ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬಸರಾಳು ಹೋಬಳಿಗೆ ಕಾವೇರಿ ನೀರನ್ನು ಹರಿಸುವ ಯೋಜನೆಗೆ ಅನುಮೋದನೆ ದೊರಕಿಸಿಕೊಡುವಂತೆ ಸಣ್ಣ ನೀರಾವರಿ ಸಚಿವ ಎನ್.ಬೋಸರಾಜು ಅವರನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಮನವಿ ಮಾಡಿದರು.ಬಸರಾಳು ಹೋಬಳಿ ಮಳೆಯಾಶ್ರಿತ ಪ್ರದೇಶವಾಗಿದ್ದು, ಹೇಮಾವತಿ ನೀರಿನ ಕೊನೆಯ ಭಾಗದಲ್ಲಿದೆ. ನಾಲೆಯ ಮೂಲಕ ನಿರೀಕ್ಷಿತ ಪ್ರಮಾಣದ ನೀರು ಹರಿದುಬರುತ್ತಿಲ್ಲ. ಇದರಿಂದ ಈ ಭಾಗದ ರೈತರು ನೀರಾವರಿ ಬೆಳೆಗಳನ್ನು ಬೆಳೆಯಲಾಗದೆ. ರಾಗಿ, ಜೋಳದ ಬೆಳೆಗಷ್ಟೇ ಸೀಮಿತವಾಗಿದ್ದಾರೆ. ಈ ಭಾಗದ ರೈತರು ವ್ಯವಸಾಯ ಮಾಡುವುದಕ್ಕೆ ನೀರಿಗೆ ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡ ಶಾಸಕ ಪಿ.ರವಿಕುಮಾರ್ ಅವರು ಶ್ರೀರಂಗಪಟ್ಟಣದಿಂದ ಕಾಲುವೆ ಮೂಲಕ ಕಾವೇರಿ ನೀರನ್ನು ಬಸರಾಳು ವ್ಯಾಪ್ತಿಗೆ ಹರಿಸುವ ಯೋಜನೆಯನ್ನು ರೂಪಿಸಿ ಅಂದಾಜು ಪಟ್ಟಿಯನ್ನು ತಯಾರಿಸಿದ್ದಾರೆ. ಅದನ್ನು ಸಚಿವರಿಗೆ ಸಲ್ಲಿಸಿ ಯೋಜನೆ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ.
೪೦ ಗ್ರಾಮಗಳಲ್ಲಿ ನೀರಿನ ಸಮಸ್ಯೆ:೧೧೫೦ ಕೋಟಿ ರು. ವೆಚ್ಚದ ಯೋಜನೆ ಇದಾಗಿದ್ದು, ಶ್ರೀರಂಗಪಟ್ಟಣದಿಂದ ೩೫ ಕಿ.ಮೀ. ದೂರದಲ್ಲಿರುವ ಬಸರಾಳು ಹೋಬಳಿಗೆ ನೀರು ಹರಿಸುವುದರಿಂದ ಆ ಭಾಗದ ೪೦ ಗ್ರಾಮಗಳ ಜನರ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸುವುದು. ನೀರಿಲ್ಲದೆ ಬರಡಾಗಿರುವ ಹೋಬಳಿಯನ್ನು ಸ್ವಲ್ಪಮಟ್ಟಿಗಾದರೂ ಹಸಿರಿನಿಂದ ಕಂಗೊಳಿಸುವಂತೆ ಮಾಡುವುದಕ್ಕೆ ಶಾಸಕ ರವಿಕುಮಾರ್ ಸಂಕಲ್ಪ ಮಾಡಿದ್ದಾರೆ.
