ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದ್ದು, ಮುಂದಿನ 15 ದಿನ ತಮಿಳುನಾಡಿಗೆ ನಿತ್ಯ 9,000 ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸ್ಸು ಮಾಡಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ)ಯ ಆದೇಶವನ್ನು ಎತ್ತಿ ಹಿಡಿದಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ ಮೀಸಲು

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದ್ದು, ಮುಂದಿನ 15 ದಿನ ತಮಿಳುನಾಡಿಗೆ ನಿತ್ಯ 9,000 ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸ್ಸು ಮಾಡಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ)ಯ ಆದೇಶವನ್ನು ಎತ್ತಿ ಹಿಡಿದಿದೆ.

ದೆಹಲಿಯ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಪ್ರಾಧಿಕಾರದ ಮುಖ್ಯಸ್ಥ ಎಸ್‌.ಕೆ.ಹಲ್ದಾರ್‌ ನೇತೃತ್ವದಲ್ಲಿ ಸುದೀರ್ಘ ಒಂದೂವರೆ ಗಂಟೆ ಪ್ರಾಧಿಕಾರದ ಸಭೆ ನಡೆಯಿತು. ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಪ್ರಶಾಂತ್‌ ವಡನರೆ ಹಾಗೂ ತಮಿಳುನಾಡು ಕಾವೇರಿ ತಾಂತ್ರಿಕ ಸಮಿತಿ ಮುಖ್ಯಸ್ಥ ಸುಬ್ರಹ್ಮಣ್ಯಂ ಅವರು ತಮಿಳುನಾಡು ಪರ ವಾದ ಮಂಡಿಸಿ, ಬಾಕಿ ಇರುವ 17.49 ಟಿಎಂಸಿ ನೀರು ಸೇರಿದಂತೆ ಒಟ್ಟು 28.386 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ, ಕೆಆರ್‌ಎಸ್‌ ಜಲಾಶಯದ ಸುತ್ತಮುತ್ತ ಮಳೆ ತುಂಬಾ ಕಡಿಮೆಯಿದೆ. ನಮಗೆ ಕುಡಿಯುವ ನೀರು ಆದ್ಯತೆಯಾಗಿದೆ. ಮಳೆ ಕೊರತೆ ನಡುವೆಯೂ ಪ್ರಾಧಿಕಾರದ ಕಳೆದ ಬಾರಿಯ ಆದೇಶವನ್ನು ಪಾಲಿಸಲಾಗಿದೆ. ಹೀಗಾಗಿ, ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ. ಕನಿಷ್ಟ ಪಕ್ಷ ನೀರಿನ ಹರಿವನ್ನು 9 ಸಾವಿರ ಕ್ಯೂಸೆಕ್‌ನಿಂದ 6 ಸಾವಿರ ಕ್ಯೂಸೆಕ್‌ಗೆ ಇಳಿಸಿ ಎಂದು ಮನವಿ ಮಾಡಿತು.

ಆದರೆ, ಕರ್ನಾಟಕದ ವಾದವನ್ನು ಮಾನ್ಯ ಮಾಡದ ಪ್ರಾಧಿಕಾರ, ಮುಂದೆ ಉತ್ತಮ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ಸೂಚಿಸಿದೆ. ಹೀಗಾಗಿ, ಸಮಿತಿಯ ಆದೇಶವನ್ನು ಪಾಲಿಸಿ ಎಂದು ಸೂಚಿಸಿತು.