ಜಾನುವಾರು ಸುರಕ್ಷತೆ, ಹೈನುಗಾರಿಕೆಗೆ ಒತ್ತು: ಶಾಸಕಿ ನಯನ ಮೋಟಮ್ಮ

KannadaprabhaNewsNetwork |  
Published : Feb 20, 2025, 12:48 AM IST
ಚಿಕ್ಕಮಗಳೂರು ತಾಲ್ಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಬುಧವಾರ ನೂತನ ಪಶು ಚಿಕಿತ್ಸಾಲಯ ಕೇಂದ್ರ ಪ್ರಾರಂಭೋತ್ಸವ ಹಾಗೂ ಐದೂರು ಗ್ರಾಮದ ರಸ್ತೆಗೆ ಸಾಮೂಹಿಕ ಗುದ್ಧಲಿ ಪೂಜೆಯನ್ನು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ನೆರವೇರಿಸಿದರು. | Kannada Prabha

ಸಾರಾಂಶ

ಜಾನುವಾರಿಗೆ ಸೂಕ್ತ ಚಿಕಿತ್ಸೆ, ಹೈನುಗಾರಿಕೆಗೆ ಹೆಚ್ಚಿನ ಒತ್ತು ಹಾಗೂ ಗ್ರಾಮಗಳ ಮೂಲಭೂತ ಸವಲತ್ತಿಗೆ ರಾಜ್ಯಸರ್ಕಾರ ಬಹುಪಾಲು ಅನುದಾನ ಒದಗಿಸುವ ಮೂಲಕ ರೈತಸ್ನೇಹಿ ಕಾರ್ಯನಿರ್ವಹಿಸುತ್ತಿದೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.

ಪಶು ಚಿಕಿತ್ಸಾಲಯ ಕೇಂದ್ರ ಪ್ರಾರಂಭೋತ್ಸವ । 5 ಗ್ರಾಮಗಳ ರಸ್ತೆಗೆ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಾನುವಾರಿಗೆ ಸೂಕ್ತ ಚಿಕಿತ್ಸೆ, ಹೈನುಗಾರಿಕೆಗೆ ಹೆಚ್ಚಿನ ಒತ್ತು ಹಾಗೂ ಗ್ರಾಮಗಳ ಮೂಲಭೂತ ಸವಲತ್ತಿಗೆ ರಾಜ್ಯಸರ್ಕಾರ ಬಹುಪಾಲು ಅನುದಾನ ಒದಗಿಸುವ ಮೂಲಕ ರೈತಸ್ನೇಹಿ ಕಾರ್ಯನಿರ್ವಹಿಸುತ್ತಿದೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.

ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಬುಧವಾರ ನೂತನ ಪಶು ಚಿಕಿತ್ಸಾಲಯ ಕೇಂದ್ರ ಪ್ರಾರಂಭೋತ್ಸವ ಹಾಗೂ ಐದೂರು ಗ್ರಾಮದ ರಸ್ತೆಗೆ ಸಾಮೂಹಿಕ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಅಂಬಳೆ, ಮುಗುಳುವಳ್ಳಿ ಭಾಗದಲ್ಲಿ ಹೆಚ್ಚು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ ಉದ್ಯಮವನ್ನೇ ಅವಲಂಬಿಸಿರುವ ಕಾರಣ ಹಾಲು ಉತ್ಪಾದಕರ ಘಟಕ, ಡೈರಿ ಹಾಗೂ ಜಾನುವಾರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ರಸ್ತೆ, ಸಮುದಾಯ ಭವನ, ದೇವಾಲಯ ಜೀರ್ಣೋದ್ದಾರಕ್ಕೆ ಅನುದಾನ ನೀಡಿ ಕಾರ್ಯಪ್ರವೃತ್ತವಾಗಿದೆ ಎಂದರು.

ರಾಜ್ಯ ಸರ್ಕಾರ ಕಳೆದ ಸಾಲಿನಲ್ಲಿ ಸುಮಾರು ೨೦ಕ್ಕೂ ಹೆಚ್ಚು ಪಶು ಚಿಕಿತ್ಸಾಲಯ ಕೇಂದ್ರ ತೆರೆಯಲು ಅನುಮತಿ ನೀಡಿತ್ತು. ಆ ನಿಟ್ಟಿನಲ್ಲಿ ಜಿಲ್ಲೆಯ ಅಂಬಳೆ ಗ್ರಾಮಕ್ಕೆ ಒಂದು ಕೇಂದ್ರ ತೆರೆಯಲಾಗಿತ್ತು. ಇದೀಗ ಬಹುಬೇಡಿಕೆ ಹಿನ್ನೆಲೆ ಮುಗುಳವಳ್ಳಿ ಗ್ರಾಮದಲ್ಲಿ ಪಶು ಚಿಕಿತ್ಸಾ ಕೇಂದ್ರ ಸ್ಥಾಪಿಸಿ ಗ್ರಾಮಸ್ಥರಿಗೆ ನೆರವಾಗುತ್ತಿದೆ ಎಂದು ಹೇಳಿದರು.

ಈ ಭಾಗದಲ್ಲಿ ಏತ ನೀರಾವರಿ ಯೋಜನೆ ಕೆಲಸಗಳು ಬಾಕಿಯಿರುವ ಹಿನ್ನೆಲೆ ಸದ್ಯದಲ್ಲೇ ಕ್ರಮ ವಹಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಪಶು ಚಿಕಿತ್ಸಾ ಕೇಂದ್ರಕ್ಕೆ ತಾತ್ಕಾಲಿಕ ಸಿಬ್ಬಂದಿಯನ್ನು ನೇಮಕಾತಿಗೊಳಿಸಿ ಚಿಕಿತ್ಸೆಗೆ ಅನುವು ಮಾಡಿದ್ದು, ಮುಂದೆ ಶಾಶ್ವತ ವೈದ್ಯರು, ಸಿಬ್ಬಂದಿ ನೇಮಿಸುವ ಮೂಲಕ ಸಹಕರಿಸಲಾಗುವುದು ಎಂದರು.

