ಸೋಮರಡ್ಡಿ ಅಳವಂಡಿ
ಕೊಪ್ಪಳ: ಅಯ್ಯಪ್ಪ ಸ್ವಾಮಿಯ ಭಕ್ತರಂತೆ ಅಂಜನಾದ್ರಿಯ ಆಂಜನೇಯನ ಭಕ್ತರು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಹನುಮಮಾಲಾಧಾರಿಗಳು ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕಾಗಿ ಅಂಜನಾದ್ರಿಯತ್ತ ಧಾವಿಸುತ್ತಿದ್ದಾರೆ. ಇಡೀ ಅಂಜನಾದ್ರಿ ಕೇಸರಿಮಯವಾಗಿದೆ. ಎಲ್ಲಿ ನೋಡಿದರೂ ಹನುಮಮಾಲಾಧಾರಿಗಳೇ ಕಾಣಸಿಗುತ್ತಾರೆ. ಸುಮಾರು 1 ಲಕ್ಷಕ್ಕೂ ಅಧಿಕ ಹನುಮಮಾಲಾಧಿಕಾರಿಗಳು ಬರಲಿದ್ದಾರೆ ಎನ್ನುವ ಜಿಲ್ಲಾಡಳಿತದ ನಿರೀಕ್ಷೆ ಮೀರಿಸುವ ಸಾಧ್ಯತೆ ಇದೆ.ಹನುಮಮಾಲಾಧಾರಿಗಳ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಡಿ.24ರಂದು ಇದ್ದು, ಅದಕ್ಕೂ ಮುನ್ನಾ ದಿನವಾದ ಶನಿವಾರವೇ ಸುಮಾರು 30-40 ಸಾವಿರಕ್ಕೂ ಅಧಿಕ ಹನುಮಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ.ಆನೇಗೊಂದಿಯ ಚಿಕ್ಕರಾಂಪುರ ಹತ್ತಿರದ ಅಂಜನಾದ್ರಿ ಬೆಟ್ಟ ಹನುಮ ಜನ್ಮಭೂಮಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹತ್ತು ಹಲವು ಬಗೆಯ ವಿದ್ಯುತ್ ದೀಪಗಳ ಅಲಂಕಾರದಿಂದಾಗಿ ಸಂಜೆ ವೇಳೆಯಿಂದ ಮನಮೋಹಕ ದೃಶ್ಯವಾಗಿ ಅಂಜನಾದ್ರಿ ಬೆಟ್ಟವು ಸುತ್ತ ಎತ್ತೆತ್ತಲೂ ಬಹುದೂರದಿಂದಲೇ ಕಣ್ಮನ ಸೂರೆಗೊಳ್ಳುತ್ತಿದೆ.ಅಂಜನಾದ್ರಿಯಲ್ಲಿ ಸೆಲ್ಫಿ ಪಾಯಿಂಟ್ ಮಾಡಲಾಗಿದೆ. ಆಂಜನೇಯ ದೇವರ ಪ್ರತಿರೂಪವನ್ನು ಮತ್ತು ಅಂಜನಾದ್ರಿ ಬೆಟ್ಟದ ಸೆಲ್ಫಿ ಪಾಯಿಂಟ್ ಮಾಡಲಾಗಿದ್ದು, ಸೆಲ್ಫಿ ತೆಗೆಸಿಕೊಳ್ಳಲು ಸಹ ಸರದಿಯಲ್ಲಿ ಭಕ್ತರು ಕಾಯಬೇಕಾಗಿದೆ.
ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿಗೆ ಹನುಮಮಾಲೆ ಧರಿಸಿ ಬರುತ್ತಿರುವ ಭಕ್ತರು ಕೇವಲ ಕೊಪ್ಪಳ ಸುತ್ತಮುತ್ತಲ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಮೂಲೆ ಮೂಲೆಯಿಂದಲು ಭಕ್ತರು ಆಗಮಿಸುತ್ತಿರುವುದು ವಿಶೇಷ.ಪಶ್ಚಿಮಬಂಗಾಳ, ಮಹಾರಾಷ್ಟ್ರ, ಆಂಧ್ರ, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಗುಜರಾಜ ಸೇರಿದಂತೆ ಹಲವು ರಾಜ್ಯಗಳಿಂದಲೂ ಹನುಮಮಾಲಾಧರಿಸಿಕೊಂಡು ಭಕ್ತರು ಆಗಮಿಸಿದ್ದಾರೆ ಎನ್ನುವುದು ವಿಶೇಷ.
