ಕಾವೇರಿ ವನ್ಯಧಾಮದ ಶೂಟೌಟ್‌ ಪ್ರಕರಣ ಸಿಐಡಿಗೆ ವರ್ಗಾವಣೆ

KannadaprabhaNewsNetwork |  
Published : Aug 26, 2026, 02:00 AM IST
ಆ. | Kannada Prabha

ಸಾರಾಂಶ

ಕಾವೇರಿ ವನ್ಯಧಾಮದ ಶಾಗ್ಯ ವಲಯದ ಕರಡಿಕಲ್ಲು ಗುಡ್ಡದಲ್ಲಿ ನಡೆದ ಶೂಟೌಟ್ ಪ್ರಕರಣವನ್ನು ಸಿಐಡಿಗೆ ವಹಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಹನೂರು (ಚಾಮರಾಜನಗರ ಜಿಲ್ಲೆ)

ಕಾವೇರಿ ವನ್ಯಧಾಮದ ಶಾಗ್ಯ ವಲಯದ ಕರಡಿಕಲ್ಲು ಗುಡ್ಡದಲ್ಲಿ ನಡೆದ ಶೂಟೌಟ್ ಪ್ರಕರಣವನ್ನು ಸಿಐಡಿಗೆ ವಹಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಈ ಸಂಬಂಧ, ಪ್ರಕರಣದ ಕಡತಗಳನ್ನು ಸಿಐಡಿ ತನಿಖಾಧಿಕಾರಿಗಳಿಗೆ ವೈಯಕ್ತಿಕವಾಗಿ ಹಸ್ತಾಂತರಿಸುವಂತೆ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ ಡಾ.ಎಂ.ಎ.ಸಲೀಂ ಸೂಚಿಸಿದ್ದಾರೆ. ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಎಂ‌.ಮುತ್ತುರಾಜ್‌ಗೆ ಫ್ಯಾಕ್ಸ್ ಸಂದೇಶ ರವಾನೆಯಾಗಿದ್ದು, ಸೂಚನೆ ನೀಡಲಾಗಿದೆ.

ಚಾಮರಾಜನಗರ ಜಿಲ್ಲೆಯ ರಾಮಾಪುರ, ಹನೂರು ಮತ್ತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಶೂಟೌಟ್ ಪ್ರಕರಣ, ಕಳ್ಳಬೇಟೆ ಶಿಬಿರಗಳ ಧ್ವಂಸ, ಜೀಪ್ ಜಖಂ, ಕಾಡಿಗೆ ಬೆಂಕಿ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸಿಐಡಿಗೆ ವರ್ಗಾಯಿಸಲಾಗಿದೆ. ಪ್ರಕರಣಗಳ ಕಡತಗಳನ್ನು ಹೆಚ್ಚಿನ ತನಿಖೆಗಾಗಿ ಕೂಡಲೇ ಸಿಐಡಿಗೆ ವೈಯಕ್ತಿಕವಾಗಿ ಹಸ್ತಾಂತರಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಮಹಾನಿರ್ದೇಶಕರು, ಮೇಲ್ಕಂಡ ಪ್ರಕರಣಗಳ ಮುಂದಿನ ತನಿಖೆಯನ್ನು ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಕರಣಗಳ ತನಿಖೆ ಪೂರ್ಣಗೊಂಡ ನಂತರ ವಿವರವಾದ ವರದಿಯನ್ನು ಈ ಕಚೇರಿಗೆ ಸಲ್ಲಿಸಬೇಕು ಎಂದು ಡಾ.ಎಂ.ಎ.ಸಲೀಂ ಸೂಚಿಸಿದ್ದಾರೆ.

