ಪ್ರತಿಷ್ಠೆಗಾಗಿ ಕಾವೇರಿ ಚಳವಳಿ: ಪಿ.ರವಿಕುಮಾರ್

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ಪ್ರತಿಷ್ಠೆಗಾಗಿ ಕಾವೇರಿ ಚಳವಳಿ ಎಂದ ಶಾಸಕ ಪಿ. ರವಿಕುಮಾರ್. ನೀರು ನಿಲ್ಲಿಸಿದ ನಂತರವೂ ಹೋರಾಟ ನಡೆಸುವುದರಲ್ಲಿ ಅರ್ಥವಿಲ್ಲ ಎಂದ ಸಚಿವ. ನಮ್ಮದು ಪ್ರತಿಷ್ಠೆಯಲ್ಲ, ಸ್ವಾಭಿಮಾನದ ಹೋರಾಟ ಎಂದು ಮಂಜುನಾಥ್ ತಿರುಗೇಟು.

ನೀರು ನಿಲ್ಲಿಸಿದ ನಂತರವೂ ಹೋರಾಟ ನಡೆಸುವುದರಲ್ಲಿ ಅರ್ಥವಿಲ್ಲ । ನಮ್ಮದು ಪ್ರತಿಷ್ಠೆಯಲ್ಲ, ಸ್ವಾಭಿಮಾನದ ಹೋರಾಟ: ಮಂಜುನಾಥ್ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಚಳವಳಿ ಪ್ರತಿಷ್ಠೆಗಾಗಿ ನಡೆಯುತ್ತಿದೆ. ಸರ್ಕಾರ ನೀರು ನಿಲ್ಲಿಸಿದ ನಂತರವೂ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಶಾಸಕ ಪಿ. ರವಿಕುಮಾರ್‌ ಆರೋಪಿಸಿದರು.

ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಕನ್ನಡ ಸೇನೆ ಕರ್ನಾಟಕ ಸಹಯೋಗದಲ್ಲಿ ನಡೆದ ಕನ್ನಡ ಜಾಗೃತಿ ಸಮಾವೇಶ ಹಾಗೂ ಹಾಸ್ಯ, ಮಿಮಿಕ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮಿಳುನಾಡಿಗೆ ಹರಿಸಲಾಗುತ್ತಿದ್ದ ನೀರನ್ನು ಈಗ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆದರೂ ಕಾವೇರಿ ಹೋರಾಟ ನಡೆಸುತ್ತಿರುವುದು ಏತಕ್ಕಾಗಿ. ಇದು ಪ್ರತಿಷ್ಠೆಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದರ ವಿರುದ್ಧ ಮೊದಲು ದನಿ ಎತ್ತಿದವನೇ ನಾನನು. ಆದರೂ ನನ್ನ ವಿರುದ್ಧವೇ ಧಿಕ್ಕಾರ ಕೂಗುತ್ತಾರೆ, ಪ್ರತಿಭಟನೆ ನಡೆಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ ನಂತರ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನೀರಿನ ಪರಿಸ್ಥಿತಿ, ರೈತರ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ತಮಿಳುನಾಡಿಗೆ ಹರಿಸಲಾಗುತ್ತಿದ್ದ ನೀರನ್ನು ನಿಲ್ಲಿಸಿದ್ದೇವೆ. ವಾಸ್ತವ ಹೀಗಿದ್ದರೂ ಮಂಡ್ಯದಲ್ಲಿ ಪ್ರತಿಷ್ಠೆಗಾಗಿ ಕಾವೇರಿ ಹೋರಾಟ ನಡೆಯುತ್ತಿದೆ, ಒಂದು ವೇಳೆ ಸರ್ಕಾರ ತಮಿಳುನಾಡಿಗೆ ಮತ್ತೆ ನೀರು ಹರಿಸಿದರೆ ಹೋರಾಟ ನಡೆಸಲಿ. ಆದರೆ ನೀರು ನಿಲ್ಲಿಸಿದ ನಂತರವೂ ಹೋರಾಟ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ದೂಷಿಸಿದರು.

ಕನ್ನಡ ನಾಡು -ನುಡಿ ವಿಚಾರದಲ್ಲಿ ಕನ್ನಡ ಸೇನೆ ನಡೆಸುತ್ತಿರುವ ಹೋರಾಟಕ್ಕೆ ಜಯವಾಗಲಿ, ನಾವು ನಿಮ್ಮೊಡನೆ ಇರುತ್ತೇವೆ, ಸರ್ಕಾರ ಕನ್ನಡಪರ ಹೋರಾಟಗಾರರನ್ನು ರಕ್ಷಣೆ ಮಾಡುತ್ತಿದೆ. ನಾವು ರೈತಪರ ಇದ್ದೇವೆ ಎಂದು ತಿಳಿಸಿದರು.

ಕನ್ನಡ ಭಾಷೆಗಿರುವ ಪ್ರಾಚೀನತೆ ಹಿಂದಿ ಭಾಷೆಗಿಲ್ಲ:

ಮೈಸೂರು ವಿವಿಯ ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಮಾತನಾಡಿ, ಕನ್ನಡ ಭಾಷೆಗಿರುವ ಪ್ರಾಚೀನತೆ ಹಿಂದಿ ಭಾಷೆಗೂ ಇಲ್ಲ. ಹಾಗಾಗಿಯೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದೆ .ಆದರೆ, ನಮ್ಮ ನಾಯಕರಿಗೆ ಕೇಂದ್ರದಿಂದ ಅನುದಾನ ತರಲು ವಿಫಲರಾಗಿದ್ದಾರೆ ಎಂದು ತಿಳಿಸಿದರು.

