ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹಿಜಾಬ್‌ಗೆ ಅವಕಾಶ ನೀಡುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಲ್ಲೂ ಜಾತಿ, ಧರ್ಮ ರಾಜಕಾರಣ ಮಾಡುತ್ತಿದ್ದಾರೆ. ಇದು ತುಷ್ಟೀಕರಣ ಪರಮಾವಧಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಟೀಕಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲೆ- ಕಾಲೇಜ್‌ಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡುವುದು ಎಷ್ಟು ಸರಿ? ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿದೆ. ಇಂತಹ ಸಂದರ್ಭದಲ್ಲಿ ಈ ಬಗ್ಗೆಹೇಳಿಕೆ ನೀಡುವ ಅಗತ್ಯವಾದರೂ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಯಾವುದೇ ಜಾತಿ ಮತ ಪಂಥಗಳಿರುವುದಿಲ್ಲ. ಆದರೆ, ಕಾಂಗ್ರೆಸ್ ವಿದ್ಯಾರ್ಥಿಗಳಲ್ಲೂ ರಾಜಕಾರಣ ಮಾಡುತ್ತಿದೆ. ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರ ಮತಗಳನ್ನು ಒಂದು ಕಡೆ ಮಾಡಿಕೊಳ್ಳಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದರು.ತಾಕತ್ತಿದ್ದರೆ ಶೆಟ್ಟರ್ ₹200 ಕೋಟಿ ತರಲಿ: ಶಾಸಕ ಟೆಂಗಿನಕಾಯಿ ಸವಾಲು
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನನಗೆ ಹಾಕಿರುವ ಸವಾಲನ್ನು ಸ್ವೀಕರಿಸುತ್ತೇನೆ. ಅವರಿಗೆ ತಾಕತ್ತಿದ್ದರೆ ಅವರದೇ ಸರ್ಕಾರವಿದೆ. ₹200- 300 ಕೋಟಿ ತಂದು ಸೆಂಟ್ರಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸವಾಲೆಸೆದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ತಾಕತ್ ಇದ್ದರೆ ₹10 ಕೋಟಿ ಅನುದಾನ ತಂದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಅದನ್ನು ನಾನು ಸ್ವೀಕರಿಸುತ್ತೇನೆ. ಶೀಘ್ರದಲ್ಲೇ ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ಕಾಂಗ್ರೆಸ್ ಪಕ್ಷದ್ದೇ ಸರ್ಕಾರವಿದೆ. ಹೀಗಾಗಿ, ತಮ್ಮ ಸರ್ಕಾರದಲ್ಲಿ ಶೆಟ್ಟರ್‌ಗೆ ತಾಕತ್ತಿದ್ದರೆ ₹200-300 ಕೋಟಿ ಅನುದಾನ ತಂದು ಸೆಂಟ್ರಲ್ ಕ್ಷೇತ್ರದ ಅಭಿವೃದ್ಧಿ ಮಾಡಲಿ. ಅನುದಾನ ತಂದರೆ ನಾನೇ ಅವರ ಮನೆಗೆ ಹೋಗಿ ಸನ್ಮಾನಿಸಿ ಬರುತ್ತೇನೆ ಎಂದರು.ನನ್ನ ಕ್ಷೇತ್ರದ ₹30 ಕೋಟಿ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿದ್ದೇನೆ. ಅದಕ್ಕೆ ಈಗಲೂ ಬದ್ಧವಾಗಿದ್ದೇನೆ. ಶೆಟ್ಟರ್ ಅವರೇ ತಾಂತ್ರಿಕ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಅದೇನು ತಾಂತ್ರಿಕ ಕಾರಣ? 224 ಕ್ಷೇತ್ರಗಳಲ್ಲಿ ನನ್ನ ಒಬ್ಬನ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ತಾಂತ್ರಿಕ ಕಾರಣ ಎದುರಾಗುತ್ತದೆಯಾ? ಎಂಬುದನ್ನು ಜನರಿಗೆ ತಿಳಿಸಲಿ. ಕುತಂತ್ರದಿಂದಲೇ ನನ್ನ ಕ್ಷೇತ್ರದ ಅನುದಾನ ತಡೆ ಹಿಡಿಸಿದ್ದಾರೆ ಎಂದು ಆರೋಪಿಸಿದರು.ನಾನು ರೆಡಿಮೇಡ್ ಕ್ಷೇತ್ರವನ್ನೇನೂ ತೆಗೆದುಕೊಂಡಿಲ್ಲ. ಬದಲಿಗೆ ಶೆಟ್ಟರ್ ಅವರನ್ನು ರೆಡಿ ಮಾಡಲು ಸಾಕಷ್ಟು ಕಾರ್ಯಕರ್ತರು ಬಲಿಯಾಗಿದ್ದಾರೆ ಎಂದು ತಿರುಗೇಟು ನೀಡಿದ ಅವರು, ನಾನು ಯಾವಾಗಲೂ ಟಫ್ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವುದು. ಹಿಂದೆಯೂ ನನಗೆ ಟಫ್ ಕ್ಷೇತ್ರಗಳಲ್ಲೇ ಉಸ್ತುವಾರಿಗಳನ್ನಾಗಿ ನೇಮಿಸಿದ್ದುಂಟು. ಆದರೆ, ಈ ಕ್ಷೇತ್ರದಲ್ಲಿ 30 ವರ್ಷದಿಂದ ಆಯ್ಕೆಯಾಗಿ ಬಂದವರನ್ನು ರೆಡಿ ಮಾಡಲು ಸಾಕಷ್ಟು ಜನ ಬಲಿಯಾಗಿದ್ದಾರೆ. ಚೆನ್ನಮ್ಮ ಸರ್ಕಲ್ ಗಲಭೆ ವೇಳೆ ನಡೆದ ಗೋಲಿಬಾರ್‌ನಲ್ಲಿ 6 ಜನ ಬಲಿಯಾಗಿದ್ದರು. ಅದನ್ನೆಲ್ಲ ಈಗ ಅವರು ಮರೆತ್ತಿದ್ದಾರೆ ಎಂದು ಕಿಡಿಕಾರಿದರು.ಕಾಂಗ್ರೆಸ್‌ನಲ್ಲಿ ಅವರಿಗೆ ಸರಿಯಾಗಿ ಗೌರವ ಸಿಗುತ್ತಿಲ್ಲ. ಎಷ್ಟು ದಿನ ಅಲ್ಲಿ ಇರುತ್ತಾರೋ, ಮತ್ತೆ ಯಾವಾಗ ನಮ್ಮ ಕಡೆ ಬರುತ್ತಾರೋ ಗೊತ್ತಿಲ್ಲ ಎಂದು ತೆಂಗಿನಕಾಯಿ ಲೇವಡಿ ಮಾಡಿದರು.