ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ, ಮಳವಳ್ಳಿ, ಕೆ.ಆರ್.ಪೇಟೆ, ಮದ್ದೂರು ತಾಲೂಕುಗಳಲ್ಲಿ ಕಾವೇರಿ ಹೋರಾಟ ಮುಂದುವರಿದಿದೆ. ವಿವಿಧ ಸಂಘಟನೆಗಳು ವಿಭಿನ್ನ ರೀತಿಯಲ್ಲಿ ಚಳವಳಿ ನಡೆಸುವುದರೊಂದಿಗೆ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಪಡಿಸಿದವು.
ತಮಿಳುನಾಡು ಸಿಎಂ ವಿರುದ್ಧ ಗೋ-ಬ್ಯಾಕ್ ಕೂಗು:ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ‘ಗೋ ಬ್ಯಾಕ್ ವಿಜಯ್’ ಎಂದು ಬರೆದಿರುವ ಫಲಕಗಳನ್ನು ಹಿಡಿದು ತಮಿಳುನಾಡು ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದರು
ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ನಿರಂತರವಾಗಿ ಕರ್ನಾಟಕದ ವಿರುದ್ಧ ಷಡ್ಯಂತ್ರ ಮಾಡುತ್ತಿದೆ. ಕಾವೇರಿ ನದಿ ನೀರಿನ ಹಂಚಿಕೆಯೇ ಅವೈಜ್ಞಾನಿಕ. ನೂರು ವರ್ಷದ ಹಳೆಯ ಒಪ್ಪಂದಕ್ಕೆ ಈಗಲೂ ಜೋತುಬಿದ್ದಿರುವುದು ಹಾಸ್ಯಾಸ್ಪದ. ಪ್ರಸ್ತುತ ಬೀಳುತ್ತಿರುವ ಮಳೆಯ ಪ್ರಮಾಣವನ್ನು ಆಧರಿಸಿ ಒಪ್ಪಂದವನ್ನು ಪುನರ್‌ಪರಿಶೀಲಿಸಿ ಹೊಸ ನಿಯಮ ಜಾರಿಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಉರುಳು ಸೇವೆ ನಡೆಸಿದರು. ರಸ್ತೆಯಲ್ಲೇ ಉರುಳುತ್ತಾ ತಮಿಳುನಾಡು ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ವೇಳೆ ಅಯ್ಯಯ್ಯೋ ಅನ್ಯಾಯ ಎಂದು ಬಾಯಿ ಬಡಿದುಕೊಂಡು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕರ್ನಾಟಕದ ರೈತರ ಹಿತಾಸಕ್ತಿ ಕಾಪಾಡುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿದರು
ಕಾವೇರಿ ಮತ್ತು ಮೇಕೆದಾಟು ವಿವಾದ ಪ್ರಸ್ತಾಪ:
ಕೇಂದ್ರದ ನಿಲುವಿನ ಬಗ್ಗೆ ಪ್ರಶ್ನೆ:
ಮಾತುಕತೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ:
ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್‌ಬಾಬು, ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ಗೌಡ, ಚಂದ್ರಶೇಖರ್,ಮಹೇಂದ್ರ, ಭಾಗ್ಯಮ್ಮ, ಮಾದಮ್ಮ, ಛಾಯಾದೇವಿ, ನವೀನ್, ಮಹೇಶ್ ಮೊದಲಾದವರಿದ್ದರು.------
ಕರವೇ ಸಿಂಹಪಡೆಯಿಂದ ಪ್ರತಿಭಟನೆತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಪಡೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ಕುಳಿತರಲ್ಲದೆ, ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ವ ಪಕ್ಷಗಳ ಸಭೆಯಲ್ಲಿ ಕನ್ನಡಿಗರ ಪರ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಡಾ.ನರಸಿಂಹ ಪ್ರಸಾದ್, ಜಿಲ್ಲಾದ್ಯಕ್ಷ ವಿಷ್ಣು ವಿಠಲ್ ಸೇರಿದಂತೆ ಇತರರಿದ್ದರು.