೧೯೭೩-೨೦೨೩ಕ್ಕೆ ಕರ್ನಾಟಕವಾಗಿ ೫೦ ವರ್ಷ ಸಂದಿದೆ ಎಂದು ಸುವರ್ಣ ಕರ್ನಾಟಕ ಸಂಭ್ರಮ ವರ್ಷ ಎನ್ನಲಾಗುತ್ತಿದೆ. ಇದು ಸರಿಯಲ್ಲ. ಎರಡು ಸಾವಿರ ವರ್ಷದ ಇತಿಹಾಸವಿರುವ ಕನ್ನಡ ಭಾಷೆಯನ್ನು ಕೇವಲ ಐವತ್ತು ವರ್ಷಗಳಿಗೆ ಸೀಮಿತಗೊಳಿಸುವ ಬೆಳವಣಿಗೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಭಾರತದ ರಾಜ್ಯಗಳಲ್ಲಿ ನಮ್ಮ ರಾಜ್ಯದಲ್ಲಿರುವಂತೆ ಭಾಷಾ ಸಂಘಟನೆಗಳನ್ನು ಕಾಣಲು ಸಾಧ್ಯವಿಲ್ಲ. ಆದರೆ ನಮ್ಮ ರಾಜ್ಯದ ಸ್ಥಿತಿಯೇ ಬೇರೆ ಇದೆ. ಈ ಕನ್ನಡ ನೆಲದಲ್ಲೇ ಕನ್ನಡ ಎಂದರೆ ತಾತ್ಸಾರ, ನಿರ್ಲಕ್ಷ್ಯದ ಭಾವನೆ ಬೆಳೆಯುತ್ತಿದೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಇಂಗ್ಲಿಷ್ ವಿಜೃಂಭಿಸುತ್ತಿದೆ. ಇದು ಹೀಗೇ ಮುಂದುವರೆದರೆ ಮುಂದೆ ಈ ನೆಲದಲ್ಲೇ ಕನ್ನಡ ಮಾತನಾಡಲಾಗದಷ್ಟು ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜೇಗೌಡ, ಯುವ ಕರ್ನಾಟಕ ವೇದಿಕೆಯ ರೂಪೇಶ್ ರಾಜಣ್ಣ, ಉದ್ಯಮಿ ಸಿಪಾಯಿ ಶ್ರೀನಿವಾಸ್, ಮಿಮ್ಸ್ ವೈದ್ಯಕೀಯ ಅೀಕ್ಷಕ ಡಾ.ಪಿ.ವಿ.ಶ್ರೀಧರ್, ಪ್ರಸೂತಿ ತಜ್ಞೆ ಡಾ.ಪ್ರಭಾವತಿ, ಶ್ರೀನಿವಾಸನಾಯ್ಡು, ಕರ್ನಾಟಕ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಭೀಮಶಂಕರ್ ಪಾಟೀಲ್, ಕನ್ನಡ ಸೇನೆ ಕಾರ್ಯಾಧ್ಯಕ್ಷ ಮುನಿಕೃಷ್ಣ, ಚಿತ್ರನಟಿ ಸಂಗೀತ, ಶಂಕರ್, ವೀರಶೈವ ಯುವ ಮೊರ್ಚಾ ರಾಜ್ಯಾಧ್ಯಕ್ಷ ಜಿ.ಟಿ.ಜೀವನ್ ಅವರಿಗೆ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅವರು ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.

ವೇದಿಕೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಪದಾಕಾರಿಗಳಾದ ಟಿ.ಮುನಿರಾಜುಗೌಡ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜು, ಮಹಂತೇಶ್, ಆಶಾ ಸಿದ್ದಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಗೌಡ, ಮಹಂತೇಶ್, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಾ, ವಿನೋದ್, ಸೌಭಾಗ್ಯ ಶಿವಲಿಂಗು, ಎಂ.ಎಸ್.ಮಂಜುನಾಥ್, ಜಿ.ಮಹಂತಪ್ಪ ಇತರರಿದ್ದರು.

ರಾಜ್ಯದ ಹಿತರಕ್ಷಣೆ ಹೋರಾಟದ ಗುರಿ:

ಸಾವಿರಾರು ಜನರ ತ್ಯಾಗ-ಬಲಿದಾನದಿಂದ ಕನ್ನಡಪರ ಹೋರಾಟಗಳು ಇಂದಿಗೂ ಜೀವಂತವಾಗಿವೆ, ನಾಡಿನ ನೆಲ-ಜಲದ ವಿಚಾರ ಬಂದಾಗ ದನಿ ಎತ್ತುವುದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿದೆ, ಇದಕ್ಕೆ ಪ್ರತಿಷ್ಠೆ ಎನ್ನುವುದು ಸರಿಯಲ್ಲ. ಅದನ್ನು ನಾವು ಸಹಿಸುವುದಿಲ್ಲ. ಯಾವುದೇ ಸರ್ಕಾರ ಕನ್ನಡ ನಾಡಿನ ನೆಲ ಜಲದ ವಿಚಾರದಲ್ಲಿ ರಾಜ್ಯದ ಹಿತರಕ್ಷಣೆ ಮಾಡಬೇಕೆಂಬುದಷ್ಟೇ ನಮ್ಮ ಹೋರಾಟದ ಗುರಿ, ಅದು ಪ್ರತಿಷ್ಠೆಯಲ್ಲ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಶಾಸಕರ ಹೇಳಿಕೆಗೆ ತಿರುಗೇಟು ನೀಡಿದರು.

Share this article