ವಿಜಯಪುರ: ಪಟ್ಟಣದ ದಶಕಗಳ ಕಾಲದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕಾವೇರಿ ೬ನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆಯ ಅನುಷ್ಠಾನಕ್ಕೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ತಜ್ಞರ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಿತು.
ಮನೆ ಮನೆಗೆ ಭೇಟಿ:
ಜೈಕಾ ಸಂಸ್ಥೆಯ ಪರಿಸರ ಮತ್ತು ಸಾಮಾಜಿಕ ವಿಷಯ ಪರಿಣತಿಗಳಾದ ಮಿಕಿಕೊ ಅಜುಮ, ಕಾನಾನಿನೊ ಹಾಗೂ ಆರ್ಥಿಕ ವಿಶ್ಲೇಶಕಿ ಇಮಿಕೊ ಪುಜಿತ ಅವರನ್ನೊಳಗೊಂಡ ತಂಡ ಪುರಸಭೆ ಕಾರ್ಯಾಲಯದಲ್ಲಿ ಸಭೆ ನಡೆಸಿದ ನಂತರ ವಾರ್ಡ್‌ಗಳಿಗೆ ಭೇಟಿ ನೀಡಿತು. ಚಿಕ್ಕಬಳ್ಳಾಪುರ ರಸ್ತೆಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಪರಿಶೀಲಿಸಿದ ತಂಡ, ಸಾರ್ವಜನಿಕರ ಮನೆಗಳಿಗೆ ತೆರಳಿ ಜೀವನಶೈಲಿ ಹಾಗೂ ನೀರಿನ ಬಳಕೆ ಬಗ್ಗೆ ಮಾಹಿತಿ ಪಡೆದರು.ಪುರಸಭೆ ಅಧ್ಯಕ್ಷೆ ಭವ್ಯಾ ಮಹೇಶ್ ಮತ್ತು ಮುಖ್ಯಾಧಿಕಾರಿ ಸತ್ಯನಾರಾಯಣ್ ಮಾತನಾಡಿ, ಪಟ್ಟಣದ ಜನಸಂಖ್ಯೆ ೫೦ ಸಾವಿರ ದಾಟಿದೆ. ಯಾವುದೇ ನದಿ ಮೂಲಗಳಿಲ್ಲದೆ ಸಾವಿರಾರು ಅಡಿ ಆಳಕ್ಕೆ ಕೊರೆದರೂ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಎಚ್.ಎನ್.ವ್ಯಾಲಿ ನೀರು ತುಂಬಿದ ಕೆರೆಗಳ ಪಕ್ಕದ ಬಾವಿಗಳೇ ನಮಗೆ ಸದ್ಯದ ಆಧಾರ. ಕಾವೇರಿ ಯೋಜನೆ ಜಾರಿಯಾದರೆ ಮಾತ್ರ ಈ ಭಾಗದ ಜನರ ಆರೋಗ್ಯ ಮತ್ತು ಆರ್ಥಿಕತೆ ಸುಧಾರಿಸಲು ಸಾಧ್ಯ ಎಂದು ಯೋಜನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.