ಹರಿಹರ: ಕಾಯಕ ನಿಷ್ಠೆ, ದಕ್ಷತೆ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ಕಳಕಳಿಯನ್ನು ಹೊಂದಿ, ಸಮಾಜದ ಜನರ ಒಳಿತಿಗಾಗಿ ಯಾರು ಶ್ರಮಿಸುತ್ತಾರೆಯೋ, ಅವರನ್ನು ಸಮಾಜ ಸದಾಕಾಲವೂ ಸ್ಮರಣೆ ಮಾಡುತ್ತದೆ. ಅಂತಹ ವ್ಯಕ್ತಿಗಳ ಸಾಲಿನಲ್ಲಿ ನಗರಸಭೆಯ ಸದಸ್ಯ ವಿರೂಪಾಕ್ಷಪ್ಪ ಒಬ್ಬರಾಗಿದ್ದರು ಎಂದು ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಮೃತ್ಯುಂಜಯ ಶ್ರೀ ನುಡಿದರು.
ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಕ್ಕೆ ಪಾದಯಾತ್ರೆ ಮಾಡಿದಾಗ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ದೊಡ್ಡ ಸಮಾವೇಶದಲ್ಲಿ ಮೈಕ್ ಮತ್ತು ವೇದಿಕೆಯ ಜವಾಬ್ದಾರಿ ಕೊಟ್ಟಾಗ, ಅದನ್ನು ನಿಷ್ಠೆಯಿಂದ ಮಾಡಿದ್ದರು. ಆ ಮೂಲಕ ಸಮಾರಂಭದಲ್ಲಿ ನಡೆದ ಧ್ವನಿ ದೇಶದಾದ್ಯಂತ ಮುಟ್ಟಿಸುವಂತಹ ಯಶಸ್ಸು ಬಹಳಷ್ಟು ಸಂಚಲನ ಮಾಡಿತು ಎಂದು ಸ್ಮರಿಸಿದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ವಿರೂಪಾಕ್ಷ ಅವರು ನಮ್ಮ ಮನೆಯ ಮಗನಂತೆ ನಮ್ಮ ತಂದೆಯವರ ಕಾಲದಿಂದ ಜೊತೆಗೆ ಇದ್ದವರು. ಅವರು ಸಮಾಜದ ಆಶಾಕಿರಣ. ಸೌಜನ್ಯದ ಮತ್ತು ಸರಳ ವ್ಯಕ್ತಿತ್ವದ ವಿನಯಶೀಲರಾಗಿದ್ದರು. ತಮಗೆ ಅಧಿಕಾರ ಬಂದರೂ ಬೆಳೆಸಿದವರಿಗೆ ಮತ್ತು ತಮ್ಮನ್ನು ಆಯ್ಕೆ ಮಾಡಿದವರಿಗೆ ಎಂದೂ ಮೋಸ ಮಾಡಲಿಲ್ಲ. ಆದ್ದರಿಂದ ಎಲ್ಲ ಜನಾಂಗದವರು ಹೆಚ್ಚು ಮತವನ್ನು ಕೊಟ್ಟು ಗೆಲ್ಲಿಸುವಂತಾಗಿತ್ತು ಎಂದರು.ನಾವು ಹುಟ್ಟಿದ ಜಾತಿಯಿಂದ ದೊಡ್ಡವರಾಗೋದಿಲ್ಲ. ನಾವು ಇಡುವ ಹೆಜ್ಜೆ, ಒಳ್ಳೆಯ ಮಾತು, ಉತ್ತಮ ನಡೆಗಳಿಂದ ಮಾತ್ರ ಸಮಾಜದಲ್ಲಿ ದೊಡ್ಡವರು ಎನಿಸಲು ಸಾಧ್ಯ. ರಾಜಕೀಯವಾಗಿ ಬೆಳೆಯಲು ಸಮಾಜವನ್ನು ಬಳಕೆ ಮಾಡಲಿಲ್ಲ. ಆಗಾಗಿ, ಎಲ್ಲ ಸಮಾಜದವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ನಿಧನ ನಮ್ಮ ಕುಟುಂಬ ಮತ್ತು ಸಮಾಜಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಪರೋಪಕಾರ ಮತ್ತು ಒಳ್ಳೆಯ ಸಂಸ್ಕಾರ ಹೊಂದಿದಾಗ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಲಿಕ್ಕೆ ಸಾಧ್ಯವಾಗುತ್ತದೆ. ವಿರೂಪಾಕ್ಷ ಬಹಳ ಸಂಪನ್ನವ್ಯಕ್ತಿಯಾಗಿದ್ದರು ಎಂದರು.ದಾವಣಗೆರೆ ವಿರಕ್ತ ಮಠದ ಬಸವಪ್ರಭು ಶ್ರೀ ಮಾತನಾಡಿ, ವಿರೂಪಾಕ್ಷಪ್ಪ ಅವರು ಕಾಯಕ, ಧಾರ್ಮಿಕ ಮತ್ತು ರಾಜಕೀಯ, ಮುಂತಾದ ಕಾರ್ಯಕ್ರಮದಲ್ಲಿ ಸೇವಾ ಮನೋಭಾವ ಹೊಂದಿದ್ದರು ಎಂದು ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಅವರಿಗೆ ಮನೆಯಲ್ಲಿ ಆರ್ಥಿಕ ಕಷ್ಟ ಇದ್ದರೂ ಬಡವರಿಗೆ ಸಹಕಾರ ಮಾಡಿ ಜನರ ಹೃದಯದಲ್ಲಿ ನೆಲಸುವ ಮಾನವೀಯ ಮೌಲ್ಯಗಳನ್ನು ಹೊಂದಿದ್ದರು ಎಂದು ಹೇಳಿದರು.ಪುಣ್ಯಕೋಟಿ ಜಗದೀಶ್ವರ ಶ್ರೀ ಮಾತನಾಡಿದರು. ದಾವಣಗೆರೆ ನಗರ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ, ಶೇಖರಪ್ಪ, ರವಿವರ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಶಿವರಾಮ, ಭಾಗೀರತಿ ವಿರೂಪಾಕ್ಷ, ಎಂ.ಬಿ. ಅಣ್ಣಪ್ಪ ಇತರರು ಉಪಸ್ಥಿತರಿದ್ದರು.
- - --29HRR.01 & 01 A:
ಹರಿಹರದ ಮರಿಯಾ ಸಭಾಂಗಣದಲ್ಲಿ ನಗರಸಭೆ ಸದಸ್ಯನಾಗಿದ್ದ ಪಿ.ಎನ್. ವಿರೂಪಾಕ್ಷ ಶ್ರದ್ಧಾಂಜಲಿ ಸಭೆ ನಡೆಯಿತು.