ರಸ್ತೆ ಸುರಕ್ಷತೆ ಮಾಸಾಚರಣೆಯಲ್ಲಿ ಸರಕಾರಿ ವಕೀಲ
ಕನ್ನಡಪ್ರಭ ವಾರ್ತೆ ಕುಕನೂರುಚಾಲಕರು, ನಿರ್ವಾಹಕರೆಂದರೆ ಒಂದು ಭವ್ಯ ಕಟ್ಟಡದ ಭದ್ರ ಬುನಾದಿಯಾಗಿದ್ದು, ನಿಮ್ಮನ್ನು ನಂಬಿ ಹಲವಾರು ಕುಟುಂಬಗಳು ವಾಹನಗಳಲ್ಲಿ ಪ್ರಯಾಣಿಸುತ್ತಿರುವುದರಿಂದ ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಯಲಬುರ್ಗಾ ಸರಕಾರಿ ವಕೀಲ ಮಲ್ಲನಗೌಡ ಹೇಳಿದರು.ಪಟ್ಟಣದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಕುಕನೂರು ಸಾರಿಗೆ ಘಟಕದಲ್ಲಿ ಜರುಗಿದ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆಯಲ್ಲಿ ಮಾತನಾಡಿದರು. ಚಾಲಕರು ಮೊದಲು ತಮ್ಮ ವಾಹನದ ತಪಾಸಣೆ ನಡೆಸಿ ಚಲಾಯಿಸಬೇಕು. ಸರಕಾರಿ ವಾಹನಗಳು ಸುರಕ್ಷಿತ ಎಂದು ನಿಮ್ಮನ್ನೇ ನಂಬಿದ ಹಲವಾರು ಕುಟುಂಬಗಳು ಪ್ರತಿನಿತ್ಯ ಪ್ರಯಾಣಿಸುತ್ತವೆ. ಆದ್ದರಿಂದ ರಸ್ತೆ ನಿಯಮಗಳನ್ನು ಪಾಲಿಸಿ, ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿ ಎಂದು ಕರೆ ನೀಡಿದರು.
ಸರಕಾರಿ ನೌಕರರು ತಮ್ಮ ತಮ್ಮ ಇಲಾಖೆಗಳ ಕಾನೂನುಗಳನ್ನು ಅರಿತಿರಬೇಕು. ಸಾರಿಗೆ ಸಂಸ್ಥೆಯೊಂದರಲ್ಲಿಯೇ ಹತ್ತು ಸಾವಿರ ಕಾನೂನುಗಳಿದ್ದು, ಮುಖ್ಯವಾದವುಗಳನ್ನು ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ಅದಕ್ಕಾಗಿಯೇ ಸುಪ್ರೀಂಕೊರ್ಟ್ ರಾಜ್ಯ ಸೇವಾ ಪ್ರಾಧಿಕಾರದಿಂದ ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಾನೂನು ತಿಳಿವಳಿಕೆ ನೀಡಲು ಕಾನೂನು ಸಮಿತಿ ರಚಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.ನಮ್ಮ ದೇಶದಲ್ಲಿ ಹರಿತವಾಗಿರುವ, ಬಲಿಷ್ಠವಾಗಿರುವ, ಬಲಾಢ್ಯವಾಗಿರುವ, ಮರಣದಂಡನೆ, ಜೀವಾವಧಿ ಶಿಕ್ಷೆ ಇಷ್ಟೇಲ್ಲ ಕಾನೂನುಗಳಿದ್ದರೂ ದೇಶದಲ್ಲಿ ಅಪರಾಧಗಳು ನಿಂತಿಲ್ಲ. ಶೇ. 80ರಷ್ಟು ಜನರು ಕಾನೂನುಗಳುನ್ನು ತಿಳಿದುಕೊಂಡಿಲ್ಲ. ಆದ್ದರಿಂದ ಅಪರಾಧಗಳು ನಿರಂತರವಾಗಿವೆ. ಇದಕ್ಕಾಗಿಯೇ ಪ್ರತಿವರ್ಷ ಜ.1ರಿಂದ ಜ.31ರ ವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಂಡಿದ್ದು, ಕಾನೂನು ತಿಳಿವಳಿಕೆ ಪಡೆದುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.
ಚಾಲಕರು ಜಾಗರೂಕರಾಗಿ ವಾಹನ ಚಾಲನೆ ಮಾಡುವ ಮೂಲಕ ಕುಕನೂರು ಘಟಕವನ್ನು ಅಪಘಾತ ಮುಕ್ತ ಘಟಕವನ್ನಾಗಿ ಮಾಡಬೇಕು ಎಂದು ತಿಳಿಸಿದರು.ಕುಕನೂರು ಪೊಲೀಸ್ ಠಾಣೆಯ ಎಎಸ್ಐ ನಿರಂಜನ ತಳವಾರ ಮಾತನಾಡಿ, ಸಾರಿಗೆ ಘಟಕದಲ್ಲಿ ತಾಂತ್ರಿಕ, ಚಾಲಕರ, ನಿರ್ವಾಹಕ ಕಾರ್ಯಗಳು ಅತ್ಯಂತ ಕಠಿಣವಾಗಿದ್ದು, ನೂರಾರು ಪ್ರಯಾಣಿಕರ ಕುಟುಂಬಗಳಲ್ಲದೇ, ನಿಮ್ಮ ಮನೆಯವರೂ ನಿಮಗಾಗಿ ಕಾಯುತ್ತಿರುತ್ತಾರೆ ಎನ್ನುವುದನ್ನು ಗಮದಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡಬೇಕು ಎಂದರು.
ಸಾರಿಗೆ ಇಲಾಖೆ ಪ್ರತಿವರ್ಷ ಒಂದು ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಂಡ ರಸ್ತೆ ಸುರಕ್ಷತಾ ಹಿರೋಗಳಾಗಿ ಶ್ರದ್ಧೆಯಿಂದ, ಜಾಗರೂಕರಾಗಿ ವಾಹನ ಚಾಲನೆ ಮಾಡಿ ಎಂದು ಹೇಳಿದರು.ಈ ವೇಳೆ ಸಾರಿಗೆ ಘಟಕದ ಉಸ್ತುವಾರಿ ಅಧಿಕಾರಿ ದೇವರಾಜ, ಎಎಸ್ಐ ಶರಣಪ್ಪ ಮಾತನಾಡಿದರು. ವಕೀಲ ರಮೇಶ ಗಜಕೋಶ, ಘಟಕ ವ್ಯವಸ್ಥಾಪಕರಾದ ಸೋಮಶೇಖರ, ಚಾಲಕ, ನಿರ್ವಾಹಕರಾದ ಬಸಯ್ಯ, ರಾಮಚಂದ್ರ ಖಂಡೆ, ಅಶೋಕ ಬಂಗಿ, ದುರಗಪ್ಪ, ಶಾಬುದ್ದಿನ್, ಶರಣಪ್ಪ ಇತರರಿದ್ದರು.