ಜಾತಿ ಗಣತಿ ಈಗ ಕಗ್ಗಂಟು

KannadaprabhaNewsNetwork |  
Published : Sep 19, 2025, 01:00 AM IST
ವಿಧಾನಸೌಧ | Kannada Prabha

ಸಾರಾಂಶ

ಸಾಮಾಜಿಕ-ಆರ್ಥಿಕ ಸಮೀಕ್ಷೆ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರಿಂದ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಚಿವರಿಂದ ತೀವ್ರ ಆಕ್ಷೇಪ, ಬಿರುಸಿನ ಮಾತುಗಳ ವಿನಿಮಯ ನಡೆದ ಪರಿಣಾಮ ಮತ್ತೊಮ್ಮೆ ಜಾತಿ ಗಣತಿ ಕಗ್ಗಂಟಿಗೆ ಸರ್ಕಾರ ಸಿಲುಕಿದೆ.

- ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆ ಪರ-ವಿರುದ್ಧ ಕಾವೇರಿದ ಚರ್ಚೆ- ತಡರಾತ್ರಿವರೆಗೂ ಸಿಎಂ- ಡಿಸಿಎಂ- ಸಚಿವರ ದೀರ್ಘ ಮಾತುಕತೆ- ಸರ್ವೇ ನಡೆಸಬೇಕಾ? ಮುಂದೂಡಬೇಕಾ? ನಿರ್ಧಾರ ಸಿಎಂ ಹೆಗಲಿಗೆ

---

ಬಿರುಸಿನ ಚಟುವಟಿಕೆ- ಹಲವು ಜಾತಿಗಳನ್ನು ಕ್ರೈಸ್ತ ಧರ್ಮದ ಜತೆ ತಳಕು ಹಾಕಿದ್ದು, ಧರ್ಮ ಕಾಲಂನಲ್ಲಿ ಲಿಂಗಾಯತ ನೀಡದ್ದರಿಂದ ಗೊಂದಲ- ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈಶ್ವರ ಖಂಡ್ರೆ, ಮಲ್ಲಿಕಾರ್ಜುನ್‌ ಅವರಿಂದ ಜಾತಿ ಗಣತಿಗೆ ತೀವ್ರ ವಿರೋಧ- ಗೊಂದಲ ಬಗೆಹರಿಸದೆ ಸಮೀಕ್ಷೆ ನಡೆಸದಂತೆ ಎಂ.ಬಿ.ಪಾಟೀಲ್‌ ಆಗ್ರಹ. ಡಿಸಿಎಂ ಡಿ.ಕೆ.ಶಿವಕುಮಾರ್‌ರಿಂದಲೂ ದನಿ- ಇದರ ಬೆನ್ನಲ್ಲೇ ಸಭೆ ನಡೆಸಿ ವರದಿ ನೀಡುವಂತೆ ಸಚಿವರಿಗೆ ಸಿಎಂ ಸೂಚನೆ. ಡಿಕೆಶಿ ನೇತೃತ್ವದಲ್ಲಿ ಹಿರಿಯ ಮಂತ್ರಿಗಳ ಸಭೆ- ಏನೆಲ್ಲಾ ಬದಲಾವಣೆ ಮಾಡಬೇಕು ಎಂಬ ಬಗ್ಗೆ ಗಂಭೀರ ಚರ್ಚೆ. ತಡರಾತ್ರಿವರೆಗೂ ಸಿಎಂ ಮನೆಯಲ್ಲಿ ಮಹತ್ವದ ಸಭೆ

---

ಕನ್ನಡಪ್ರಭ ವಾರ್ತೆ ಬೆಂಗಳೂರುಸಾಮಾಜಿಕ-ಆರ್ಥಿಕ ಸಮೀಕ್ಷೆ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರಿಂದ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಚಿವರಿಂದ ತೀವ್ರ ಆಕ್ಷೇಪ, ಬಿರುಸಿನ ಮಾತುಗಳ ವಿನಿಮಯ ನಡೆದ ಪರಿಣಾಮ ಮತ್ತೊಮ್ಮೆ ಜಾತಿ ಗಣತಿ ಕಗ್ಗಂಟಿಗೆ ಸರ್ಕಾರ ಸಿಲುಕಿದೆ.

ಸಚಿವ ಸಂಪುಟ ಸಭೆ ಸೇರಿದಂತೆ ಸಚಿವರ ಮಟ್ಟದ ಸರಣಿ ಸಭೆಗಳು ನಡೆದು ಸಮೀಕ್ಷೆ ಸ್ವರೂಪ ಹೇಗಿರಬೇಕು ಹಾಗೂ ಏನೇನು ಬದಲಾಗಬೇಕು ಎಂಬ ಬಗ್ಗೆ ತೀವ್ರ ಪರಾಮರ್ಶೆ ಗುರುವಾರ ನಡೆಯಿತು.

