ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ಉಳ್ಳಾಲ ಬಟ್ಟಪಾಡಿ ಸಮೀಪ ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮುಳುಗಡೆಯಾದ ಸರಕು ಸಾಗಾಟ ಹಡಗುನ್ನು ಹೈಕೋರ್ಟ್ ಸೂಚನೆ ಮೇರೆಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಮುದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದರು.ಈ ನೌಕೆ ಮುಳುಗಡೆಯಾಗಿ ಒಂದೂವರೆ ವರ್ಷವಾಗಿದೆ. ಚೀನದಿಂದ ಲೆಬನಾನ್‌ಗೆ 8 ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ವೇಳೆ ಉಳ್ಳಾಲದ ಬಟ್ಟಪಾಡಿ ಬಳಿ ಮುಳುಗಡೆಯಾಗಿದ್ದ ಹಡಗಿನಿಂದ ಡೀಸೆಲ್‌ನ್ನು ಹೊರತೆಗೆಯಲಾಗಿತ್ತು. ಹಣ ಪಾವತಿಗೆ ಬಾಕಿ ಇರಿಸಿದ ಕಾರಣಕ್ಕೆ ಹಡಗು ಮುಟ್ಟುಗೋಲು ಹಾಕಲು ಹೈಕೋರ್ಟ್ ದ.ಕ. ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಇತರ ಅಧಿಕಾರಿಗಳು, ತಜ್ಞರನ್ನು ಒಳಗೊಂಡ ಜಿಲ್ಲಾಧಿಕಾರಿ ನೇತೃತ್ವದ ತಂಡ ಇತ್ತೀಚೆಗೆ ಸಮುದ್ರಕ್ಕೆ ತೆರಳಿ ಮುಳುಗಡೆಯಾಗಿದ್ದ ಎಂವಿ ಪ್ರಿನ್ಸೆಸ್ ಮಿರಾಲ್ ಹಡಗಿನ ಪ್ರಸ್ತುತ ಸ್ಥಿತಿಗತಿಗಳ ಪರಿಶೀಲನೆ ನಡೆಸಿದ್ದಾರೆ.ಮಂಗಳೂರು ಉಳ್ಳಾಲ ತೀರಕ್ಕೆ ಸನಿಹದಲ್ಲೇ ಈ ವಿದೇಶಿ ಹಡಗು 2022 ಜೂನ್ 20 ರಂದು ಪ್ರತಿಕೂಲ ಹವಾಮಾನ ವೈಪರಿತ್ಯದಿಂದಾಗಿ ಅವಘಡಕ್ಕೀಡಾಗಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. 8,000 ಟನ್ ಉಕ್ಕಿನ ಕಾಯಿಲ್ ತುಂಬಿಸಿಕೊಂಡು ಚೀನಾದ ಟಿಯಾಂಜಿನ್‌ನಿಂದ ಲೆಬನಾನ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು.
ಈ ಸಂದರ್ಭ ಹಡಗಿನಲ್ಲಿದ್ದ 15 ಸಿರಿಯಾ ದೇಶದ ನಾವಿಕರನ್ನು ಕೋಸ್ಟ್ ಗಾರ್ಡ್ ಸಹಾಯದಿಂದ ರಕ್ಷಿಸಲಾಗಿತ್ತು. ಹಡಗು ಮುಳುಗಡೆಯಾಗಿ ಸರಿ ಸುಮಾರು 18 ತಿಂಗಳು ಕಳೆದಿದೆ. ಹಡಗಿನ ಅವಶೇಷಗಳಿಂದ ಈ ಭಾಗದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಭಾರಿ ತೊಂದರೆ ಎದುರಾಗುತ್ತಿದ್ದು ಲಕ್ಷಾಂತರ ರುಪಾಯಿ ಬೆಲೆ ಬಾಳುವ ಮೀನಿನ ಬಲೆಗಳು ಹಡಗಿನ ಅವಶೇಷಗಳಿಗೆ ಸಿಲುಕಿ ವ್ಯಾಪಕ ನಷ್ಟ ಅನುಭವಿಸುತ್ತಿದ್ದಾರೆ.ಯುಎಇಗೆ ಸೇರಿದ ಮೊಂಜಾಸ ಡಿಎಂಸಿಸಿ ಎಂಬ ಕಂಪೆನಿಯು ಹೈಕೋರ್ಟ್ ಅರ್ಜಿ ಸಲ್ಲಿಸಿ ತನಗೆ ಶಿಪ್ ಬಂಕರಿಂಗ್ ತೈಲ ಪೂರೈಕೆ ಮಾಡಿದಕ್ಕೆ 1.39 ಕೋಟಿ ರು. ಬಾಕಿ ಬರಬೇಕಾಗಿದ್ದು ಶಿಪ್ಪಿಂಗ್ ಕಂಪೆನಿಯಿಂದ ಇದುವರೆಗೂ ಹಣ ಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಾಕಿ ಹಣ ಬರುವವರೆಗೂ ಪ್ರಿನ್ಸೆಸ್ ಮಿರಾಲ್ ಹಡಗನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಹಡಗಿನ ಬಿಡಿಭಾಗಗಳನ್ನು ಮಾರಾಟ ಮಾಡಿಸಿ ಅದರಿಂದ ಬರುವ ಮೊತ್ತದಿಂದ ತನ್ನ ನಷ್ಟವನ್ನು ಭರಿಸುವಂತೆ ಆದೇಶಿಸಬೇಕು ಎಂದು ಕೇಳಿಕೊಂಡಿತ್ತು.
ಅದರಂತೆ ವಿಚಾರಣೆ ನಡೆಸಿರುವ ಹೈಕೋರ್ಟ್ ನವೆಂಬರ್ ತಿಂಗಳಿನಲ್ಲಿ ಆದೇಶ ನೀಡಿ ಹಡಗನ್ನು ಮುಟ್ಟುಗೋಲು ಹಾಕುವಂತೆ ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ಆದೇಶ ನೀಡಿತ್ತು. ಆದರೆ ನೌಕೆಯು ಮುಳುಗಡೆಯಾದ ಪ್ರದೇಶ ತನ್ನ ವ್ಯಾಪ್ತಿಯಲ್ಲಿಲ್ಲ, ಬದಲಾಗಿ ರಾಜ್ಯ ಸರ್ಕಾರದ ಅಧೀನ ವ್ಯಾಪ್ತಿಯ ಹಳೆ ಬಂದರು ಪ್ರದೇಶಕ್ಕೆ ಸೇರಿದ್ದಾಗಿ ಮತ್ತು ಜಿಲ್ಲಾಡಳಿತ ಈ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟಿಗೆ ಎನ್‌ಎಂಪಿಎ ಮನವರಿಕೆ ಮಾಡಿತ್ತು.ಪ್ರಸ್ತುತ ಹಡಗಿನ ಸ್ಥಿತಿಗತಿಗಳ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.