂಡಾರಿ ಬಸವೇಶ್ವರರ ಜಯಂತಿಯಲ್ಲಿ ಮಾತನಾಡಿ 2 ಕೋಟಿ ಜನಸಂಖ್ಯೆ ಹೊಂದಿದ್ದ ಜನಾಂಗವನ್ನು 65 ಲಕ್ಷದಂತೆ ಲೆಕ್ಕಚಾರ ಇಳಿಸಲಾಗಿದೆ. ಹೀಗಾಗಿ ಸಮಾಜ ಬಾಂಧವರು ವೈಯಕ್ತಿಕ ಹಿತಾಸಕ್ತಿ ಬದಿಗಿರಿಸಿ ಎಲ್ಲಾ ಪಂಗಡಗಳು ಒಂದಾಗಬೇಕಿದು ಕರೆ ನೀಡಿದರು.ವೀರಶೈವ-ಲಿಂಗಾಯತ ಉದ್ದಾರ ಅಥವಾ ಅವನತಿ 2 ಜನಾಂಗದವರ ಕೈನಲ್ಲಿದೆ. ಜಾಗೃತರಾಗಿ ಜನರನ್ನು ಎಚ್ಚರಿಸುವ ಕಾರ್ಯ ಮಾಡಿ. ಶ್ರೀ ರೇಣುಕಾಚಾರ್ಯ ಮತ್ತು ಬಸವೇಶ್ವರರ ವಿಚಾರಧಾರೆ ಯಡಿ ಮುಂದೆ ಸಾಗಬೇಕು. ಪರಸ್ಪರ ಹೊಂದಾಣಿಕೆಯಿಂದ ಜೀವಿಸಿದ್ದಲ್ಲಿ ವೀರಶೈವ ಸಂಸ್ಕೃತಿ ಉಳಿಸಲು ಸಾಧ್ಯ ಎಂದು ತಿಳಿಸಿದರು.ಬಸವಪೀಠದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ಸಮಾಜದ ಎಲ್ಲಾ ಉಪ ಪಂಗಡಗಳು ವೀರಶೈವ-ಲಿಂಗಾ ಯಿತವೇ. ಒಗ್ಗಟ್ಟಿನ ಮಂತ್ರದ ಪಠಣ ಬೇಕು. ಶರಣಾದಿ ಬಸವರು, ಧರ್ಮಗುರುಗಳನ್ನು ಅರ್ಥೈಸಿಕೊಂಡು ಸಾಗಿದಲ್ಲಿ ಸಮಾಜಕ್ಕೆ ದೊಡ್ಡ ಭವಿಷ್ಯವಿದೆ. ಕಾಲ್ಪನಿಕ ಚಿಂತನೆಯಡಿ ಸಾಗಿದರೆ ಸಮಾಜ ಮುಂದೊಂದು ದಿನ ನಶಿಸುವ ಹಂತಕ್ಕೆ ತಲುಪಲಿದೆ ಎಂದು ಎಚ್ಚರಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ,ತಮ್ಮಯ್ಯ, ಇಂದಿನ ಯುವ ಸಮೂಹ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಶರಣಾದಿ ದಾರ್ಶನಿಕರ ಚರಿತ್ರೆ ಮರೆಯುತ್ತಿದ್ದಾರೆ. ಪಾಲಕರು ಪೂರ್ವಿಕರ ಇತಿಹಾಸ ಪರಿಚಯಿಸಬೇಕು ಎಂದರು.
ಶ್ರೀ ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಎಂಬ ಮಹತ್ವದ ಧಾರ್ಮಿಕ ಗ್ರಂಥ ಲೋಕಕ್ಕೆ ಅರ್ಪಿಸಿ ದರೆ ಬಸವೇಶ್ವರರು ಸಮಸಮಾಜಕ್ಕೆ ಅನುಭವ ಮಂಟಪ ನಿರ್ಮಿಸಿದವರು ಎಂದರು.ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ಶಾಂತಿ ಎಂಬ ಭವಿಷ್ಯವಾಣಿ ನುಡಿದಂಥ ಶ್ರೀ ರೇಣುಕಾ ಚಾರ್ಯರ ವಿಚಾರ ಧಾರೆಗಳು ಆಧುನಿಕ ಕಾಲಘಟ್ಟಕ್ಕೂ ಪ್ರಸ್ತುತ. ಬಸವೇಶ್ವರರ ಅರಿವೇ ಗುರು, ಕಾಯಕ ವೇ ಕೈಲಾಸ ಎಂಬ ಸಂದೇಶ ಭಿತ್ತಿದ್ದಾರೆ. ಜೊತೆಗೆ ಇಂದಿನ ಪಾರ್ಲಿಮೆಂಟ್‌ನ್ನು 12ನೇ ಶತಮಾನದಲ್ಲಿ ನಿರ್ಮಿಸಿ ಎಲ್ಲರಿಗೂ ಮಾತಿನ ಶಕ್ತಿ ತುಂಬಿಸಿದ ಶ್ರೇಷ್ಠರು ಎಂದು ಬಣ್ಣಿಸಿದರು.
ಈ ವೇಳೆ ಅ.ಭಾ.ವೀ.ಲಿಂ. ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಸಿ.ನಿಶಾಂತ್, ಸಾಹಿತಿ ಡಿ.ಎಂ. ಮಂಜುನಾಥಸ್ವಾಮಿ, ಮಹಾಸಭಾ ರಾಜ್ಯ ಸಮಿತಿ ಸದಸ್ಯ ಎಂ.ಆರ್. ಪೂರ್ಣೇಶ್‌ಮೂರ್ತಿ, ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ಮಹಿಳಾ ಮಹಾ ಸಭಾ ಜಿಲ್ಲಾಧ್ಯಕ್ಷೆ ವನಮಾಲ ಮೃತ್ಯುಂಜಯ, ಕಡೂರು ಅಧ್ಯಕ್ಷ ರೇಣುಕಾರಾಧ್ಯ, ತರೀಕೆರೆ ಅಧ್ಯಕ್ಷ ಗಿರೀಶ್ ಮುಂಡ್ರೆ, ಮೂಡಿಗೆರೆ ಅಧ್ಯಕ್ಷ ಓಂಕಾರಪ್ಪ, ವೀರಶೈವ-ಲಿಂಗಾಯತ ಸಮಾಜ ಅಧ್ಯಕ್ಷ ಬಿ.ಎ.ಶಿವಶಂಕರ್, ನಗರಾಧ್ಯಕ್ಷ ಸಿ.ಬಿ.ಮಲ್ಲೇಗೌಡ ಮೊದಲಾದವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.