ಬಂದಿರುವ ಭಕ್ತರು ಅಂಜನಾದ್ರಿಗೆ ಆಗಮಿಸುವುದಕ್ಕೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ನಿಯಂತ್ರಣ ಮಾಡಲು ನಿಗದಿತ ವಾಹನಗಳಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ಅಂಜನಾದ್ರಿಗೆ ಆಗಮಿಸುವ ರಸ್ತೆಯಲ್ಲಿ ಈಗಾಗಲೇ ಉಚಿತ ಬಸ್ಸಿನ ವ್ಯವಸ್ಥೆಯನ್ನು ಜಿಲ್ಲಾಡಳಿತದ ನೆರವನಿಂದ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆ ಮಾಡಿದೆ.ಏನಿದು ಹನುಮಾಲಾಧಾರಿಗಳು: ದತ್ತ ಮಾಲೆ ಹಾಕುವುದನ್ನು ಕೇಳಿದ್ದೇವೆ, ಅಯ್ಯಪ್ಪ ಮಾಲೆ ಹಾಕುವುದನ್ನು ಕೇಳಿದ್ದೇವೆ. ಈಗ ಕಳೆದ ಕೆಲ ವರ್ಷಗಳಿಂದ ಹನುಮ ಮಾಲೆ ಧರಿಸುವವರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಲಕ್ಷ ಲಕ್ಷ ಭಕ್ತರು ಹನುಮಮಾಲೆ ಧರಿಸುತ್ತಿರುವುದರಿಂದ ಅಂಜನಾದ್ರಿ ಹನುಮಮಾಲೆ ಈಗ ದೇಶ ವ್ಯಾಪಿಯಾಗುತ್ತಿದೆ.2007ರಲ್ಲಿ ಹನುಮಮಾಲೆ ಧರಿಸುವ ಪದ್ಧತಿ ಆರಂಭವಾಯಿತು. ಕೇವಲ ಏಳು ಭಕ್ತರು ಗಂಗಾವತಿಯಲ್ಲಿ ಹನುಮಮಾಲೆ ಹಾಕುವ ಮೂಲಕ ಸಂಪ್ರದಾಯ ಪ್ರಾರಂಭಿಸಿದರು. ಅಲ್ಲಿಂದ ಶುರುವಾಗಿದ್ದು ಈಗ ಲಕ್ಷ ಲಕ್ಷ ಭಕ್ತರು ಹನುಮಮಾಲೆ ಧರಿಸುತ್ತಾರೆ. ಆಂಜನೇಯ ವ್ರತ ಮಾಡಿ, ಪೂರ್ಣಗೊಳಿಸಿದ ಧ್ಯೋತಕವಾಗಿ ಹನುಮಮಾಲಾಧಾರಣೆ ಮಾಡಲಾಗುತ್ತದೆ. ವೃತ ಪೂರ್ಣಗೊಳಿಸಿದ ನಕ್ಷತ್ರದ ಆಧಾರದ ಮೇಲೆ ಪ್ರತಿ ವರ್ಷ ವಿಸರ್ಜನೆ ಕಾರ್ಯಕ್ರಮ ನಡೆಯುತ್ತದೆ.
41, 21, 18, 9, 3 ಹಾಗೂ ಒಂದು ದಿನ ಕೂಡ ಹನುಮಮಾಲೆ ಧರಿಸುವವರು ಇದ್ದಾರೆ.ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಹನುಮಮಾಲಾಧಾರಿಗಳ ವಿಸರ್ಜನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಗೋಧಿ ಹುಗ್ಗಿ, ಅನ್ನ, ಸಾಂಬರ, ಟೊಮೆಟೋ ಉಪ್ಪಿನಕಾಯಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.