ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರದ ಬೃಂದಾವನದಲ್ಲಿ ಆಯೋಜಿಸಿದ್ದ ಮೊದಲನೇ ಕಾವೇರಿ ಆರತಿ ಯೋಜನೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಡಿಸಿಎಂ, ಈ ವರ್ಷದಿಂದಲೇ ವಾರಕ್ಕೆ ಮೂರು ದಿನಗಳ ಕಾಲ ಕಾವೇರಿ ಆರತಿ ಯೋಜನೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿತ್ತು. ಕೆಲವೊಂದು ಕಾರಣಗಳಿಂದ ದೊಡ್ಡಮಟ್ಟದಲ್ಲಿ ಜಾರಿ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಈ ವರ್ಷ ಕಾವೇರಿ ಆರತಿಗೆ ಕೇವಲ ಸಾಂಕೇತಿಕವಾಗಿ ಚಾಲನೆ ನೀಡಿದ್ದೇವೆ ಎಂದರು.
ಕಾವೇರಿ ಆರತಿಯನ್ನು ಕೇವಲ ಧಾರ್ಮಿಕ ಕಾರ್‍ಯಕ್ರಮವಾಗಿ ರೂಪಿಸದೆ ರಾಜ್ಯ ಮತ್ತು ಹೊರ ರಾಜ್ಯದಿಂದ ನಿತ್ಯ ಹತ್ತು ಸಾವಿರ ಜನರು ಬಂದು ವೀಕ್ಷಣೆ ಮಾಡುವಂತೆ ಆಯೋಜನೆ ಮಾಡಿ, ಪ್ರವಾಸೋಧ್ಯಮ ದೃಷ್ಠಿಯಿಂದ ಕೆಆರ್‌ಎಸ್‌ನ್ನು ವಿಶ್ವಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡುವ ಉದ್ದೇಶ ಹೊಂದಲಾಗಿತ್ತು. ಮುಂದಿನ ದಿನಗಳಲ್ಲಿ ಉದ್ದೇಶಿತ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸುತ್ತೇವೆ ಎಂದು ಖಚಿತವಾಗಿ ಹೇಳಿದರು.ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೊಳಿಸುವ ಶಕ್ತಿಯನ್ನು ಆ ತಾಯಿ ಕರುಣಿಸುತ್ತಾಳೆ ಎಂಬ ನಿರೀಕ್ಷೆಯೊಂದಿಗೆ ಕಾವೇರಿ ಆರತಿಯನ್ನು ಆರಂಭಿಸಿದ್ದೇವೆ. ನಮ್ಮ ಪ್ರಯತ್ನ ವಿಫಲವಾಗಬಹುದು. ಆದರೆ, ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ ಎಂಬ ಆಶಾಭಾವನೆ ನಮ್ಮದಾಗಿದೆ ಎಂದರು.
ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಕಾವೇರಿ ಆರತಿ ಡಿಕೆಶಿಯವರ ಕನಸು. ಉತ್ತರದಲ್ಲಿ ಗಂಗಾರತಿಯಂತೆ ದಕ್ಷಿಣದಲ್ಲಿ ಕಾವೇರಿ ಆರತಿ. ಜೀವನದಿಯನ್ನು ಪೂಜಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗಲಿವೆ ಎಂಬ ಭರವಸೆಯೊಂದಿಗೆ ಈ ಕಾರ್‍ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್‍ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗೇಶ್ವರಶ್ರೀ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಸೋಮನಾಥಸ್ವಾಮೀಜಿ, ಡಿ.ಕೆ.ಶಿವಕುಮಾರ್ ಪತ್ನಿ ಉಷಾ, ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು, ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕಾವೇರಿ ಆರತಿ ಕಾರ್‍ಯಕ್ರಮ ನಡೆಯುವ ಸ್ಥಳಕ್ಕೆ ಕರೆತರಲಾಯಿತು. ನಂತರ, ಧಾರ್ಮಿಕ ವಿಧಿ ವಿಧಾನ ಹಾಗೂ ವೇದಘೋಷದೊಂದಿಗೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ, ಕಾವೇರಿ ಮಾತೆಗೆ ಎಲ್ಲರೂ ಪುಷ್ಪಾರ್ಚನೆ ನೆರವೇರಿಸಿದರು.