ಕನ್ನಡಪ್ರಭ ವಾರ್ತೆ ತಿಪಟೂರು
ರಾಜ್ಯ ಸರ್ಕಾರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಯಾರು ವಂಚಿತರಾಗಬಾರದೆಂಬ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿ ಜಾತಿ ಗಣತಿ ಸಮೀಕ್ಷೆ ನಡೆಸುತ್ತಿದ್ದು ಸಮೀಕ್ಷೆದಾರರು ಕೊಟ್ಟಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುವಂತೆ ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ಕಲ್ಪತರು ಆಡಿಟೋರಿಯಂನಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೆ. 22ರಿಂದ ಅ.7ರವರೆಗೆ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಲ್ಲಿ 65ಸಾವಿರ ಕುಟುಂಬಗಳು ಈ ಸಮೀಕ್ಷೆಗೆ ಒಳಪಡಲಿವೆ. ಶಿಕ್ಷಕರನ್ನು ಸಮೀಕ್ಷೆದಾರರನ್ನಾಗಿ ನೇಮಿಸಲಾಗಿದ್ದು ಒಬ್ಬರಿಗೆ 150 ಮನೆಗಳನ್ನು ನೀಡಲಾಗಿದ್ದು ಒಂದು ದಿನಕ್ಕೆ 10 ಮನೆಗಳ ಸಮೀಕ್ಷೆ ನಡೆಸಬೇಕು.
ಸಮೀಕ್ಷೆ ಮಾಡುವಾಗ ಗ್ರಾಮೀಣ ಪ್ರದೇಶದವರು ಸರಿಯಾಗಿ ಸ್ಪಂದಿಸದಿದ್ದರೆ ನೀವು ತಾಳ್ಮೆ ಮತ್ತು ಸಹನೆಯಿಂದ ವರ್ತಿಸಬೇಕು. ಈ ಸಮೀಕ್ಷೆಯನ್ನು ರಾಜಕೀಯವಾಗಿ ಮಾಡುತ್ತಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶ ಸರ್ಕಾರದ್ದಾಗಿದೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಸೌಲಭ್ಯಗಳು ನಿಮಗೆ ಸಿಗಬೇಕಾದರೆ ಜಾತಿ ಗಣತಿ ವೇಳೆ ಸರಿಯಾದ ಮಾಹಿತಿ ನೀಡಬೇಕು. ಇಲ್ಲಿ 60 ಅಂಶಗಳ ಕಾಲಂ ಇದ್ದು ಎಲ್ಲಾ ಕಾಲಂಗಳಿಗೂ ನಿಖರ ಮಾಹಿತಿ ನೀಡಬೇಕು. ಎಲ್ಲಾ ಸಮಾಜದ ಜನರಿಗೆ ಅನುಕೂಲವಾಗಲೆಂದು ಸಮೀಕ್ಷೆದಾರರಿಗೆ ಮೊದಲು ತರಬೇತಿ ನೀಡಿ ನಂತರ ಜಾತಿ ಗಣತಿ ಮಾಡಲು ಅವಕಾಶ ನೀಡಲಾಗಿದೆ. ನೀವು ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕೆಂದ ಅವರು ಐತಿಹಾಸಿಕ ಸಮೀಕ್ಷೆಗೆ ಎಲ್ಲರು ಸಹಕರಿಸಿ ಭವ್ಯ ಭವಿಷ್ಯಕ್ಕೆ ಸಾಕ್ಷಿಯಾಗುವ ಮೂಲಕ ರಾಜ್ಯದ ಅಭಿವೃದಿಯಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.ಉಪವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡಿ, ಸಂವಿಧಾನಬದ್ಧವಾಗಿ ಬಂದಿರುವ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ಎಲ್ಲರು ಪಡೆದುಕೊಳ್ಳವ ಸ್ವಾತಂತ್ರ್ಯವಿದ್ದು, ಅದಕ್ಕಾಗಿ ಸರ್ಕಾರ ಜಾತಿ ಗಣತಿಯ ಮೂಲಕ ಸರಿಯಾದ ಅಂಕಿ ಅಂಶ ಪಡೆದು ಎಲ್ಲಾ ಸಮಾಜಕ್ಕೂ ಸಮಾನತೆಯ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಸಮೀಕ್ಷೆದಾರರು ಮನೆಗಳ ಸಮೀಕ್ಷೆ ಮಾಡುವಾಗ ಕಡ್ಡಾಯವಾಗಿ ಐಡಿ ಕಾರ್ಡ್ ಧರಿಸಬೇಕು. ಶಾಂತಿ, ಸಹನೆಯಿಂದ ವರ್ತಿಸಿ ಸಮೀಕ್ಷೆ ಮಾಡಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಲಜಾಕ್ಷಮ್ಮ, ತಾಪಂ ಇಓ ಸುದರ್ಶನ್, ಬಿಇಓ ತಾರಾಮಣಿ, ಗ್ರೇಡ್- 2 ತಹಸೀಲ್ದಾರ್ ಜಗನ್ನಾಥ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರಬದರಗಡೆ, ಸಿಆರ್‌ಪಿಗಳಾದ ದಕ್ಷಿಣಮೂರ್ತಿ, ಉಮೇಶ್‌ಗೌಡ ಸೇರಿದಂತೆ ತರಬೇತಿದಾರರು ಹಾಗೂ ಶಿಕ್ಷಕರು, ಶಿಕ್ಷಕಿಯರು ಭಾಗವಹಿಸಿದ್ದರು.ಫೋಟೋ 18-ಟಿಪಿಟಿ3ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಸಮೀಕ್ಷೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ. ಷಡಕ್ಷರಿ, ಉಪವಿಭಾಗಾಧಿಕಾರಿ ಸಪ್ತಶ್ರೀ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಲಜಾಕ್ಷಮ್ಮ ಮತ್ತಿತರರು.