--------ಕಾವೇರಿಗಾಗಿ ರಸ್ತೆಗಿಳಿದ ಮುಸ್ಲಿಂ ಸಮುದಾಯ
ಕಾವೇರಿ ನದಿ ನೀರಿನ ರಕ್ಷಣೆಗೆ ಒತ್ತಾಯಿಸಿ ನಗರದ ಮುಸ್ಲಿಂ ಸಮುದಾಯದ ವತಿಯಿಂದ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ವೇಳೆ ಸರ್ಕಾರಿ ಬಸ್‌ಗಳನ್ನು ತಡೆದರು. ರಸ್ತೆಯಲ್ಲೇ ಬಸ್‌ಗಳ ಮುಂದೆ ಬಿದ್ದು ಉರುಳು ಸೇವೆ ಮಾಡುವ ಮೂಲಕ ರೋಷಾವೇಶ ಪ್ರದರ್ಶಿಸಿದರು. ಈ ವೇಳೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾದಾಗ ಸಂಚಾರ ಸುಗಮಗೊಳಿಸಲು ಪೊಲೀಸರು ಮನವಿ ಮಾಡಿದರು. ಆದರೆ ಮಾತಿಗೆ ಬಗ್ಗದ ಹೋರಾಟಗಾರರನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಸ್ಲಿಂ ಸಮುದಾಯದ ಮುಖಂಡ ನ್ಯಾಮತ್, ತಮಿಳುನಾಡು ಸರ್ಕಾರ ತನ್ನ ಬೆಳೆಗಳಿಗಾಗಿ ನೀರು ಕೇಳುತ್ತಿದ್ದರೆ, ನಮ್ಮ ರಾಜ್ಯದಲ್ಲಿ ಮನುಷ್ಯರು ಹಾಗೂ ದನ- ಕರುಗಳಿಗೆ ಕುಡಿಯಲು ಕೂಡ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ತಮಿಳುನಾಡಿಗೆ ನೀರು ಹರಿಸಿದರೆ ಇನ್ನು ೧೫ ದಿನಗಳಲ್ಲಿ ಕೆಆರ್‌ಎಸ್‌ನಲ್ಲಿ ಅಣೆಕಟ್ಟೆಯಲ್ಲಿ ಬರಿ ಮಣ್ಣು ಮಾತ್ರ ಉಳಿಯುತ್ತದೆ. ಮುಂದಿನ ದಿನಗಳಲ್ಲಿ ನಮಗೆ ಕುಡಿಯುವ ನೀರಿಗೂ ಗತಿ ಇಲ್ಲದಂತಾಗುತ್ತದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.
ತಮಿಳುನಾಡು ಗಡಿ ಬಂದ್:ರಾಜ್ಯದ ೨೨೪ ಶಾಸಕರು, ೨೮ ಲೋಕಸಭಾ ಸಂಸದರು ಹಾಗೂ ೨೧ ರಾಜ್ಯಸಭಾ ಸದಸ್ಯರು ತಮ್ಮ ಸ್ವಾರ್ಥ ರಾಜಕಾರಣವನ್ನು ಮರೆತು ಕಾವೇರಿ ವಿಚಾರದಲ್ಲಿ ಒಂದೇ ವೇದಿಕೆಗೆ ಬರಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ರಾಜ್ಯದ ಕಾವೇರಿ ಸಂಕಷ್ಟವನ್ನು ತಕ್ಷಣವೇ ತಲುಪಿಸಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಒಂದು ವೇಳೆ ನೀರು ಹರಿಸಿದರೆ ನಾವು ಬರಿ ’ಕರ್ನಾಟಕ ಬಂದ್’ ಮಾಡುವುದಿಲ್ಲ, ಬದಲಾಗಿ ತಮಿಳುನಾಡು ಗಡಿಗಳನ್ನೇ ಬಂದ್ ಮಾಡಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತೇವೆ ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಮೆರವಣಿಗೆ ಹಾಗೂ ರಸ್ತೆ ತಡೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರಾದ ಮಹಮ್ಮದ್ ಹನೀಫ್, ಇದ್ರಿಸ್ ಖಾನ್, ಜಾಕೀರ್‌ಪಾಷಾ, ವಸೀಮ್, ಬಿ.ಎಂ. ಸಿರಾಜ್, ಸಿ.ಝೆಡ್.ಇರ್ಷಾದ್, ಮಹಮ್ಮದ್ ತಸ್ಲೀಮ್, ಯಾಸೀನ್, ಫರ್ದಿನ್, ವಸೀಮ್ ಸೇರಿದಂತೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.