ಕನ್ನಡಪ್ರಭ ವಾರ್ತೆ ಮಂಡ್ಯ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆತ ಪ್ರಕರಣವನ್ನು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಖಂಡಿಸಿದರು.ಹಿರಿಯ ವಕೀಲ ರಾಕೇಶ್ ಕಿಶೋರ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವುದು ಸಂವಿಧಾನಾತ್ಮಕವಾಗಿ ನ್ಯಾಯಾಂಗ ವ್ಯವಸ್ಥೆಯನ್ನು ಅವಮಾನಿಸಿದ್ದಾರೆ. ಸಂವಿಧಾನ ವಿರೋಧಿ ರಾಕೇಶ್ ಕಿಶೋರ್ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಭಾರತೀಯರ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವಕ್ಕೆ ಧಕ್ಕೆ ತರುವ ಯಾವುದೇ ಸನಾತನ ನೀತಿಗಳು ಕಾನೂನು ಕೈಗೆತ್ತಿಕೊಂಡರೆ ಭಾರತ ಸಂವಿಧಾನದನ್ವಯ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸಂವಿಧಾನದ ಘನತೆ, ಗೌರವ ಮಿಗಿಲಾಗಿ ಭಾರತೀಯ ನ್ಯಾಯಾಂಗದ ಘನತೆಯನ್ನೂ ರಕ್ಷಿಸುವಂತೆ ಮನವಿ ಮಾಡಿದರು.ಬಿ.ಆರ್.ಗವಾಯಿ ದಲಿತರೆಂಬ ಕಾರಣಕ್ಕೆ ಅವಮಾನ: ಆರೋಪ
ಕನ್ನಡಪ್ರಭ ವಾರ್ತೆ ಮಂಡ್ಯಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಅವರ ಪೀಠದ ಕಡೆಗೆ ಶೂ ಎಸೆದಿರುವುದು ದೇಶದ್ರೋಹಿ ಕೃತ್ಯ ಹಾಗೂ ಭಾರತ ಸಂವಿಧಾನಕ್ಕೆ ಮಾಡಿರುವ ದೊಡ್ಡ ಅಪಮಾನ ಎಂದು ಜಾತ್ಯತೀತ ಜನತಾ ದಳದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಲ್. ತುಳಸೀಧರ್ ಖಂಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೋ ಎಸೆದಿರುವ ವ್ಯಕ್ತಿ 71 ವರ್ಷ ವಯಸ್ಸುಳ್ಳ ವಕೀಲನಾಗಿದ್ದು ವಕೀಲ ವೃತ್ತಿಗೆ ಅವಮಾನ ಮಾಡಿದ್ದಾನೆ. ದಲಿತ ಕುಟುಂಬದಿಂದ ಬಂದ ಗವಾಯಿ ಅವರು ಅಡೆ-ತಡೆಗಳನ್ನು ದಾಟಿ ಸಂವಿಧಾನವನ್ನು ಎತ್ತಿ ಹಿಡಿಯುತ್ತಿರುವುದನ್ನು ಇವರಿಗೆ ಸಹಿಸಲಾಗುತ್ತಿಲ್ಲ. ಮೇಲ್ಪಂತಿಯ ಸಮುದಾಯಗಳ ಕುಮ್ಮಕ್ಕಿನಿಂದ ಈ ಕೃತ್ಯ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.ಹಿರಿಯ ವಕೀಲ ರಾಕೇಶ್ ಶರ್ಮ ಅವರನ್ನು ವಕೀಲ ವೃತ್ತಿಯಿಂದ ವಜಾಗೊಳಿಸುವುದಲ್ಲದೆ, ದೇಶದ್ರೋಹಿ ಕೃತ್ಯವೆಂದು ಪ್ರಕರಣವನ್ನು ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.ಶೂ ಎಸೆದ ವಕೀಲನ ಬಂಧನಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಮಂಡ್ಯಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿರುವ ಬಿ.ಎಸ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿರುವ ಘಟನೆಯನ್ನು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಕೆ.ಎನ್.ದೀಪಕ್ ಖಂಡಿಸಿದ್ದಾರೆ. ಮುಖ್ಯನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಕೀಲನನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಉನ್ನತ ಸ್ಥಾನದಲ್ಲಿರುವ, ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಕಾರ್ಯನಿರ್ವಹಿಸುವ ದಲಿತರನ್ನು ಶೋಷಣೆ ಮತ್ತು ದೌರ್ಜನ್ಯ ಮಾಡುವುದೇ ಸನಾತನ ಧರ್ಮೀಯರ ಉದ್ದೇಶವಾಗಿದೆ. ಈಗ ನ್ಯಾಯಾಂಗದಲ್ಲಿರುವ ದಲಿತರನ್ನು ಗುರಿಯಾಗಿಸಿಕೊಂಡು ಅವಮಾನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು. ಜಾತಿ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭಧ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.