ಕನ್ನಡಪ್ರಭ ವಾರ್ತೆ ಸಕಲೇಶಪುರಜಾತಿ ವಿಚಾರ ಮನೆಯೊಳಗೆ ಮಾತ್ರ ಸೀಮಿತವಾಗಿರಬೇಕು. ಅದನ್ನು ಧರ್ಮದ ಅಂಗಳಕ್ಕೆ ತಂದರೆ ಧರ್ಮ ಒಡೆದು ಹೋಗಲು ಕಾರಣವಾಗುತ್ತದೆ ಎಂದು ಗುರುಪುರದ ವಜ್ರದೇಹಿ ಮಠದ ರಾಜಶೇಖರನಂದಾ ಸ್ವಾಮೀಜಿ ಹೇಳಿದರು.ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜ ಬಲಿಷ್ಠವಾಗಬೇಕಾದರೆ ಸಂಘಟನೆ ಅಗತ್ಯ, ಈ ನಿಟ್ಟಿನಲ್ಲಿ ನಾವೆಲ್ಲ ಸಂಘಟಿತರಾಗಬೇಕು. ವಂದೇಮಾತರಂ ಗೀತೆಗೆ 150 ವರ್ಷಗಳ ಇತಿಹಾಸವಿದ್ದು ಹಾಗೂ ಆರ್‌ಎಸ್‌ಎಸ್ ಸಂಘಟನೆಗೆ 100 ವರ್ಷಗಳ ಪಯಣವಿದೆ. ಆದರೂ ಒಬ್ಬ ಸಚಿವ ಸಂಘವನ್ನು ನಿಷೇಧ ಮಾಡುತ್ತೇನೆ ಎಂದು ಹೇಳಿಕೆ ನೀಡುತ್ತಾನೆ. ನಮ್ಮ ಗುಲಾಮಿ ಮಾನಸಿಕತೆಯಿಂದ ಅವರಿಗೆ ತಕ್ಕ ಉತ್ತರ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಹಿಂದೂಗಳು ಗುಲಾಮಿ ಮಾನಸಿಕತೆಯಿಂದ ಹೊರ ಬರಬೇಕಾಗಿದೆ. ಆಮಿಷಗಳ ಮೂಲಕ ಸಮಾಜವನ್ನು ಒಡೆಯುವ ಪ್ರಯತ್ನಗಳು ಉಂಟಾಗುತ್ತಿದೆ.ಲಿಂಗಾಯಿತರೂ ಹಿಂದೂ ಸಮಾಜದ ಅವಿಭಾಜ್ಯ ಅಂಗ ಆದರೆ ಕೆಲವರು ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮ ಎಂದು ಹೇಳುವುದು ಎಷ್ಟ್ಟು ಸರಿ? ಜಾತಿ ವಿಚಾರವನ್ನು ಮನೆಗೆ ಮಾತ್ರ ಸೀಮಿತಗೊಳಿಸಬೇಕು. ಜಾತಿ ಭೇದವನ್ನು ಸಮಾಜದ ಅಂಗಳಕ್ಕೆ ತಂದರೆ ಧರ್ಮಕ್ಕೆ ಧಕ್ಕೆಯಾಗುತ್ತದೆ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಉದಾಹರಿಸಿ, ಇಂತಹ ವಿಚಾರಗಳ ಬಗ್ಗೆ ಈ ಸಮಯದಲ್ಲೇ ಚಿಂತನೆ ನಡೆಸದಿದ್ದರೆ ಆ ಪರಿಸ್ಥಿತಿ ಇಲ್ಲಿಗೂ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಸ್ವಾಮಿ ವಿವೇಕಾನಂದರು ಕೇವಲ 33 ವರ್ಷಗಳಲ್ಲೇ ಜಗತ್ತಿಗೆ ದಾರಿ ತೋರಿಸಿದ್ದಾರೆ. ಸಂಸ್ಕೃತಿ ರಕ್ಷಣೆ ಬಗ್ಗೆ ಮಾತನಾಡಿದರೆ ಜೈಲು, ಆದರೆ ಟಿಪ್ಪು ವಿಷಯ ಶಿಕ್ಷಣಕ್ಕೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹಿಂದುಗಳು ಸಂಘಟಿತರಾಗಬೇಕಾದ ಅವಶ್ಯಕತೆ ಇದೆ ಎಂದರು.ಆರ್‌ಎಸ್ಎಸ್‌ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೆಂಡೆ ಮಾತನಾಡಿ ಭಾರತ ಜಗತ್ತಿನಲ್ಲೇ ವಿಶಿಷ್ಟ ದೇಶ. ದೇವತೆಗಳೇ ಇಲ್ಲಿ ಜನ್ಮ ಪಡೆದಿದ್ದಾರೆ. ಈ ದೇಶದಲ್ಲಿ ಜನ್ಮ ಪಡೆಯುವುದು ಭಾಗ್ಯ. ಬೇರೆ ದೇಶದವರು ತಮ್ಮ ಹಿತದ ಬಗ್ಗೆ ಮಾತ್ರ ಚಿಂತಿಸಿದರೆ ಜಗತ್ತಿನ ಹಿತದ ಬಗ್ಗೆ ಚಿಂತನೆ ಮಾಡುವುದು ಭಾರತೀಯ ಸಂಸ್ಕೃತಿಯ ಮೂಲ ಸ್ವಭಾವವಾಗಿದೆ.