ಕಾವೇರಿ ವನ್ಯಜೀವಿಧಾಮದ ಹೊಳೆ ಮೂರದಹಟ್ಟಿ ಅರಣ್ಯದಲ್ಲಿ ಆ.15ರ ಮುಂಜಾನೆ ಕಾವೇರಿ ವನ್ಯಜೀವಿಧಾಮದ ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದರೆನ್ನಲಾದ ಮೂವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮರಿಯಮಂಗಲ ಗ್ರಾಮದ ಅಂತೋಣಿ ಸ್ವಾಮಿ, ಜಗನಾಥ್ ದೊಡ್ಡಿ ಗ್ರಾಮದ ಜಾನ್ ರೋಸ್ ಪೀಟರ್ ಲಾಜರ್ ದೊಡ್ಡಿ ಗ್ರಾಮದ ಡೇವಿಡ್ ಕುಮಾರ್ ಮೃತಪಟ್ಟಿದ್ದರು.

ಈ ಘಟನೆಯನ್ನು ಖಂಡಿಸಿ ಮೃತರ ಕುಟುಂಬಸ್ಥರು, ಮಾರ್ಟಳ್ಳಿ-ಸಂದನಪಾಳ್ಯ, ಜಾಗೇರಿ ಭಾಗದ ಗ್ರಾಮಸ್ಥರು, ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಆಗಸ್ಟ್ 15 ಮತ್ತು 16ರಂದು ಹನೂರು ಪಟ್ಟಣದಲ್ಲಿ ಎರಡು ದಿನಗಳ ಕಾಲ ಬೃಹತ್ ಪ್ರತಿಭಟನೆ ನಡೆಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದ್ದರು.

ಪ್ರತಿಭಟನೆಯ ಬೆನ್ನಲ್ಲೇ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದರು. ಏಳು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ದಿನೇಶ್ ಕುಮಾರ್ ಮೀನಾ ಅವರು ಶೂಟ್‌ಔಟ್ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸೋಕೋ ತಂಡ, ನಕ್ಸಲ್ ನಿಗ್ರಹ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸೇರಿದಂತೆ ನುರಿತ ತಜ್ಞರ ತಂಡಗಳು ಸೇರಿದಂತೆ ಪ್ರಕರಣವನ್ನು ಪತ್ತೆಹಚ್ಚಲು ಮೂರು ತಂಡಗಳಾಗಿ ಪೊಲೀಸ್ ಇಲಾಖೆ ನಿಯೋಜನೆಗೊಳಿಸಲಾಗಿ ಸ್ಥಳ ಪರಿಶೀಲನೆ ನಡೆಸಿ ಸಂಬಂಧ ವರದಿಯನ್ನು ಶೇಖರಣೆ ಮಾಡಿದೆ.

ನಿಗದಿತ 7 ದಿನಗಳಲ್ಲಿ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ತನಿಖಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಪತ್ರ ಬರೆದು ಮೂರು ದಿನಗಳ ಹೆಚ್ಚುವರಿ ಕಾಲಾವಕಾಶ ಕೋರಿದ್ದರು. ಅದಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು.

ಬಿಜೆಪಿ ಸತ್ಯಶೋಧನಾ ಸಮಿತಿ ಆರೋಪ:

ಇದೇ ವೇಳೆ ಬಿಜೆಪಿಯ ಸತ್ಯಶೋಧನಾ ಸಮಿತಿಯು ಪತ್ರಿಕಾಗೋಷ್ಠಿ ನಡೆಸಿ, "ಮೃತಪಟ್ಟ ಮೂವರನ್ನು ಹತ್ತಿರದಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ " ಎಂದು ಗಂಭೀರ ಆರೋಪ ಮಾಡಿತ್ತು. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಸಿಟಿ ಸ್ಕ್ಯಾನ್ ಚಿತ್ರಗಳನ್ನು ಬಿಡುಗಡೆ ಮಾಡಿದ್ದ ಸಮಿತಿ, 50 ಪುಟಗಳ ವರದಿಯನ್ನು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಹಸ್ತಾಂತರಿಸಿತ್ತು.

ವರದಿಯನ್ನು ಪರಿಶೀಲಿಸಿದ ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ವಿಶೇಷ ತನಿಖೆಗೆ ಆಗ್ರಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು, ಕರಾವಳಿಯಲ್ಲಿ ಭರ್ಜರಿ ಮಳೆ
ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್​