ಜಾತಿ ಸಮೀಕ್ಷೆ: ಗಣತಿದಾರರಿಂದ ಭಾರೀ ಲೋಪ; ಕಿರಣ್‌ಕುಮಾರ್ ಕೊತ್ತಗೆರೆ

KannadaprabhaNewsNetwork |  
Published : May 16, 2025, 01:53 AM IST
೧೫ಕೆಎಂಎನ್‌ಡಿ-೩ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಾತಿ ಸಮೀಕ್ಷೆ ಗಣತಿಯ ಅವ್ಯವಸ್ಥೆಗಳನ್ನು ಕಿರಣ್‌ಕುಮಾರ್ ಸುದ್ದಿಗೋಷ್ಠೀಯಲ್ಲಿ ವಿವರಿಸಿದರು. | Kannada Prabha

ಸಾರಾಂಶ

ಶಾಲಾ ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಿದ್ದು, ಅವರು ಮನೆ ಮನೆಗೆ ಬಂದಾಗ ಕೇವಲ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಎಂಬ ಮೂರು ಸಮುದಾಯಗಳನ್ನು ಮಾತ್ರ ನಮೂದಿಸುತ್ತಿದ್ದಾರೆ. ಇದರಿಂದ ಜಾತಿ ಸಮೀಕ್ಷೆ ನಡೆಸುವುದು ವ್ಯರ್ಥವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾತಿ ಸಮೀಕ್ಷೆ ವೇಳೆ ಗಣತಿ ಮಾಡುವವರಿಂದ ಲೋಪವಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮುಂದೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಕೊರಮ, ಕೊರಚ, ಕುವರನ್, ಕೇಪ್‌ಮಾರಿಸ್, ವೈಜ್ಞಾನಿಕ ಒಳ ಮೀಸಲಾತಿ ಅನುಷ್ಠಾನ ಸಮಿತಿ ರಾಜ್ಯ ಸಂಯೋಜಕ ಕಿರಣ್‌ಕುಮಾರ್ ಕೊತ್ತಗೆರೆ ಎಚ್ಚರಿಕೆ ನೀಡಿದರು.

ಶಾಲಾ ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಿದ್ದು, ಅವರು ಮನೆ ಮನೆಗೆ ಬಂದಾಗ ಕೇವಲ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಎಂಬ ಮೂರು ಸಮುದಾಯಗಳನ್ನು ಮಾತ್ರ ನಮೂದಿಸುತ್ತಿದ್ದಾರೆ. ಇದರಿಂದ ಜಾತಿ ಸಮೀಕ್ಷೆ ನಡೆಸುವುದು ವ್ಯರ್ಥವಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ೧೦೧ ಜಾತಿಗಳು ಬರುತ್ತವೆ. ಅವುಗಳಲ್ಲಿ ಜಾತಿ ಹೆಸರನ್ನು ಮೊದಲು ನಮೂದಿಸಿ ನಂತರ ಉಪ ಜಾತಿಯನ್ನು ನಮೂದಿಸುವ ಕೋಡ್‌ಗಳನ್ನು ನಮೂದಿಸಬೇಕು. ಆದರೆ, ಸಮೀಕ್ಷೆ ಮಾಡುವವರು ತಮಗೇ ಎಲ್ಲವೂ ತಿಳಿದಿದೆ ಎಂಬ ಅರ್ಥದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸಿ ತಮಗಿಷ್ಟ ಬಂದಂತೆ ನಮೂದಿಸುತ್ತಿದ್ದಾರೆ. ಇದರಿಂದ ನೈಜವಾದ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮೊಬೈಲ್ ಆ್ಯಪ್‌ನಲ್ಲಿ ಕೆಲವು ಗೊಂದಲಗಳು ಇದ್ದು, ಅದನ್ನು ಸರಿಪಡಿಸುವಂತೆ ಆಯೋಗ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ವರ್ ಸಮಸ್ಯೆಯಿಂದ ಪ್ರಾರಂಭದ ಮೂರ್ನಾಲ್ಕು ದಿನಗಳಲ್ಲಿ ಸಮೀಕ್ಷಾ ಕಾರ್ಯ ಸರಿಯಾಗಿ ನಡೆದಿಲ್ಲ. ಹೀಗಿರುವಾಗ ಸರ್ಕಾರ ನಿಗದಿಪಡಿಸಿರುವ ಕಾಲಮಿತಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಿ ಸಂಪುಟ ಸಭೆಗೆ ಇಟ್ಟು ಆಖೈರುಗೊಳಿಸುವುದಾಗಿ ತಿಳಿಸಿದೆ. ಇದರಿಂದ ಕೆಲವು ಸಣ್ಣ ಪುಟ್ಟ ಜಾತಿಗಳಿಗೆ ಅನ್ಯಾಯವಾಗಲಿದೆ. ಬಲಾಢ್ಯರು ಹೆಚ್ಚು ಜನಸಂಖ್ಯೆ ಇದ್ದೇವೆಂದು ತೋರಿಸಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲವು ಕಡೆಗಳಲ್ಲಿ ಮೂರು ತಿಂಗಳಿನಿಂದ ೬ ತಿಂಗಳ ಬಾಲ್ಯ ಹಾಗೂ ೧ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಗಣತಿಯನ್ನು ನೋಂದಣಿ ಮಾಡುತ್ತಿಲ್ಲ. ಇಂತಹ ಮಕ್ಕಳನ್ನು ಗುರುತಿಸಲು ಯಾವುದೇ ಚೀಟಿ ಇರುವುದಿಲ್ಲ. ಹೀಗಾಗಿ ಇದೂ ಒಂದು ತಾಂತ್ರಿಕ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಿ ವೈಜ್ಞಾನಿಕವಾಗಿ ಕಾಲಮಿತಿಯನ್ನು ವಿಸ್ತರಿಸಿ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದರು.

ಸಮಿತಿಯ ಟಿ.ಸಿ. ಗುರಪ್ಪ, ಟೆಂಪೋ ರಾಮಕೃಷ್ಣ, ರಾಜೇಂದ್ರ, ಎಚ್.ಎ.ರಾಮಶೆಟ್ಟಿ ಗೋಷ್ಠಿಯಲ್ಲಿದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