ಸ್ವಾಮಿ ವಿವೇಕಾನಂದರು ಅಮೇರಿಕಾದಲ್ಲಿ “ಸಹೋದರರೇ, ಸಹೋದರಿಯರೇ” ಎಂದು ಮಾಡಿದ ಎರಡು ಪದದ ಸಂಬೋಧನೆಯೇ ಜಗತ್ತಿನ ಗಮನ ಸೆಳೆದಿತ್ತು. ಭಾರತ ಜಗತ್ತಿಗೆ ಜ್ಞಾನ ನೀಡುವ ಪ್ರಯತ್ನ ಮಾಡಿದ್ದು ಕತ್ತಿಯನ್ನು ಹಿಡಿದು ಎಂದು ನಡೆದಿಲ್ಲ. ಅನೇಕರು ಹಿಂದೂ ಧರ್ಮ, ಸಂಸ್ಕೃತಿ ಮತ್ತು ಭೂಮಿಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಧರ್ಮ ಮತ್ತು ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೂ ತ್ಯಜಿಸಬಾರದು.ಬ್ರಿಟೀಷರು ಹಾಗೂ ಮೊಘಲರು ದೇಶದ ಸಂಪತ್ತನ್ನು ಲೂಟಿ ಮಾಡಿದಲ್ಲದೆ ನಮ್ಮ ಸಂಸ್ಕೃತಿಯ ಮೇಲೆ ನಿರಂತರ ದಾಳಿ ನಡೆಸಿದರು. ಮೆಕಾಲೆಯ ಶಿಕ್ಷಣ ನೀತಿಯಿಂದ ಹಿಂದೂ ಸಮಾಜವನ್ನು ವಿಭಜನೆ ಮಾಡುವ ಯತ್ನ ಮಾಡಿದರು. ದೇಶದಲ್ಲಿ ಒಂದು ಕಡೆ ಹಿಂದೂ ಜಾಗೃತಿ ಹೆಚ್ಚುತ್ತಿರುವಾಗ, ಮತ್ತೊಂದು ಕಡೆ ದೇಶವನ್ನು ಛಿದ್ರಗೊಳಿಸುವ ಯತ್ನಗಳು ನಡೆಯುತ್ತಿವೆ. ನಾವು ನಮ್ಮದೇ ಗುರುತನ್ನು ಮರೆಯುವ ಸ್ಥಿತಿ ನಿರ್ಮಾಣವಾಗಿದೆ. ಅಯೋಧ್ಯೆ ರಾಮಮಂದಿರ, ಅಮರನಾಥ ಯಾತ್ರೆ, ತಿರುಪತಿ ದೇವಸ್ಥಾನದ ಏಳು ಬೆಟ್ಟಗಳ ವಿಚಾರ ಹಾಗೂ ರಾಮಸೇತು ರಕ್ಷಣಾ ಹೋರಾಟಗಳನ್ನು ಹಿಂದೂ ಸಮಾಜ ಒಗ್ಗಟ್ಟಾಗಿ ಮಾಡಿದ ಪರಿಣಾಮ ಸರ್ಕಾರಗಳ ನಿರ್ಧಾರ ಬದಲಿಸಲು ಸಾಧ್ಯವಾಗುತ್ತದೆ. ಹೀಗಾಗಿ ಹಿಂದೂ ಸಮಾಜ ಒಗ್ಗೂಡಬೇಕು ಸಮಾಜ ಒಗ್ಗೂಡಿದರೆ ಮಾತ್ರ ಧರ್ಮ ರಕ್ಷಣೆ ಸಾಧ್ಯ ಎಂದರು.ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಸಭಾ ಕಾರ್ಯಕ್ರಮ ನಡೆದ ಗುರುವೇ ಗೌಡ ಕಲ್ಯಾಣ ಮಂಟಪದ ಆವರಣದವರೆಗೆ ಶೋಭಾ ಯಾತ್ರೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲ ಷಣ್ಮುಖ, ಸಮಾಜ ಸೇವಕ ಅನ್ವಯ್ ಪ್ರಶಾಂತ್, ಮೇಘನಾ ದೇವಾಲದ ಕೆರೆ, ಆರ್‌ಎಸ್‌ಎಸ್ ಮುಖಂಡರುಗಳಾದ ನಂದನ್, ಹೊಸಕೋಟೆ ನವೀನ್, ಜಂಬರಡಿ ಲೋಹಿತ್, ಆಟೋ ರವಿ, ಅಣ್ಣಪ್ಪ ಸ್ವಾಮಿ, ಸ್ಟುಡಿಯೋ ರಘು, ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಮುಂತಾದವರು ಹಾಜರಿದ್ದರು.