ಗದಗ: ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮಾಜಗಳು ಸಮಗ್ರವಾಗಿ ಅಭಿವೃದ್ಧಿ ಆಗಬೇಕಾದಲ್ಲಿ ಆಯಾ ಜಾತಿಗಳು ಸಂಘಟಿತರಾಗುವುದು ಅತ್ಯಂತ ಅವಶ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಶನಿವಾರ ನಗರದ ಕನಕ ಭವನದಲ್ಲಿ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಮತ್ತು ರಾಜ್ಯ ಮಟ್ಟದ ಕನಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಹಿಂದುಳಿದ ಜಾತಿಗಳಲ್ಲಿನ ಯುವಕರಲ್ಲಿ ಸ್ವಾಭಿಮಾನ ಇರಬೇಕು, ಅದು ಬರಬೇಕು ಎಂದರೆ ನೀವೆಲ್ಲಾ ಶಿಕ್ಷಣ ಹೊಂದಬೇಕು. ಸಂವಿಧಾನದ ಹಕ್ಕು ಮತ್ತು ಆಶಯ ಸಾಕಾರವಾಗಬೇಕಾದಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು. ಡಾ. ಅಂಬೇಡ್ಕರ್ ಅವರು ತಿಳಿಸಿದಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಪ್ರಗತಿ ಸಾಧ್ಯ ಎಂದ ಅವರು, ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೂ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ನಾವೆಲ್ಲರೂ ಮನುಷ್ಯರು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಸಮಾಜದಲ್ಲಿ ಹುಳಿ ಹಿಂಡುವ ಕೆಲಸವನ್ನು ಮಾಡುತ್ತಾರೆ. ಇದಕ್ಕೆಲ್ಲಾ ನಾವು ನೀವೆಲ್ಲಾ ಕಿವಿ ಕೊಡಬಾರದು, ಜಾತಿ ವ್ಯವಸ್ಥೆ ಹೋಗಬಾರದು ಮೇಲು- ಕೀಳು ಇನ್ನೂ ಜೀವಂತವಾಗಿರಬೇಕು ಎನ್ನುವುದು ಕೆಲವು ಶ್ರೀಮಂತರ ಮತ್ತು ಮೇಲ್ವರ್ಗದವರ ಆಶಯವಾಗಿದೆ ಎಂದು ಕಿಡಿಕಾರಿದರು.
ಸಮಾಜದಲ್ಲಿ ಇಂದಿಗೂ ಅಸಮಾನತೆ, ಜಾತಿ ವ್ಯವಸ್ಥೆ ಜಾರಿಯಲ್ಲಿದೆ. ಇದೆಲ್ಲಾ ದೇವರು ಮಾಡಿದ್ದಲ್ಲ, ನಮ್ಮ ಸ್ವಾರ್ಥಕ್ಕಾಗಿ ನಾವೇ ಮಾಡಿಕೊಂಡಿದ್ದು. ಸಮ ಸಮಾಜ ನಿರ್ಮಾಣ ಆಗಬೇಕು. ಬಸವಣ್ಣ 12ನೇ ಶತಮಾನದಲ್ಲಿ ಹೇಳಿದ್ದನ್ನೇ ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದಾರೆ. ಆದರೆ ಇದುವರೆಗೂ ಅದನ್ನು ಸಾಕಾರಗೊಳಿಸಲು ಬಿಡುತ್ತಿಲ್ಲ. ಪ್ರತಿಯೊಬ್ಬರೂ ಸಹಿಷ್ಣತೆ ಬೆಳೆಸಿಕೊಳ್ಳಬೇಕು. ನಮ್ಮ ಸರ್ಕಾರ ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಷ್ತಾಕ ಅವರನ್ನು ಆಹ್ವಾನಿಸಿದೆ. ಇದರಲ್ಲಿ ತಪ್ಪೇನಿದೆ? ಆದರೆ ಎರಡು ಬಾರಿ ಸಂಸದನಾದ ವ್ಯಕ್ತಿಯೋರ್ವ ಇದು ತಪ್ಪು ಎಂದು ಕೋರ್ಟಗೆ ಹೋದರು. ಸುಪ್ರೀಂ ಕೋರ್ಟ್ ಅವರಿಗೆ ಬುದ್ಧಿ ಹೇಳಿ ಕಳಿಸಿದೆ. ಪ್ರತಾಪ ಸಿಂಹನಂತವರು ರಾಜಕೀಯ ಸ್ವಾರ್ಥಕ್ಕೆ ಇದನ್ನೆಲ್ಲಾ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಎಲ್ಲಾ ಜಾತಿಗಳಲ್ಲಿನ ಬಡವರು, ಅಲ್ಪಸಂಖ್ಯಾತ ಅರಿತು ಕೊಳ್ಳಬೇಕು ಎಂದರು.ಕುರುಬ ಎಂದು ಬರೆಸಿ: ರಾಜ್ಯಾದ್ಯಂತ 22ರಿಂದ ಸಮೀಕ್ಷೆ ಪ್ರಾರಂಭವಾಗುತ್ತದೆ. ಅದರಲ್ಲಿಯೂ ನಮ್ಮ ಸಮಾಜದವರು ಕುರುಬ ಎಂದು ಬರೆಸಬೇಕು. ಕುರುಬರಲ್ಲಿ ಸಾಕಷ್ಟು ಜಾತಿಗಳಿವೆ, ಹಾಲುಮತ ಎಂದು ಹೇಳಿಕೊಳ್ಳುವವರು ಕೆಲವರಿದ್ದಾರೆ. ಹಾಲುಮತ ಎಂದರೆ ನಮ್ಮ ವೃತ್ತಿ ಬದಲಾಗುತ್ತದೆಯೇ, ಇಲ್ಲ, ನಾವು ಕುರಿ ಕಾಯುವವರು, ಕುರುಬ ಎಂದು ಬರೆಸಿದರೆ ಸಾಕು. ಈ ಸಮೀಕ್ಷೆ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಸಹಕಾರಿಯಾಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.ಗದಗ ಜಿಲ್ಲೆಗೂ ನನಗೂ 42 ವರ್ಷಗಳ ಅವಿನಾಭಾವ ನಂಟಿದೆ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಗದಗ ಜಿಲ್ಲೆಯ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ನಮ್ಮ ಸಮಾಜದ ಮುಖಂಡ ಫಕೀರಪ್ಪ ಹೆಬಸೂರ ಹಾಗೂ ನಾನು ಹಲವಾರು ವರ್ಷಗಳಿಂದ ಕೂಡಿ ಬೆಳೆದು ಬಂದವರು. ಅವರ ಸಮಾಜಮುಖಿ ಕಾರ್ಯಗುರುತಿಸಿ ಅಭಿನಂದಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.