ಜಾನುವಾರು ಜಾತ್ರೇಲಿ ಉಚಿತ ಮೇವು

KannadaprabhaNewsNetwork |  
Published : Nov 20, 2024, 12:33 AM IST
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಜಾತ್ರೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉಚಿತ ಜಾನುವಾರು ಮೇವು ಮತ್ತು ನೀರು ವಿತರಣೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ನವ ಕರ್ನಾಟಕ ಯುವ ಶಕ್ತಿ ವೇದಿಕೆ, ವತಿಯಿಂದ ಘಾಟಿ ಸುಬ್ರಹ್ಮಣ್ಯ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ ಭಾಗವಾಗಿ ಆಯೋಜಿಸಿರುವ ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರು ವಿತರಣೆ ಕಾರ್ಯಕ್ರಮದ ಪೋಸ್ಟರ್ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಮಂಗಳವಾರ ಬಿಡುಗಡೆ ಮಾಡಿದರು.

ದೊಡ್ಡಬಳ್ಳಾಪುರ: ನವ ಕರ್ನಾಟಕ ಯುವ ಶಕ್ತಿ ವೇದಿಕೆ, ವತಿಯಿಂದ ಘಾಟಿ ಸುಬ್ರಹ್ಮಣ್ಯ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ ಭಾಗವಾಗಿ ಆಯೋಜಿಸಿರುವ ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರು ವಿತರಣೆ ಕಾರ್ಯಕ್ರಮದ ಪೋಸ್ಟರ್ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಮಂಗಳವಾರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ದನಗಳ ಜಾತ್ರೆಯ ರೈತರಿಗೆ ಉಚಿತ ಮೇವು ವಿತರಿಸಲು ಮುಂದಾಗಿರುವ ನವ ಕರ್ನಾಟಕ ಯುವಶಕ್ತಿ ವೇದಿಕೆಯವರು ನಿಜಕ್ಕೂ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಸರ್ಕಾರದ ಜೊತೆ ಇಂತಹ ಸಂಘ ಸಂಸ್ಥೆಗಳು ಜೊತೆಯಾದರೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ಉಚಿತ ಜಾನುವಾರು ಮೇವು ವಿತರಣಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ಮಾತನಾಡಿ, ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ವಾರ್ಷಿಕ ಬ್ರಹ್ಮರಥೋತ್ಸವ ಪ್ರಯುಕ್ತ ಜಾನುವಾರು ಜಾತ್ರೆ ನಡೆಸಲಾಗುತ್ತದೆ. ವಿಶೇಷ ತಳಿಯ ಹಳ್ಳಿಕಾರ್ ಹಸುಗಳು ಸೇರಿ ಜಾತ್ರೆಯಲ್ಲಿ ಸಾವಿರಾರು ಜಾನುವಾರುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 40 ಎಕರೆ ವಿಸ್ತೀರ್ಣದಲ್ಲಿ ಜಾತ್ರೆಗೆ ವ್ಯವಸ್ಥೆ ಮಾಡಿದ್ದು, ಹೈದರಾಬಾದ್‌ ಕರ್ನಾಟಕ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ತಮಿಳುನಾಡಿನ ಹೊಸೂರು, ಆಂಧ್ರಪ್ರದೇಶದ ರೈತರು ಜಾನುವಾರುಗಳ ಖರೀದಿ ಮತ್ತು ಮಾರಾಟಕ್ಕಾಗಿ ಆಗಮಿಸಲಿದ್ದಾರೆ.

ಘಾಟಿ ಸುಬ್ರಹ್ಮಣ್ಯ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ ಭಾಗವಾಗಿ ನಾವು "ಉಚಿತ ಜಾನುವಾರು ಮೇವು ಮತ್ತು ನೀರು ವಿತರಣೆ " ಎಂಬ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ, ಇದು ಡಿಸೆಂಬರ್ 20, 2024 ಶುಕ್ರವಾರದಿಂದ ಆರಂಭವಾಗಲಿದೆ. ಈ ಕಾರ್ಯಕ್ರಮವು ಜಾತ್ರೆಯಲ್ಲಿ ಪಾಲ್ಗೊಳ್ಳುವ ಅಗತ್ಯ ಜಾನುವಾರಗಳಿಗೆ ಒಂದು ವಾರ ಪ್ರತಿದಿನ ಉಚಿತವಾಗಿ ಮೇವು ಮತ್ತು ನೀರು ನೀಡುವ ಮೂಲಕ ರೈತ ಸಮುದಾಯವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ, ಈ ಮೂಲಕ ಜಾನುವಾರುಗಳ ಯೋಗಕ್ಷೇಮಕ್ಕೆ ಕೊಡುಗೆ ನೀಡಲು ತೀರ್ಮಾನಿಸಿದ್ದೇವೆ ಎಂದರು.

ವೇದಿಕೆ, ಕಳೆದ ವರ್ಷ ಸದರಿ ಕಾರ್ಯಕ್ರಮದಲ್ಲಿ ಜಾತ್ರೆಯ ಜಾನುವಾರುಗಳಿಗೆ ಬೇಕಾದ ನೀರು ಮತ್ತು 20 ಟ್ರ್ಯಾಕ್ಟರ್ ಲೋಡಿಗೂ ಹೆಚ್ಚು ಹುಲ್ಲು ವಿತರಿಸಿ ನೂರಾರು ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಚೆನ್ನಳ್ಳಿ ರಾಜಣ್ಣ, ನವ ಕರ್ನಾಟಕ ಯುವ ಶಕ್ತಿ ವೇದಿಕೆ ಕಾರ್ಯದರ್ಶಿ, ಉದಯ ಆರಾಧ್ಯ ಹಾಗೂ ಪದಾಧಿಕಾರಿಗಳು. ದೊಡ್ಡಬಳ್ಳಾಪುರ ತಾಲೂಕು ರೈತ ಸಂಘದ ಅಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಸತೀಶ್ ಮುಖಂಡರಾದ ಮುತ್ತೇಗೌಡ, ಮುನಿ ನಾರಾಯಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ-

19ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಜಾತ್ರೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉಚಿತ ಜಾನುವಾರು ಮೇವು ಮತ್ತು ನೀರು ವಿತರಣೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