ಸರ್ಕಾರಗಳ ಎಡವಟ್ಟುಗಳಿಂದ ಕಾವೇರಿ ಸಮಸ್ಯೆ ಜೀವಂತ: ಎಚ್.ವಿಶ್ವನಾಥ್

KannadaprabhaNewsNetwork | Published : Oct 30, 2023 12:31 AM

ಸಾರಾಂಶ

ಸರ್ಕಾರಗಳ ಎಡವಟ್ಟುಗಳಿಂದ ಕಾವೇರಿ ಸಮಸ್ಯೆ ಜೀವಂತ: ಎಚ್.ವಿಶ್ವನಾಥ್ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ
- ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಕನ್ನಡಪ್ರಭ ವಾರ್ತೆ ಮಂಡ್ಯ ಸ್ವಾತಂತ್ರ್ಯಾನಂತರ ಬಂದ ಎಲ್ಲಾ ಸರ್ಕಾರಗಳು ಮಾಡಿದ ಎಡವಟ್ಟುಗಳೇ ಕಾವೇರಿ ಸಮಸ್ಯೆ ಇಂದಿಗೂ ಜೀವಂತವಾಗಿ ಉಳಿಯಲು ಕಾರಣವಾಗಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿ, ಶತಮಾನದ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಇಂದಿಗೂ ನಡೆಯುತ್ತಿಲ್ಲ. ಎಡವಟ್ಟುಗಳ ಮೇಲೆ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿವೆ. ಎಲ್ಲರೂ ರಾಜಕಾರಣದ ದೃಷ್ಟಿಯಲ್ಲೇ ಕಾವೇರಿ ಸಮಸ್ಯೆಯನ್ನು ನೋಡುತ್ತಿದ್ದಾರೆಯೇ ವಿನಃ ರೈತರು, ಜನಸಾಮಾನ್ಯರ ಹಿತವನ್ನು ಪರಿಗಣಿಸುತ್ತಲೇ ಇಲ್ಲ ಎಂದರು. ರಾಜಕಾರಣಕ್ಕಿಂತ ನಮಗೆ ದೇಶಕ್ಕೆ ಅನ್ನ ಕೊಡುವ ಅನ್ನದಾತರ ಹಿತ ಮುಖ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನ್ನಭಾಗ್ಯ ಕೊಟ್ಟೆ ಎನ್ನುತ್ತಾರೆ. ಅನ್ನದಾತರು ಬೆಳೆ ಬೆಳೆಯದಿದ್ದರೆ ಅನ್ನಭಾಗ್ಯ ಹೇಗೆ ಕೊಡುತ್ತೀರಿ ಸ್ವಾಮಿ. ಅನ್ನದಾತರ ಸಮಸ್ಯೆಯನ್ನೇ ಕೇಳದಿದ್ದರೆ ಭಾಷಣ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಕಾವೇರಿ ವಿಚಾರವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರದಲ್ಲಿರುವ ರಾಜಕಾರಣಿಗಳು ಕೇಂದ್ರ ಸರ್ಕಾರದ ಗಮನ ಸೆಳೆಯುವ, ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು. ಏನೂ ಮಾಡದಿದ್ದರೆ ರೈತರು, ಜನಸಾಮಾನ್ಯರು ಉಳಿವು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ರಾಜ್ಯದಿಂದ ೨೭ ಜನ ಸಂಸದರಿದ್ದಾರೆ. ಒಬ್ಬರೂ ಕಾವೇರಿ ವಿಚಾರದ ಬಗ್ಗೆ ಬಾಯಿಬಿಡುತ್ತಿಲ್ಲ. ಏನು ನಡೆಯುತ್ತಿದೆ ಎಂದೂ ಹೇಳುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ರೈತರ ಕಷ್ಟವನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಸರ್ಕಾರ ರೈತ ಚಳವಳಿಗಾರರು, ಮುಖಂಡರ ಸಭೆ ಕರೆದು ಮಾತನಾಡಬೇಕು. ಪರಿಹಾರೋಪಾಯಗಳ ಬಗ್ಗೆ ಚರ್ಚಿಸಬೇಕು. ಈ ವಿಚಾರದಲ್ಲಿ ಸರ್ಕಾರಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಧರಣಿಯಲ್ಲಿ ಸುನಂದಾ ಜಯರಾಂ, ಕೆ.ಬೋರಯ್ಯ, ಕನ್ನಡಸೇನೆ ಮಂಜುನಾಥ್, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್ ಇತರರಿದ್ದರು.

Share this article