ಕಾರವಾರ; ಜಾತಿಗಣತಿ ಬಗ್ಗೆ ರಾಜ್ಯದಲ್ಲಿ ಪರ ವಿರೋಧ ಅಭಿಪ್ರಾಯ ಜೋರಾಗಿದೆ. ಆಡಳಿತ ಕಾಂಗ್ರೆಸ್ ಪಕ್ಷದಲ್ಲೇ ಪರ ವಿರೋಧದ ಕಿಚ್ಚು ಹೆಚ್ಚಿದೆ. ಇದರಿಂದ ಜಿಲ್ಲೆಯ ಕಾಂಗ್ರೆಸ್ ನ ಜನಪ್ರತಿನಿಧಿಗಳು, ಮುಖಂಡರು ಮಾತ್ರ ಬಲವಾಗಿ ಸಮರ್ಥಿಸಿಕೊಳ್ಳಲಾರದೆ, ತೀವ್ರವಾಗಿ ವಿರೋಧಿಸಲೂ ಆಗದೇ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
ಏಕೆಂದರೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾರವಾರ ಶಾಸಕ ಸತೀಶ ಸೈಲ್, ಇನ್ನು ಕಾಂಗ್ರೆಸ್ ನತ್ತ ಮುಖ ಮಾಡಿರುವ ಬಿಜೆಪಿಯ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಇವರೆಲ್ಲ ಡಿ.ಕೆ. ಶಿವಕುಮಾರ ಬೆಂಬಲಿಗರು. ಇತ್ತ ಜಾತಿ ಗಣತಿ ವರದಿಯನ್ನು ಬೆಂಬಲಿಸಿದರೆ ಡಿ.ಕೆ. ಶಿವಕುಮಾರ ಕೋಪಕ್ಕೆ ತುತ್ತಾಗಬೇಕು. ವಿರೋಧಿಸಿದರೆ ಮುಖ್ಯಮಂತ್ರಿಯ ಅವಕೃಪೆಗೆ ಒಳಗಾಗಬೇಕು. ಈ ಉಭಯ ಸಂಕಟದಿಂದಾಗಿ ಬಾಯಿಬಿಡದೇ ಮೌನಕ್ಕೆ ಶರಣಾಗಿದ್ದಾರೆ.
ಹಳಿಯಾಳ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು. ದೇಶಪಾಂಡೆ ಅವರನ್ನು ಈ ಕುರಿತು ಪ್ರಶ್ನಿಸಿದಾಗ, ಸದ್ಯಕ್ಕೆ ಈ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ಜಾರಿಕೊಂಡಿದ್ದಾರೆ. ಇವರಿಗೂ ಹಾಗೆ ಬೆಂಬಲಿಸಿದರೆ ಡಿ.ಕೆ. ಶಿವಕುಮಾರಗೆ ಬೇಸರ, ವಿರೋಧಿಸಿದರೆ ಸಿಎಂಗೆ ಎದುರು ಹಾಕಿಕೊಳ್ಳಬೇಕು. ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ಪರಿಸ್ಥಿತಿಯೂ ಹೀಗೆ ಆಗಿದೆ.ಈಗ ಜಾತಿಗಣತಿ ಜಿಲ್ಲೆಯ ಮಟ್ಟಿಗೆ ಚರ್ಚೆಯ ವಿಷಯವಾಗಿಯೇ ಉಳಿದಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷದವರು ತುಟಿ ಬಿಚ್ಚುತ್ತಿಲ್ಲ. ಬಿಜೆಪಿಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜಾತಿ ಗಣತಿಯನ್ನು ವಿರೋಧಿಸಿದರೂ ಆ ಬಗ್ಗೆ ಪ್ರತಿಕ್ರಿಯೆ ನೀಡದಷ್ಟು ಮೌನ ಅವರನ್ನು ಆವರಿಸಿದೆ.
ಪಕ್ಷದ ರಾಜ್ಯ ಮಟ್ಟದ ನಾಯಕರು ಜಾತಿ ಗಣತಿ ಬಗ್ಗೆ ನಿರ್ಧರಿಸುತ್ತಾರೆ. ಅದರಲ್ಲೂ ಇದು ಕಾರ್ಯರೂಪಕ್ಕೆ ಬರಲು ಇನ್ನೂ ಒಂದು ವರ್ಷ ಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಕಾದು ನೋಡೋಣ ಎನ್ನುತ್ತಾರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ.