ಕನ್ನಡಪ್ರಭ ವಾರ್ತೆ ಪಾಂಡವಪುರ
ಐದು ದೀಪದ ವೃತ್ತದಲ್ಲಿ ಚಾಲನೆ ನೀಡಿದ ನಂತರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ತಾಲೂಕಿನ ಬೇಬಿಬೆಟ್ಟದ ಅಮೃತ ಕಾವಲ್ ಪ್ರದೇಶದಲ್ಲಿ ಪ್ರತಿ ವರ್ಷ ನಡೆಯುವ ಭಾರೀ ದನಗಳ ಜಾತ್ರಾ ಮಹೋತ್ಸವವು ರಾಜ್ಯದಲ್ಲಿಯೇ ಸಾಕಷ್ಟು ಪ್ರಸಿದ್ಧಿ ಹೊಂದಿದೆ ಎಂದರು.
ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಾಸುಗಳು, ರೈತರು ಭಾಗವಹಿಸುತ್ತಾರೆ. ಜಾತ್ರೆಗೆ ಆಗಮಿಸುವ ರಾಸುಗಳಿಗೆ ವಾಸ್ತವ್ಯಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗಿದೆ. ಬೇಬಿಬೆಟ್ಟದ ಸುತ್ತಮುತ್ತಲಿನ ಗ್ರಾಪಂಗಳ ಅಧಿಕಾರಿಗಳು, ನೌಕರರು, ಸಿಬ್ಬಂದಿ ಸಕಲ ಸಿದ್ಧತೆಯನ್ನು ನಡೆಸಿಕೊಂಡಿದ್ದಾರೆ ಎಂದು ತಿಳಿಸಿದರು.ಬೇಬಿಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ಹಲವು ಸಾಂಸ್ಕೃತಿಕ ಕಾರ್‍ಯಕ್ರಮಗಳು, ಕ್ರೀಡೆಗಳು, ವಸ್ತುಪ್ರದರ್ಶನ, ಮಹಿಳಾ ಸಾಂಸ್ಕೃತಿಕ ಉತ್ಸವ, ಉಚಿತ ಸರಳ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರಗಳು, ರಥೋತ್ಸವ, ತೆಪ್ಪೋತ್ಸವ, ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಕಾರ್‍ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಜಾತ್ರೆಯ ಬಹುಮಾನಕ್ಕಾಗಿ ಭಾಗವಹಿಸುವ ರಾಸುಗಳು ಫೆ.27 ರಾತ್ರಿ 10 ಗಂಟೆಯೊಳಗೆ ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಪ್ರಚಾರ ರಥಕ್ಕೆ ಇದೇ ಮೊದಲ ಬಾರಿಗೆ ಚಾಲನೆ ನೀಡಲಾಗಿದ್ದು, ರಥವು ಜಿಲ್ಲಾದ್ಯಂತ ಸಂಚರಿಸಿ ಪ್ರಚಾರ ನಡೆಸಲಿದೆ ಎಂದರು.
ತಾಪಂ ಇಒ ಲೋಕೇಶ್‌ಮೂರ್ತಿ ಸೇರಿ ಹಲವು ರೈತ ಮುಖಂಡರು ಭಾಗವಹಿಸಿದ್ದರು.