ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನದಿಯನ್ನು ಆರಾಧಿಸುವುದು ನಮ್ಮ ಕರ್ತವ್ಯ. ಕಾವೇರಿ ನದಿಗೆ ವಿಶೇಷ ಶಕ್ತಿ ಇದೆ. ಆದಿ ರಂಗ, ಮಧ್ಯ ರಂಗ, ಅಂತ್ಯ ರಂಗನ ಪಾದವನ್ನು ತೊಳೆಯುವ ಕಾವೇರಿ ವಿಶೇಷ ದೈವ ಶಕ್ತಿಯನ್ನು ಹೊಂದಿದವಳು ಎಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಹೇಳಿದರು.ಕೆಆರ್ ಎಸ್ ನಲ್ಲಿ ನಡೆದ ಕಾವೇರಿ ಆರತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಾವೇರಿ ನೀರು ಕುಡಿದವರಲ್ಲಿ ಕೆಟ್ಟ ಭಾವನೆ ಇರಲ್ಲ. ಅದಕ್ಕೆ ಮಂಡ್ಯದ ಜನ ಅತಿಥಿ ಸತ್ಕಾರಕ್ಕೆ ಹೆಸರಾದವರು. ಮಂಡ್ಯದವರ ಮನಸ್ಸು ಬೆಲ್ಲ- ಸಕ್ಕರೆಯಂತೆ. ಸಾಹಿತ್ಯ ಸಮ್ಮೇಳನ, ಶ್ರೀರಂಗಪಟ್ಟಣ ದಸರಾ, ಈಗ ಕಾವೇರಿ ಆರತಿ ಮಾಡುವ ಮೂಲಕ ಮಂಡ್ಯ ಜಿಲ್ಲೆಯತ್ತ ಇಡೀ ಇಂಡಿಯಾ ಮತ್ತೆ ತಿರುಗಿ ನೋಡುವಂತಾಗಿದೆ ಎಂದರು.
ಪ್ರತಿನಿತ್ಯ ನಮ್ಮನ್ನೆಲ್ಲಾ ಶುದ್ಧಿ ಮಾಡುವ ಕಾವೇರಿ ತಾಯಿ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದ್ದಾಳೆ. ಹರಿಯುವ ನದಿಗೆ ಶಕ್ತಿ ಹೆಚ್ಚು. ಕಾವೇರಿ ಇಂದ್ರ ಲೋಕದವಳು. ಅಗಸ್ತ್ಯರು ಕಮಂಡಲದಲ್ಲಿ ಕಾವೇರಿಯನ್ನು ನಮ್ಮ ನಾಡಿಗೆ ತಂದರು. ಕಾವೇರಿ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ದೈವ ಶಕ್ತಿಯನ್ನು ಕಾವೇರಿ ಹೊಂದಿದ್ದಾಳೆ ಎಂದರು.ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಇಂದ್ರೀಯಗಳಿಂದ ಲೋಕದ ಅನುಭವ ಆಗುತ್ತದೆ. ಆದರೆ, ಅದರಿಂದ ಆಚೆಗೂ ಆಗುವ ಅನುಭವವೊಂದಿದೆ. ಅದು ಭಕ್ತಿ, ಶಕ್ತಿ, ಪೂಜ್ಯ ಭಾವನೆ ಏನಾದರೂ ಆಗಬಹುದು. ನೀರನ್ನು ಪೂಜ್ಯ ಭಾವನೆಯಿಂದ ನೋಡಿದರೆ ಉಪಯೋಗಕ್ಕೂ ಆಚೆ ಕಾಣಬಹುದು. ಕಾವೇರಿ ಬರೀ ನೀರಲ್ಲ, ಪೂಜ್ಯ ಭಾವನೆ ಹೊಂದಿದವಳು ಎಂದು ಹೇಳಿದರು.
ಕಾವೇರಿಯನ್ನು ನಾವು ಪೂಜಿಸುವುದರ ಜೊತೆಗೆ ನದಿಯ ಸ್ವಚ್ಛತೆಯನ್ನೂ ಕಾಪಾಡಬೇಕು. ಅಮೆರಿಕನ್ನರು ನೀರನ್ನು ಪೂಜಿಸದಿದ್ದರೂ ಸ್ವಚ್ಛತೆ ಕಾಪಾಡುತ್ತಾರೆ. ನಾವು ನೀರನ್ನು ಪೂಜಿಸುವ ಜೊತೆಗೆ ನೀರು ಮಲೀನವಾಗದಂತೆ ನೋಡಿಕೊಳ್ಳಬೇಕು ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ಶಾಸಕರಾದ ರಮೇಶ ಬಂಡಿದ್ದೇಗೌಡ, ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ, ಮೈಸೂರು ಪಶ್ಚಿಮವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ, ಡೀಸಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಕೆ.ಆರ್.ನಂದಿನಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.