ರಣ ಬಿಸಿಲಿನಿಂದ ಕಂಗೆಟ್ಟಿದ್ದ ಅರಣ್ಯ ಪ್ರದೇಶಗಳ ವನ್ಯ ಸಂಪತ್ತಿಗೂ ಕಳೆ ತಂದ ಮುಂಗಾರು ಪೂರ್ವ ಮಳೆ

KannadaprabhaNewsNetwork | Updated : Apr 20 2025, 01:19 PM IST

ಸಾರಾಂಶ

ರಣ ಬಿಸಿಲಿನಿಂದ ಕಂಗೆಟ್ಟಿದ್ದ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಉತ್ತಮವಾಗಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ವನ್ಯಜೀವಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

ಮಹದೇವಪ್ಪ ಎಂ. ಸ್ವಾಮಿ

 ಶಿರಹಟ್ಟಿ : ರಣ ಬಿಸಿಲಿನಿಂದ ಕಂಗೆಟ್ಟಿದ್ದ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಉತ್ತಮವಾಗಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ವನ್ಯಜೀವಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.ಈ ಬಾರಿ ತಾಲೂಕಿನಲ್ಲಿ ೩೫ರಿಂದ ೩೮ ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲಿನ ತಾಪಮಾನ ದಾಖಲಾಗಿದ್ದು, ಬಿಸಿಲಿಗೆ ವನ್ಯ ಸಂಪತ್ತು ಒಣಗಿ ಬೆಂಡಾಗಿತ್ತು. 

ಕಾಡ್ಗಿಚ್ಚಿನ ಆತಂಕ ಪದೇ ಪದೇ ಎದುರಾಗಿತ್ತು. ಮತ್ತೊಂದೆಡೆ ವನ್ಯಜೀವಿಗಳು ಜೀವ ಜಲಕ್ಕಾಗಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಾಲೂಕಿನಲ್ಲಿ ವಾರದಿಂದ ಆಗಾಗ್ಗೆ ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಉತ್ತಮ ಮಳೆ ಆಗುತ್ತಿರುವುದರಿಂದ ಕಪ್ಪತ್ತಗುಡ್ಡ, ಕಡಪಟ್ಟಿ ಅಡವಿ, ಹುಲಿಕಲ್ಲ ಅಡವಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಒಣಗಿ ನಿಂತಿದ್ದ ಮರ- ಗಿಡಗಳು ಚಿಗುರೊಡೆಯುತ್ತಿದ್ದು, ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗತೊಡಗಿದೆ. ಮತ್ತೆ ತಾಲೂಕಿನ ವನ್ಯ ಸಂಪತ್ತಿನಲ್ಲಿ ಜೀವಕಳೆ ಬಂದಿದೆ.

ಕಾಡಿಗೂ ಖುಷಿ ತಂದ ಮಳೆ: ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನ ಮಧ್ಯ ಸಹ್ಯಾದ್ರಿ ಪರ್ವತದಂತಿರುವ ಕಪ್ಪತ್ತಗುಡ್ಡ ತಪ್ಪಲು ಪ್ರದೇಶ ಕಳೆದ ನಾಲ್ಕೈದು ತಿಂಗಳುಗಳಿಂದ ಮಳೆ ಇಲ್ಲದೇ ಆತಂಕ ಎದುರಿಸಿದ್ದು, ಸಾಕಷ್ಟು ಬೆಂಕಿ ಅವಘಡಗಳು ನಡೆದು ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿ ಆತಂಕ ಉಂಟು ಮಾಡಿತ್ತು.ಒಣಗಿ ಬೆಂಡಾಗಿದ್ದ ಕಾಡಿಗೆ (ಬಾದೆ ಹುಲ್ಲಿಗೆ) ದುಷ್ಕರ್ಮಿಗಳು ಬೆಂಕಿ ಹಾಕುತ್ತಿದ್ದರು. ಆದರೆ, ಅದರಿಂದ ವನ್ಯಜೀವಿಗಳಿಗೆ, ಪಕ್ಷಿಗಳಿಗೆ ಆದ ನಷ್ಟ, ಆತಂಕ ಅಷ್ಟಿಷ್ಟಲ್ಲ. ಇತ್ತ ಅಧಿಕಾರಿಗಳಿಗೂ ದುರ್ಘಟನೆಗಳು ತಲೆನೋವಾಗಿ ನೆಮ್ಮದಿಗೆ ಭಂಗ ತಂದಿದ್ದವು. 

ಕೆರೆ-ಕಟ್ಟೆ, ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹ: ಮಳೆಯಿಂದ ಕೆರೆ-ಕಟ್ಟೆಗಳು ಮತ್ತು ತಗ್ಗು ಪ್ರದೇಶ ಹೊಲಗಳ ಬದುಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಇದರಿಂದ ವನ್ಯಜೀವಿಗಳಿಗೆ ಎದುರಾಗಿದ್ದ ಕುಡಿಯುವ ನೀರಿನ ಸಮಸ್ಯೆ ಕೊಂಚ ನೀಗಿದೆ. ಇತ್ತ ಸಂಪೂರ್ಣ ಒಣಗಿ ನಿಂತಿದ್ದ ಮರಗಳು ಚಿಗುರೊಡೆಯಲು ಆರಂಭಿಸಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊಂಚ ನಿರಾಳರಾಗಿದ್ದಾರೆ.

ಕೆರೆಗಳು ಬೇಸಿಗೆ ಕಾಲದಲ್ಲಿ ಬರಿದಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಜಿಂಕೆಗಳು ರೈತರ ಜಮೀನುಗಳತ್ತ ಬರುತ್ತಿದ್ದವು. ಉತ್ತಮ ಮಳೆಯಿಂದ ಅಲ್ಲಲ್ಲಿ ನೀರು ಸಿಗುತ್ತಿದ್ದು, ಕೆಲವೇ ದಿನಗಳಲ್ಲಿ ಇನ್ನಷ್ಟು ಮಳೆ ಸುರಿದಲ್ಲಿ ಕೆರೆಗಳು ತುಂಬಿ ನೀರಿನ ಸಮಸ್ಯೆಗಳು ದೂರವಾಗಲಿದೆ. 

ಆತಂಕ ದೂರ: ತಾಲೂಕು ವ್ಯಾಪ್ತಿಯ ಅರಣ್ಯ ಭಾಗಗಳಲ್ಲಿ ಮಳೆ ಆಗುತ್ತಿದೆ. ಇದರಿಂದ ಅರಣ್ಯದಲ್ಲಿ ಬೆಂಕಿ ಅವಘಡಕ್ಕೆ ಸದ್ಯದ ಮಟ್ಟಿಗೆ ಅವಕಾಶ ಇಲ್ಲ. ನಿಜಕ್ಕೂ ಇದು ಖುಷಿ ವಿಚಾರ. ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಆತಂಕ ಮತ್ತಷ್ಟು ದೂರವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

Share this article