ಅಂತಿಮವಾಗಿ ಸಮೀಕ್ಷೆಯನ್ನು ಮುಂದೂಡಬೇಕೋ ಅಥವಾ ಕೆಲ ಬದಲಾವಣೆಗಳೊಂದಿಗೆ ಘೋಷಿತ ದಿನದಿಂದಲೇ ಸಮೀಕ್ಷೆ ಆರಂಭಿಸಬೇಕೋ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಲವು ಸಚಿವರು ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ರಾಜ್ಯ ಸರ್ಕಾರ ಸೆ.22ರಿಂದ ಆರಂಭಿಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ನಮೂನೆಯಲ್ಲಿ 331 ಹೆಚ್ಚುವರಿ ಜಾತಿಗಳ ಹೆಸರು ಸೇರ್ಪಡೆ ಮಾಡಲಾಗಿದೆ. ಲಿಂಗಾಯತ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌ ಸೇರಿ ಹಲವು ಜಾತಿಗಳನ್ನು ಕ್ರಿಶ್ಚಿಯನ್‌ ಧರ್ಮದ ಜತೆ ತಳಕು ಹಾಕಿ ಪಟ್ಟಿ ಮಾಡಲಾಗಿದೆ. ಜತೆಗೆ ಧರ್ಮದ ಪಟ್ಟಿಯಲ್ಲಿ ಲಿಂಗಾಯತ ಎಂಬುದು ನಮೂದಿಸದ ಕಾರಣ ಲಿಂಗಾಯತರಲ್ಲೂ ತೀವ್ರ ಗೊಂದಲ ಉಂಟಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ಕೆಲ ಸಚಿವರಿಂದ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಚಿವರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಸಚಿವರಾದ ಈಶ್ವರ್‌ ಖಂಡ್ರೆ, ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸಮೀಕ್ಷೆಯನ್ನೇ ವಿರೋಧಿಸಿದರೆ, ಎಂ.ಬಿ. ಪಾಟೀಲ್‌ ಅವರು ಗೊಂದಲಗಳನ್ನು ಬಗೆಹರಿಸದ ಹೊರತು ಸಮೀಕ್ಷೆ ನಡೆಸದಂತೆ ಆಗ್ರಹಿಸಿದರು. ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೂ ದನಿಗೂಡಿಸಿದರು ಎಂದು ತಿಳಿದುಬಂದಿದೆ.

ಸಿಎಂ ಹೆಗಲಿಗೆ ಅಂತಿಮ ನಿರ್ಧಾರದ ಹೊಣೆ:

ಸಂಪುಟ ಸಭೆಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾದ ಬೆನ್ನಲ್ಲೇ ಹಿರಿಯ ಸಚಿವರ ಸಭೆ ನಡೆಸಿ ವರದಿ ನೀಡಲು ಸಿದ್ದರಾಮಯ್ಯ ಸೂಚಿಸಿದರು. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಹಿರಿಯ ಸಚಿವರ ಸಭೆ ನಡೆಸಲಾಯಿತು.

ಈ ವೇಳೆ ಸಮೀಕ್ಷೆ ಸ್ವರೂಪ ಹೇಗಿರಬೇಕು ಹಾಗೂ ಏನೇನು ಬದಲಾಗಬೇಕು ಎಂಬ ಬಗ್ಗೆ ತೀವ್ರ ಚರ್ಚೆ ನಡೆಸಿದರು. ಬಳಿಕ ಗುರುವಾರ ರಾತ್ರಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಎಲ್ಲಾ ಗೊಂದಲ ಹಾಗೂ ಪರಿಹಾರಗಳ ಕುರಿತು ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೊಂದಿಗೆ ಚರ್ಚಿಸಲಾಯಿತು.

ಅಂತಿಮವಾಗಿ ಸಮೀಕ್ಷೆಯನ್ನು ಮುಂದೂಡಬೇಕೇ ಅಥವಾ ಕೆಲ ಬದಲಾವಣೆಗಳೊಂದಿಗೆ ಘೋಷಿತ ದಿನದಿಂದಲೇ ಸಮೀಕ್ಷೆ ಆರಂಭಿಸಬೇಕೇ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.

ಹೀಗಾಗಿ ಸಿದ್ದರಾಮಯ್ಯ ಅವರ ಯಾವ ನಿರ್ಧಾರ ಮಾಡಲಿದ್ದಾರೆ ಎಂಬುದರ ಮೇಲೆ ಸೆ.22ರ ಸಮೀಕ್ಷೆಯ ಭವಿಷ್ಯ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

---

ನಿಗದಿತ ದಿನಾಂಕದಿಂದಲೇ ಸಮೀಕ್ಷೆ?

ಹಿಂದುಳಿದ ವರ್ಗಗಳ ಇಲಾಖೆ ಮೂಲಗಳ ಪ್ರಕಾರ ನಿಗದಿ (ಸೆ.22) ದಿನಾಂಕದಿಂದಲೇ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಯಲಿದೆ.ಜಾತಿ ಪಟ್ಟಿಯಲ್ಲಿನ ಹೆಚ್ಚುವರಿ ಜಾತಿಗಳನ್ನು ಪರಿಷ್ಕರಣೆ ಮಾಡಿ ಸೆ.22 ರಿಂದಲೇ ಸಮೀಕ್ಷೆ ನಡೆಸುವ ಸಾಧ್ಯತೆ ಹೆಚ್ಚಿದೆ. ಸಮೀಕ್ಷೆ ಆರಂಭಕ್ಕೆ ಮೂರು ದಿನಗಳ ಕಾಲಾವಧಿ ಮಾತ್ರ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಮುಂದೂಡುವ ಮನಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲ ಎನ್ನಲಾಗುತ್ತಿದೆ.

ಆದರೆ, ಸಮೀಕ್ಷೆ ಆರಂಭಕ್ಕೆ ಬಾಕಿ ಉಳಿದಿರುವ ಮೂರುದಿನದಲ್ಲಿ ಪರಿಷ್ಕರಣೆ ಮಾಡಿ ಪರಿಷ್ಕೃತ ಕೈಪಿಡಿಯನ್ನು ಸಮೀಕ್ಷೆ ನಡೆಸುವ ಸಿಬ್ಬಂದಿಗೆ ನೀಡಲು ಸಾಧ್ಯವಿಲ್ಲ ಎಂದಾದರೆ ಮಾತ್ರ ತುಸು ಕಾಲ ಮುಂದೂಡಬಹುದು ಎನ್ನಲಾಗುತ್ತಿದೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