ಕನ್ನಡಪ್ರಭ ವಾರ್ತೆ ಬೆಳಗಾವಿ
ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜು ಮುಂಭಾಗದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಆರೋಪಿ ಅನುಮಾನಾಸ್ಪದವಾಗಿ ಚಾಕೊಲೇಟ್ ಪಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ ಗಾಂಜಾ ಮಿಶ್ರಿತ ಮಾದಕ ವಸ್ತುವಿನ ಚಾಕೊಲೇಟ್ ಪಾಕೆಟ್‌ಗಳು ಪತ್ತೆಯಾಗಿವೆ.
ಪಿಐ ಶಿವಪ್ಪ ಎಚ್. ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಬಂಧಿತನಿಂದ ಸುಮಾರು ₹54 ಸಾವಿರ ಮೌಲ್ಯದ 6 ಕೆಜಿ 858 ಗ್ರಾಂ ತೂಕದ ಗಾಂಜಾ ಮಿಶ್ರಿತ ಚಾಕೊಲೇಟ್ ಪ್ಯಾಕೆಟ್‌ಗಳು, ₹10 ಸಾವಿರ ಮೌಲ್ಯದ ಸ್ಯಾಮ್‌ಸಂಗ್ ಮೊಬೈಲ್ ಫೋನ್, ₹600 ನಗದು ಹಾಗೂ ₹30 ಸಾವಿರ ಮೌಲ್ಯದ ಸ್ಕೂಟಿ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ₹94,600 ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯು ಈ ಮಾದಕ ವಸ್ತುಗಳನ್ನು ಎಲ್ಲಿಂದ ತರಿಸುತ್ತಿದ್ದ? ಯಾರಿಂದ ಪೂರೈಕೆಯಾಗುತ್ತಿತ್ತು? ಯಾರು ಖರೀದಿಸುತ್ತಿದ್ದರು ಹಾಗೂ ಇದರ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾಲೇಜು ಪ್ರದೇಶದ ಸಮೀಪವೇ ಇಂತಹ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದ್ದ ಆರೋಪ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರನ್ನು ಗುರಿಯಾಗಿಸಿಕೊಂಡು ಈ ರೀತಿಯ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.