ಕನ್ನಡಪ್ರಭ ವಾರ್ತೆ ಬೆಂಗಳೂರು
ಗಂಗಾರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಕೃಷ್ಣರಾಜ ಸಾಗರದಲ್ಲಿ ನಡೆದ ಐತಿಹಾಸಿಕ ಕಾವೇರಿ ಆರತಿ ಯಶಸ್ವಿಯಾಗಿದ್ದು, ಇನ್ನು ಮುಂದೆ ವಾರದ ಮೂರು ದಿನ ಕಾವೇರಿ ಆರತಿ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.ಕುಮಾರಪಾರ್ಕ್‌ನಲ್ಲಿನ ತಮ್ಮ ಸರ್ಕಾರಿ ನಿವಾಸದಲ್ಲಿ ಕೆಆರ್‌ಎಸ್‌ನ ಬೃಂದಾವನ ಉದ್ಯಾನದಲ್ಲಿ ಸತತ 5 ದಿನಗಳ ಕಾಲ ನಡೆದ ಕಾವೇರಿ ಆರತಿಯನ್ನು ನೆರವೇರಿಸಿದ ಪಂಡಿತರು, ಪುರೋಹಿತರನ್ನು ಡಿ.ಕೆ. ಶಿವಕುಮಾರ್ ಸನ್ಮಾನಿಸಿದರು.
ನಂತರ ಮಾತನಾಡಿದ ಅವರು, ಪ್ರಯತ್ನಕ್ಕೆ ಸೋಲಾದರೂ, ಪ್ರಾರ್ಥನೆಗೆ ಸೋಲಾಗುವುದಿಲ್ಲ. ನಾವೆಲ್ಲರೂ ಸೇರಿ ಪ್ರಾರ್ಥನೆ ಮಾಡೋಣ. ಕಾವೇರಿ ಆರತಿ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಏನೇ ಆದರು ಅದನ್ನು ಮುಂದುವರಿಸಲಾಗುವುದು. ಕಾವೇರಿ ಆರತಿಯನ್ನು ವ್ಯವಸ್ಥಿತವಾಗಿ ಮಾಡಲು ಸ್ಟೇಡಿಯಂ ಮಾದರಿ ಮಂಟಪ ನಿರ್ಮಾಣ ಮಾಡಲಾಗುತ್ತದೆ ಎಂದರು.ನಮ್ಮ ಸಂಸ್ಕೃತಿ, ಸಂಪ್ರದಾಯ ಜನರಿಗೆ ತಿಳಿಸಲು ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಾವೇರಿ ಆರತಿ ನಡೆಯಲಿದೆ. ಇದರಿಂದ ಪುರೋಹಿತರು, ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ. ನಾನು ಅಥವಾ ಇನ್ಯಾರೋ ಪುರೋಹಿತರಾಗಿ ಆರತಿ ಪೂಜೆ ಮಾಡಲು ಸಾಧ್ಯವಿಲ್ಲ. ಅದನ್ನು ಪಂಡಿತರು, ಪುರೋಹಿತರೇ ಮಾಡಬೇಕು. ಇನ್ನು, ಭಕ್ತಾಧಿಗಳು ಬೆಳಗಿನ ಹೊತ್ತು ಕಾವೇರಿಗೆ ಪೂಜೆ ಸಲ್ಲಿಸುವ ವ್ಯವಸ್ಥೆ ಮಾಡುವ ಚಿಂತನೆಯಿದೆ. ವಾರಣಾಸಿಯ ಗಂಗಾರತಿಗೆ ಕಡಿಮೆಯಿಲ್ಲದಂತೆ ಕಾವೇರಿ ಆರತಿ ನೆರವೇರಿಸಲಾಗಿದೆ. ದಕ್ಷಿಣ ಭಾರತದ ಪದ್ಧತಿಯಲ್ಲಿ ಕಾರ್ಯಕ್ರಮ ನಡೆದಿದೆ ಎಂದು ಶ್ಲಾಘಿಸಿದರು.ಕಾವೇರಿ ಆರತಿಯಲ್ಲಿ ಪೂಜಾ ಕಾರ್ಯವನ್ನು ನಡೆಸಿದ 55 ಮಂದಿ ಅರ್ಚಕರಿಗೆ ಫಲತಾಂಬೂಲ, ವಸ್ತ್ರ ನೀಡಿ ಸಾಂಪ್ರದಾಯಿಕವಾಗಿ ಸನ್ಮಾನಿಸಲಾಯಿತು. ಈ ವೇಳೆ ಕಾವೇರಿ ಆರತಿ ಪ್ರಧಾನ ಅರ್ಚಕ ವಿಜಯಕುಮಾರ್ ಪಂಡಿತ್ ಅವರು ಡಿ.ಕೆ. ಶಿವಕುಮಾರ್ ಅವರನ್ನು ಆಶೀರ್ವದಿಸಿದರು.