ಕನ್ನಡಪ್ರಭ ವಾರ್ತೆ ಹನೂರು
ವಿಷ ಪ್ರಸಾದ ದುರಂತದ ಎ-1 ಆರೋಪಿಯಾಗಿರುವ ಇಮ್ಮಡಿ ಮಹಾದೇವಸ್ವಾಮಿ ಗುರುವಾರದಂದು ಮಲೆ ಮಹದೇಶ್ವರ ಬೆಟ್ಟ ಹಾಗೂ ಸಾಲೂರು ಮಠಕ್ಕೆ ತೆರಳಲಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಗೆ ಮನವಿ ಮಾಡಿದ್ದರು.
ಇಮ್ಮಡಿ ಮಹಾದೇವಸ್ವಾಮಿ ಬೆಟ್ಟ ಹಾಗೂ ಸಾಲೂರು ಮಠಕ್ಕೆ ಬಂದರೆ ಪ್ರತಿಭಟನೆ ಹಾಗೂ ಅಹಿತಕರ ಘಟನೆ ನಡೆಯುವ ಹಿನ್ನೆಲೆ ಶಾಂತಿ- ಸುವ್ಯವಸ್ಥೆ, ಮಠ ಮತ್ತು ಸಾರ್ವಜನಿಕ ಆಸ್ತಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ತಹಸಿಲ್ದಾರ್ ಚೈತ್ರಾ ಮಲೆ ಮಹದೇಶ್ವರ ಬೆಟ್ಟಕ್ಕೆ ಇಮ್ಮಡಿ ಮಹಾದೇವಸ್ವಾಮಿ ತೆರಳದಂತೆ ನಿರ್ಬಂಧಿಸಿ ಆದೇಶಿಸಿದ್ದಾರೆ. ಅದ್ಯಾಗ್ಯೂ , ಪ್ರವೇಶಿಸಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.2018ರಲ್ಲಿ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ವಿಷಮಿಶ್ರಿತ ಪ್ರಸಾದ ಸೇವಿಸಿ 17 ಜನರು ಸಾವನ್ನಪ್ಪಿದ್ದರು. ನೂರಾರು ಮಂದಿ ಅಸ್ವಸ್ಥರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇಮ್ಮಡಿ ಮಹದೇವಸ್ವಾಮಿ ಮೊದಲನೇ ಆರೋಪಿಯಾಗಿದ್ದಾರೆ. ಅನಾರೋಗ್ಯ ಕಾರಣ ಒಂದು ವರ್ಷಗಳ ಕಾಲ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದು ಹೊರಬಂದಿದ್ದಾರೆ.
ಇಮ್ಮಡಿ ಮಹಾದೇವಸ್ವಾಮಿ ಸಾಲೂರು ಮಠ, ಮಲೆ ಮಹದೇಶ್ವರ ಬೆಟ್ಟಕ್ಕೆ ಬರಲಿದ್ದಾರೆಂದು ವಿಷ ಪ್ರಸಾದ ದುರಂತ ಸಂತ್ರಸ್ಥರು ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು. ಕೂಡಲೇ, ಜಾಮೀನು ರದ್ದು ಮಾಡಬೇಕೆಂದು ಆಗ್ರಹಿಸಿ ಇಮ್ಮಡಿ ಮಹಾದೇವಸ್ವಾಮಿ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು.150ಕ್ಕೂ ಹೆಚ್ಚು ಮಂದಿ ವಿವಿಧ ನ್ಯೂನತೆಗಳಿಂದ ಗುಣಮುಖರಾಗದೆ ಪರದಾಡುತ್ತಿದ್ದಾರೆ. ಇಮ್ಮಡಿ ಮಹದೇವಸ್ವಾಮಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕು, ಜಾಮೀನು ರದ್ದು ಮಾಡಲು ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಹನೂರು ಪಟ್ಟಣದ ಹೊರವಲಯದ ಪರಿಚಯ್ಥರ ತೋಟವೊಂದರಲ್ಲಿ ಇಮ್ಮಡಿ ಮಹಾದೇವಸ್ವಾಮಿ ವಾಸ್ತವ್ಯ ಹೂಡಿದ್ದರು. ಈ ವಿಚಾರ ತಿಳಿದ ಪೊಲೀಸರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳದಂತೆ ಸೂಚಿಸಿ ಕಣ್ಗಾವಲು ಇಟ್ಟಿದ್ದರು.