ಜಿಲ್ಲೆಯಲ್ಲಿ ಡ್ರಗ್ಸ್‌ ನಿಯಂತ್ರಣ ನನ್ನ ಮೊದಲ ಆದ್ಯತೆ

KannadaprabhaNewsNetwork |  
Published : Jan 30, 2026, 01:45 AM IST
29ಎಚ್ಎಸ್ಎನ್5 : ಪತ್ರಕರ್ತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಎಸ್ಪಿ ಶಿಭಾನ್ವಿತಾ. | Kannada Prabha

ಸಾರಾಂಶ

ಸಮಾಜದಲ್ಲಿ ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳು ಸಮಾಜದ ಎರಡು ಪ್ರಮುಖ ಕಂಬಗಳಾಗಿದ್ದು, ಎರಡೂ ವೃತ್ತಿಗಳ ನಡುವೆ ನಂಬಿಕೆ ಮತ್ತು ಸಹಕಾರ ಇರಬೇಕಾದ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದರು. ಮಾಧ್ಯಮದ ಪಾತ್ರ ಉತ್ತಮ ಸಮಾಜ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಸತ್ಯಕ್ಕಿಂತ ಸುಳ್ಳು ಸುದ್ದಿಗಳು ವೇಗವಾಗಿ ವೈರಲ್ ಆಗುತ್ತಿರುವ ಈ ವೇಳೆ ನಿಖರ, ಸಮತೋಲನದ ಹಾಗೂ ಹೊಣೆಗಾರಿಕೆಯಿಂದ ಕೂಡಿದ ವರದಿ ನೀಡುವ ಜವಾಬ್ದಾರಿ ಮಾಧ್ಯಮದ ಮೇಲಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಭವಿಷ್ಯವನ್ನು ಸುಧಾರಿಸುವ ದೃಷ್ಟಿಯಿಂದ ನಶಾ ಮುಕ್ತಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ ಮೇಲೆ ವಿಶೇಷ ಒತ್ತು ನೀಡುವುದು, ರಸ್ತೆ ಅಪಘಾತ ತಡೆಗೆ ಕ್ರಮ, ಬಾಂಗ್ಲಾ ವಲಸಿಗರ ಕುರಿತು ಕ್ರಮ ವಹಿಸಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳು ಸಮಾಜದ ಎರಡು ಪ್ರಮುಖ ಕಂಬಗಳಾಗಿದ್ದು, ಎರಡೂ ವೃತ್ತಿಗಳ ನಡುವೆ ನಂಬಿಕೆ ಮತ್ತು ಸಹಕಾರ ಇರಬೇಕಾದ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದರು. ಮಾಧ್ಯಮದ ಪಾತ್ರ ಉತ್ತಮ ಸಮಾಜ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಸತ್ಯಕ್ಕಿಂತ ಸುಳ್ಳು ಸುದ್ದಿಗಳು ವೇಗವಾಗಿ ವೈರಲ್ ಆಗುತ್ತಿರುವ ಈ ವೇಳೆ ನಿಖರ, ಸಮತೋಲನದ ಹಾಗೂ ಹೊಣೆಗಾರಿಕೆಯಿಂದ ಕೂಡಿದ ವರದಿ ನೀಡುವ ಜವಾಬ್ದಾರಿ ಮಾಧ್ಯಮದ ಮೇಲಿದೆ ಎಂದರು.ಡ್ರಗ್ಸ್ ನಿರ್ಮೂಲನೆಗೆ ಆದ್ಯತೆ:

ಡ್ರಗ್ಸ್ ಬಳಕೆಯಿಂದ ಹೊರಬರಲು ಇಚ್ಛಿಸುವವರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ನಶೆ ವಿರುದ್ಧದ ಹೋರಾಟ ಕೇವಲ ಕಾನೂನು ಕ್ರಮಕ್ಕೆ ಸೀಮಿತವಾಗದೇ, ಸಾಮಾಜಿಕ ಜವಾಬ್ದಾರಿಯೂ ಆಗಿದೆ ಎಂದರು. ನಶಾ ಸಮಸ್ಯೆ ನಿರ್ಮೂಲನೆಗೆ ಮೊದಲು ಡ್ರಗ್ಸ್ ಪೂರೈಕೆದಾರರನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಿದ್ದು, ನಂತರ ಬಳಕೆದಾರರ ಮೇಲೂ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಮಹಿಳೆಯರು ಮತ್ತು ಮಕ್ಕಳ ರಕ್ಷಣೆ:

ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ತಮ್ಮ ಎರಡನೇ ಪ್ರಮುಖ ಆದ್ಯತೆಯಾಗಿದ್ದು, ದೂರು ಸಲ್ಲಿಸಲು ಮಹಿಳೆಯರಿಗೆ ಸುಲಭ ಮತ್ತು ಭಯರಹಿತ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ‘ಶೀ ಬಾಕ್ಸ್’ ಅಳವಡಿಸಲಾಗುತ್ತಿದ್ದು, ಅದರ ಕೀ ಪೊಲೀಸ್ ಇಲಾಖೆಯ ಬಳಿ ಇರಲಿದೆ ಎಂದು ತಿಳಿಸಿದರು. ಮಹಿಳೆಯರ ಸುರಕ್ಷತೆ ಹೆಚ್ಚಿಸಲು ‘ಅಕ್ಕ ಪಡೆ’ ಮೂಲಕ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತಿದ್ದು, ಆತ್ಮರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ಕೆಲಸಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ರಸ್ತೆ ಅಪಘಾತ ನಿಯಂತ್ರಣಕ್ಕೆ ಕ್ರಮ:

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಹಿನ್ನೆಲೆಯಲ್ಲಿ, ಅಪಘಾತ ಸಂಭವಿಸುತ್ತಿರುವ ಸ್ಥಳಗಳಲ್ಲಿ ನಿಖರ ಕಾರಣಗಳನ್ನು ಗುರುತಿಸಲಾಗುತ್ತಿದೆ. ಬ್ಲಾಕ್ ಸ್ಪಾಟ್‌ಗಳಲ್ಲಿ ಅಗತ್ಯ ತಾಂತ್ರಿಕ ಹಾಗೂ ಮೂಲಸೌಕರ್ಯ ಸುಧಾರಣೆಗಾಗಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಹಾಸನ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದ್ದು, ನಿಗದಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಸಮಸ್ಯೆಯಾಗಿದೆ. ಈ ಕುರಿತು ಶಾಶ್ವತ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದರು.ಈ ವೇಳೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆಂಚೇಗೌಡ, ಉಪಾಧ್ಯಕ್ಷರಾದ ನಂಜುಂಡೇಗೌಡ, ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ಜಿ. ಸುರೇಶ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆಪಿಎಸ್ ಪ್ರಮೋದ್ ಇತರರು ಉಪಸ್ಥಿತರಿದ್ದರು.

===* ಬಾಕ್ಸ್‌:ಬಾಂಗ್ಲಾ ನುಸುಳುಕೋರರ ಬಗ್ಗೆ ಮಾಹಿತಿ ನೀಡಿದ್ರೆ ಕ್ರಮ:

ಸಾಮಾಜಿಕ ಜಾಲತಾಣಗಳಲ್ಲಿ ಯಾರಾರನ್ನೋ ಬಾಂಗ್ಲಾದೇಶಿ ನುಸುಳುಕೋರರು ಎಂದು ತೋರಿಸಿ ಪೋಸ್ಟ್ ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಆರೋಪಗಳಿಗೆ ಸ್ಪಷ್ಟ ಮತ್ತು ನಿಖರ ಮಾಹಿತಿ ಅಗತ್ಯವಿದ್ದು, ಯಾವುದೇ ದೃಢೀಕರಣವಿಲ್ಲದೆ ಮಾಹಿತಿ ಹಂಚಿಕೊಳ್ಳುವುದರಿಂದ ಸಮಾಜದಲ್ಲಿ ಗೊಂದಲ ಉಂಟಾಗುತ್ತದೆ ಎಂದು ಎಸ್‌ಪಿ ಎಚ್ಚರಿಸಿದರು. ಅಪರಾಧ ನಿಯಂತ್ರಣದಲ್ಲಿ ಜನರು ಮತ್ತು ಪೊಲೀಸ್ ಇಲಾಖೆ ಕೈಜೋಡಿಸಬೇಕಿದ್ದು, ನಿಖರ ಮಾಹಿತಿ ದೊರೆತಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