ಹಾರೋಹಳ್ಳಿಗೆ 4 ತಿಂಗಳೊಳಗೆ ಕಾವೇರಿ ನೀರು

KannadaprabhaNewsNetwork |  
Published : Jun 13, 2026, 01:15 AM IST
12ಕೆಆರ್ ಎಂಎನ್ 5.ಜೆಪಿಜಿಹಾರೋಹಳ್ಳಿ ತಾಲೂಕಿನ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ರಾಮನಗರ: ಹಾರೋಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲ ಎಲ್ಲಾ ಹಳ್ಳಿಗಳಿಗೂ ಇನ್ನು 4 ತಿಂಗಳೊಳಗಾಗಿ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು

ರಾಮನಗರ: ಹಾರೋಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲ ಎಲ್ಲಾ ಹಳ್ಳಿಗಳಿಗೂ ಇನ್ನು 4 ತಿಂಗಳೊಳಗಾಗಿ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 5 ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಬಹು ದಿನದ ಕನಸು ನನಸಾಗುತ್ತಿದೆ. ಈ ಸಂಬಂಧ ಜಲಮಂಡಳಿ ನೀರು ಸರಬರಾಜಿಗೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ತಾಲೂಕಿಗೆ ಸಮರ್ಪಕವಾಗಿ ಕಾವೇರಿ ನೀರು ಪೂರೈಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.

ಮೂಲಭೂತ ಸೌಕರ್ಯಕ್ಕೆ ಆದ್ಯತೆ :

ಹಾರೋಹಳ್ಳಿ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ. ಈ ಹಿಂದೆ 40 ವರ್ಷಗಳಿಂದ ಕೈಗೊಳ್ಳಲು ಆಗದೆ ಇರುವ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸೌಲಭ್ಯಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಇಂದು ವಿವಿಧ ಗ್ರಾಮಗಳಲ್ಲಿ 5 ಕೋಟಿ ರು. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ಸೇರಿದಂತೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಭದ್ದತೆಯಿಂದ ಕೆಲಸ ಮಾಡಲಾಗುತ್ತಿದೆ. ಹಾರೋಹಳ್ಳಿ-ಮರಳವಾಡಿ ವ್ಯಾಪ್ತಿಯಲ್ಲಿ ನೀರಿನ ಕೊರತೆಯಾಗಿಲ್ಲ. ಕ್ಷೇತ್ರದಲ್ಲಿ ವಸತಿ ಹೀನರಿಗೆ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಈಗಾಗಲೇ ಜಮೀನುಗಳನ್ನು ಗುರುತಿಸಲಾಗಿದೆ. ತಾಲೂಕಿನಲ್ಲಿ ವಸತಿ ರಹಿತ ಬಡವರಿಗೆ ನಿವೇಶನಗಳನ್ನು ಹಂಚಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಹಾಗೂ ಸರ್ಕಾರವು ಬುದ್ದ, ಬಸವ, ಅಂಬೇಡ್ಕರ್ ನಿವೇಶನ ಹಂಚಿಕೆ ಯೋಜನೆ ಹಾಗೂ ಆಶ್ರಯ ಯೋಜನೆಗಳ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹ ಫಲಾನುಭವಿಗಳು ನಿವೇಶನ ಹಂಚಿಕೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಹಾರೋಹಳ್ಳಿ ತಾಲೂಕಿನಲ್ಲಿ ಶೈಕ್ಷಣಿ ಪ್ರಗತಿಯನ್ನು ಹೆಚ್ಚಿಸಲು 5 ಕೆ.ಪಿ.ಎಸ್ ಶಾಲೆಗಳನ್ನು ತೆರೆಯಲಾಗುವುದು, ಒಂದು ಕೆ.ಪಿ.ಎಸ್ ಶಾಲೆಗೆ 15 ಕೋಟಿ ರು. ವೆಚ್ಚದಂತೆ 75 ಕೋಟಿ ರು ವೆಚ್ಚದಲ್ಲಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಮೇಡಮಾರನಹಳ್ಳಿ, ಸಿದ್ದಾಪುರ, ಭೀಮಸಂದ್ರ, ಸಂಜೀವನಾಯ್ಕನದೊಡ್ಡಿ, ಮುಡೇನಹಳ್ಳಿ, ಹೊಸಕೋಟೆ, ಕೆಬ್ಬೆದೊಡ್ಡಿ, ಮಾರಸಂದ್ರ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೆರಿಸಿದರು.

ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜೆ.ಸಿ.ಬಿ ಅಶೋಕ್, ಬೊಮುಲ್ ನಿರ್ದೇಶಕ ಹೆಚ್.ಎಸ್.ಹರೀಶ್, ಮುಖಂಡರಾದ ಮೋಹನ್ ಒಳ್ಳ, ಭೂಜಂಗಯ್ಯ, ಕೆ.ಸೋಮಶೇಖ‌ರ್, ನಾಗೇಶ್, ಪುರುಷೋತ್ತಮ್, ಜಗದೀಶ್ವರ್‌ಗೌಡ, ಸತ್ಯನಾರಾಯಣಗೌಡ ಮತ್ತಿತರರು ಹಾಜರಿದ್ದರು.

12ಕೆಆರ್ ಎಂಎನ್ 5.ಜೆಪಿಜಿ

ಹಾರೋಹಳ್ಳಿ ತಾಲೂಕಿನ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪಟೂರಿನಲ್ಲಿ ರಾತ್ರಿಯೇ ಸ್ವಚ್ಛವಾಗಲಿದೆ ನಗರ
ಕುಡಿವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