ಕೋಡಿಹಳ್ಳಿ, ಅಂಬಳೆ, ಗೌಡನಹಳ್ಳಿ, ಮುಗುಳುವಳ್ಳಿ ಹಾಗೂ ಮರ್ಲೆ ಗ್ರಾಮಗಳಿಗೆ ಎಸ್‌ಸಿಪಿ ಅನುದಾನದಡಿ ಪ್ರತಿ ರಸ್ತೆಗೆ ತಲಾ ೯ ಲಕ್ಷ ರು.ನಂತೆ ಗುದ್ದಲಿ ಪೂಜೆಯನ್ನು ಮುಗುಳವಳ್ಳಿ ಗ್ರಾಮದಲ್ಲಿ ಸಾಮೂಹಿಕವಾಗಿ ನಡೆಸಲಾಗಿದ್ದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸಿ, ಗ್ರಾಮಸ್ಥರಿಗೆ ಸಮರ್ಪಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ.ಮಂಜುನಾಥ್ ಮಾತನಾಡಿ, ಅಂಬಳೆ ಹೋಬಳಿಯ ಸುತ್ತ ಮುತ್ತಲು ಭವನ, ರಸ್ತೆ, ದೇವಾಲಯಕ್ಕೆ ಸಾಕಷ್ಟು ಅನುದಾನವನ್ನು ಶಾಸಕರು ಒದಗಿಸಿದ್ದಾರೆ. ಅಲ್ಲದೇ ಹೆಚ್ಚು ಕೃಷಿಕರಿರುವ ಹೋಬಳಿಯನ್ನು ಗುರುತಿಸಿ ರಾಜ್ಯ ಸರ್ಕಾರ ಅಗತ್ಯಗನುಸಾರ ಸವಲತ್ತು ನೀಡಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಗ್ರಾಮಸ್ಥರು ಹಿಂದೆ ಜಾನುವಾರಿಗೆ ಸಣ್ಣಪುಟ್ಟ ರೋಗಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆಗೆ ನಗರಕ್ಕೆ ತೆರಳಲು ಅಧಿಕ ಖರ್ಚಾಗುತ್ತಿತ್ತು. ಇದೀಗ ಗ್ರಾಮಸ್ಥರ ಒತ್ತಾಯದ ಮೇರೆಗೆ ಮುಗುಳವಳ್ಳಿ ಗ್ರಾಮದಲ್ಲೇ ಪ ಶುಚಿಕಿತ್ಸಾ ಕೇಂದ್ರ ತೆರೆದು ಸ್ಥಳಿಯವಾಗಿ ಚಿಕಿತ್ಸೆಗೆ ಅನುಕೂಲ ಕಲ್ಪಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಮುಗುಳವಳ್ಳಿ ಗ್ರಾಪಂ ಅಧ್ಯಕ್ಷೆ ಸವಿತಾ ಉಮೇಶ್ ಮಾತನಾಡಿ, ಈ ಹಿಂದೆ ಮುಗುಳವಳ್ಳಿ ಗ್ರಾಮಕ್ಕೆ ಬದಲಾಗಿ ಮೂಗ್ತಿಹಳ್ಳಿ ಗ್ರಾಮಕ್ಕೆ ಚಿಕಿತ್ಸಾ ಕೇಂದ್ರ ಮಂಜೂರಾಗಿದ್ದು ಗ್ರಾಮಸ್ಥರ ನಿರಾಸೆಗೆ ಕಾರಣವಾಗಿತ್ತು. ಇದೀಗ ಗ್ರಾಮದಲ್ಲೇ ಸ್ಥಾಪಿಸುವುದು ಹರ್ಷ ತಂದಿದೆ ಎಂದರು.

ಪಶುಪಾಲನಾ ಮತ್ತು ಪಶುವೈದ್ಯೆ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮೋಹನ್‌ಕುಮಾರ್, ಮುಗುಳವಳ್ಳಿ ಗ್ರಾಪಂ ಉಪಾಧ್ಯಕ್ಷ ಉಮೇಶ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಜಿ.ಆರ್.ಬಸವರಾಜ್, ಜಿಪಂ ಮಾಜಿ ಸದಸ್ಯ ಮುಗುಳವಳ್ಳಿ ನಿರಂಜನ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ರೈತ ಸಂಘದ ಸದಸ್ಯ ಗುರುಶಾಂತಪ್ಪ, ಕಾಂಗ್ರೆಸ್ ಮುಖಂಡರು ಗಳಾದ ಕೆ.ವಿ.ವಿರೂಪಾಕ್ಷ, ಹೆಚ್.ಸಿ.ದಾಸೇಗೌಡ, ಕೆ.ಎಂ.ಕೆಂಚೇಗೌಡ, ಪಶು ವೈದ್ಯಾಧಿಕಾರಿ ಡಾ.ಹೇಮಂತ್ ಕುಮಾರ್, ತಾಪಂ ಇಒ ಬಿ.ಕೆ.ವಿಜಯ್‌ಕುಮಾರ್, ಗ್ರಾಪಂ ಸದಸ್ಯರು, ಪಿಡಿಒ ಇದ್ದರು.

PREV

Recommended Stories

‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