ಇದೇ ಮಾರ್ಗವಾಗಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ದೇವಲಾಪುರ, ಹೊಣಕೆರೆ ಭಾಗಕ್ಕೂ ಯೋಜನೆಯನ್ನು ವಿಸ್ತರಿಸಬಹುದಾಗಿರುವುದರಿಂದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರೂ ಕೂಡ ಯೋಜನೆಯ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಎರಡೂ ಕ್ಷೇತ್ರದವರು ಯೋಜನೆ ಜಾರಿಗೆ ಮುಂದಾಗಿರುವುದು ಬಸರಾಳು ಹೋಬಳಿ ಜನರ ದಶಕಗಳ ನೀರಿನ ಬವಣೆಗೆ ಪರಿಹಾರ ದೊರಕುವಂತೆ ಕಂಡುಬರುತ್ತಿದೆ.ಆರು ಚೆಕ್ ಡ್ಯಾಂ ನಿರ್ಮಾಣ ಅವಶ್ಯಬಸರಾಳು ಹೋಬಳಿಗೆ ಕಾವೇರಿ ನೀರು ಹರಿಸುವ ಕುರಿತಂತೆ ಶಾಸಕ ಪಿ.ರವಿಕುಮಾರ್ ಕಳೆದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಗಮನಸೆಳೆದಿದ್ದರು. ಕಾವೇರಿ ನೀರಿನಿಂದ ಬಸರಾಳು ಹೋಬಳಿ ಸಂಪೂರ್ಣ ವಂಚಿತವಾಗಿದ್ದು, ಬರಡು ಪ್ರದೇಶವಾಗಿದೆ. ಈ ಭಾಗದಲ್ಲಿ ಯಾವುದೇ ನೀರಾವರಿ ವ್ಯವಸ್ಥೆಗಳಿಲ್ಲ. ಹೇಮಾವತಿ ನೀರು ಈ ಭಾಗಕ್ಕೆ ಇದ್ದೂ ಇಲ್ಲದಂತಾಗಿದೆ. ಕಾವೇರಿ ನೀರನ್ನು ಬಸರಾಳು ಹೋಬಳಿಗೆ ಹರಿಸಲೇಬೇಕಾದ ಅನಿವಾರ್ಯತೆಯನ್ನು ವಿಸ್ತೃತವಾಗಿ ವಿವರಿಸಿದ್ದರು. ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಲೇಬೇಕು. ಇಲ್ಲದಿದ್ದರೆ ಈ ಭಾಗದ ಜನರ ದಶಕದ ನೀರಿನ ಬೇಡಿಕೆಗೆ ಸ್ಪಂದನೆ ಸಿಗದಂತಾಗುತ್ತದೆ. ಶ್ರೀರಂಗಪಟ್ಟಣದಿಂದ ನೀರನ್ನು ಹರಿಸುವುದರಿಂದ ಬಸರಾಳು ಪ್ರದೇಶದ ಜನರ ನೀರಾವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅದಕ್ಕಾಗಿ ಆರು ಚೆಕ್‌ಡ್ಯಾಂಗಳನ್ನು ನಿರ್ಮಿಸುವ ಅಗತ್ಯವಿದೆ ಎಂದೆಲ್ಲಾ ಯೋಜನೆಯ ಬಗ್ಗೆ ವಿವರಿಸಿದ್ದರು.
ಶಾಸಕ ಪಿ.ರವಿಕುಮಾರ್ ಅವರಿಂದ ಯೋಜನೆಯ ಕುರಿತಂತೆ ಸಂಪೂರ್ಣ ವಿವರಣೆ ಪಡೆದುಕೊಂಡಿರುವ ಸಣ್ಣ ನೀರಾವರಿ ಸಚಿವ ಎನ್.ಬೋಸರಾಜು, ಈ ಪ್ರಸ್ತಾವನೆಯನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಅನುಮೋದನೆ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಈ ಯೋಜನೆ ಅನುಷ್ಠಾನಗೊಂಡರೆ ಮಂಡ್ಯ ವಿಧಾನಸಭಾ ಕ್ಷೇತ್ರದ ಬಸರಾಳು ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರದ ದೇವಲಾಫುರ, ಹೊಣಕೆರೆ ಭಾಗದ ನೀರಿನ ದಾಹ ಕಡಿಮೆಯಾಗುವ ಸಾಧ್ಯತೆಗಳಿವೆ.ಬಸರಾಳು ನೀರಾವರಿ ಸೌಲಭ್ಯ ವಂಚಿತ ಹೋಬಳಿ. ಹೇಮಾವತಿ ಕೊನೆಯ ಭಾಗದಲ್ಲಿರುವ ಹೋಬಳಿಗೆ ನಿರೀಕ್ಷಿತ ಪ್ರಮಾಣದ ನೀರು ಸಿಗುತ್ತಿಲ್ಲ. ಮಳೆಯನ್ನೇ ಆಶ್ರಯಿಸಿ ಈ ಭಾಗದ ಜನರು ಬದುಕುತ್ತಿದ್ದಾರೆ. ಅದಕ್ಕಾಗಿ ಶ್ರೀರಂಗಪಟ್ಟಣದಿಂದ ಬಸರಾಳಿಗೆ ಕಾವೇರಿ ನೀರು ತರಲು ೧೧೫೦ ಕೋಟಿ ರು. ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಸಚಿವರಿಗೂ ಯೋಜನೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಸಚಿವರಿಂದಲೂ ಸಕಾರಾತ್ಮಕ ಸ್ಪಂದನೆ ದೊರಕಿದ್ದು, ಅನುಮೋದನೆ ಸಿಗುವ ಭರವಸೆ ಸಿಕ್ಕಿದೆ.- ಪಿ.ರವಿಕುಮಾರ್, ಶಾಸಕ