ನೂರಾರು ವರ್ಷಗಳಿಂದ ನಮ್ಮ ಪೂರ್ವಿಕರು ಈ ಜಾಗದಲ್ಲೇ ಶವ ಸಂಸ್ಕಾರ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಲೇಔಟ್ ನಿರ್ಮಾಣ ಮಾಡಲು ಸಮಾಧಿಗಳನ್ನೇ ನಾಶಪಡಿಸಿ ಸದರಿ ಜಾಗವನ್ನು ಕಬಳಿಸುವ ಹುನ್ನಾರವನ್ನು ಪ್ರಭಾವಿಗಳು ಮಾಡುತ್ತಿದ್ದಾರೆ.
ಶಿರಾ: ಸ್ಮಶಾನಕ್ಕೆಂದು ಮೀಸಲಿಟ್ಟಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಯೋರ್ವ ನಿವೇಶನ ನಿರ್ಮಾಣಕ್ಕೆ ಮುಂದಾಗಿದ್ದು, ಜೆಸಿಬಿಯಿಂದ ಸಮಾಧಿಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ.
ನಗರದ ಕೋಟೆ ಬಡಾವಣೆಯ ಬೂದಿದಿಣ್ಣೆ ಸ್ಮಶಾನದಲ್ಲಿ ಖಾಸಗಿ ವ್ಯಕ್ತಿ ಲೇಔಟ್ ನಿರ್ಮಾಣ ಮಾಡಲು ಹಾಲಿ ಇರುವ ಪುರಾತನ ಸಮಾಧಿಗಳು ಸೇರಿದಂತೆ ಹಲವಾರು ಸಮಾಧಿಗಳನ್ನು ಜೆಸಿಬಿ ಯಂತ್ರದ ಮೂಲಕ ನಾಶ ಮಾಡಿರುವ ಹಿನ್ನೆಲೆಯಲ್ಲಿ ಕೋಟೆ ಬಡಾವಣೆಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟಿಸಿದ್ದಾರೆ. ಕೋಟೆ ಬಡಾವಣೆಯ ಬೂದಿದಿಣ್ಣೆ ಸ್ಮಶಾನ ತುಂಬಾ ಪುರಾತನವಾಗಿದ್ದು, ನೂರಾರು ವರ್ಷಗಳಿಂದ ಇಂದಿನವರೆಗೂ ಆ ಭಾಗದ ಜನರು ಶವಸಂಸ್ಕಾರ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಈ ವ್ಯಕ್ತಿ ನಾನು ಜಮೀನನ್ನು ಖರೀದಿಸಿದ್ದೇನೆ ಎಂದು ಹೇಳಿ ಸ್ಮಶಾನದ ಹಿಂಭಾಗದ ಜಮೀನನ್ನು ಸ್ವಚ್ಛಗೊಳಿಸುತ್ತಾ ಅದರ ಅಕ್ಕ ಪಕ್ಕದಲ್ಲಿರುವ ಸಮಾಧಿಗಳನ್ನು ನಾಶ ಮಾಡಿರುತ್ತಾನೆ. ಇದು ಯಾರ ಗಮನಕ್ಕೂ ಬಂದಿಲ್ಲ. ದಾರಿಯಲ್ಲಿ ಓಡಾಡುವವರು ಸಮಾಧಿ ನಾಶ ಮಾಡುತ್ತಿರುವ ದೃಶ್ಯ ಕಂಡು ಇತರರಿಗೆ ತಿಳಿಸಿದ್ದಾರೆ. ತಲೆ ಬುರುಡೆಗಳು ಹಾಗೂ ಮೂಳೆಗಳು ಸ್ಮಶಾನದ ಮಣ್ಣಲ್ಲಿ ಎದ್ದು ಕಾಣುತ್ತಿವೆ. ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು ಹಾಗೂ ಪೊಲೀಸರು ಕಾಮಗಾರಿಯನ್ನು ಸ್ಥಗಿತಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
‘ನೂರಾರು ವರ್ಷಗಳಿಂದ ನಮ್ಮ ಪೂರ್ವಿಕರು ಈ ಜಾಗದಲ್ಲೇ ಶವ ಸಂಸ್ಕಾರ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಲೇಔಟ್ ನಿರ್ಮಾಣ ಮಾಡಲು ಸಮಾಧಿಗಳನ್ನೇ ನಾಶಪಡಿಸಿ ಸದರಿ ಜಾಗವನ್ನು ಕಬಳಿಸುವ ಹುನ್ನಾರವನ್ನು ಪ್ರಭಾವಿಗಳು ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು.’
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.