ಸಿಎನ್‌ಜಿ ಬದಲು ಸಿಬಿಜಿ ವಿತರಿಸಿ ಅನ್ಯಾಯ: ಸರಿಪಡಿಸದಿದ್ದರೆ ಆಟೋ, ಟ್ಯಾಕ್ಸಿ ಬಂದ್ ಎಚ್ಚರಿಕೆ

KannadaprabhaNewsNetwork |  
Published : Jul 08, 2026, 02:15 AM IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಡಿಸಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಶಿರಸಿ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಸಿಎನ್‌ಜಿ ಗ್ಯಾಸ್ ಚಾಲಿತ ವಾಹನಗಳಿಗೆ ಅನಧಿಕೃತವಾಗಿ ಸಿಬಿಜಿ ಗ್ಯಾಸ್ ವಿತರಿಸುವ ಮೂಲಕ ವಾಹನ ಚಾಲಕರ ಮತ್ತು ಮಾಲಕರ ಬದುಕಿನ ಜೊತೆ ಚೆಲ್ಲಾಟವಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಶಿರಸಿ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಸಿಎನ್‌ಜಿ ಗ್ಯಾಸ್ ಚಾಲಿತ ವಾಹನಗಳಿಗೆ ಅನಧಿಕೃತವಾಗಿ ಸಿಬಿಜಿ ಗ್ಯಾಸ್ ವಿತರಿಸುವ ಮೂಲಕ ವಾಹನ ಚಾಲಕರ ಮತ್ತು ಮಾಲಕರ ಬದುಕಿನ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಮುಂದಿನ 8 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆಟೋ ಮತ್ತು ಟ್ಯಾಕ್ಸಿ ಸಂಚಾರ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಎಸ್. ಗೌಡ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಡಿಸಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಶೋರೂಮ್‌ಗಳಿಂದ ವಾಹನ ಖರೀದಿಸುವಾಗ ಅವು ಸಿಎನ್‌ಜಿ ತಂತ್ರಜ್ಞಾನ ಹೊಂದಿವೆ ಎಂದು ತಿಳಿಸಲಾಗಿರುತ್ತದೆ. ಆರ್‌ಸಿ ಬುಕ್ ಹಾಗೂ ಸರ್ವೀಸ್ ಬುಕ್‌ನಲ್ಲಿಯೂ ಸಿಎನ್‌ಜಿ ಎಂದೇ ನಮೂದಾಗಿದೆ. ಆದರೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಯಾವುದೇ ಪರವಾನಗಿ ಇಲ್ಲದಿದ್ದರೂ, ಕಳೆದ ಹಲವು ತಿಂಗಳಿಂದ ಅಕ್ರಮವಾಗಿ ಸಿಬಿಜಿ ಗ್ಯಾಸ್ ವಿತರಿಸಲಾಗುತ್ತಿದೆ ಎಂದು ದೂರಿದ್ದಾರೆ.

ಸಿಬಿಜಿ ಗ್ಯಾಸ್ ಬಳಕೆಯಿಂದ ವಾಹನಗಳ ಇಂಜಿನ್ ಪದೇ ಪದೇ ದುರಸ್ತಿಗೆ ಬರುತ್ತಿದ್ದು, ಪಿಕ್-ಅಪ್ ಹಾಗೂ ಮೈಲೇಜ್ ಗಣನೀಯವಾಗಿ ಕುಸಿದಿದೆ. ರಸ್ತೆ ಮಧ್ಯದಲ್ಲೇ ವಾಹನಗಳು ಸ್ಥಗಿತಗೊಳ್ಳುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೆ, ಗ್ಯಾಸ್ ವಾಸನೆಯಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಒಂದು ವೇಳೆ ವಾಹನಕ್ಕೆ ಬೆಂಕಿ ಬಿದ್ದಲ್ಲಿ ಅಥವಾ ಇಂಜಿನ್ ಕೆಟ್ಟಲ್ಲಿ, ಕಂಪನಿ ನಿಗದಿಪಡಿಸದ ಗ್ಯಾಸ್ ಬಳಸದ ಕಾರಣಕ್ಕೆ ವಿಮಾ ಸೌಲಭ್ಯವೂ ಸಿಗುವುದಿಲ್ಲ. ಇದರಿಂದ ಮಾಲಕರು ಬೀದಿ ಪಾಲಾಗುವ ಭೀತಿಯಲ್ಲಿದ್ದಾರೆ ಎಂದು ಮಾಲಕರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ಸಿಕ್ಕಿದ್ದರೂ, ಕಾರ್ಯರೂಪಕ್ಕೆ ಬಂದಿಲ್ಲ. ಇನ್ನು ಎಂಟು ದಿನಗಳಲ್ಲಿ ಶಿರಸಿ ಮತ್ತು ಮುಂಡಗೋಡ ತಾಲೂಕುಗಳಿಗೆ ಸಿಎನ್‌ಜಿ ಪೂರೈಕೆ ಆರಂಭವಾಗಬೇಕು. ಇಲ್ಲವಾದರೆ ಒಂದು ವಾರದೊಳಗೆ ಅನಧಿಕೃತ ಪಂಪ್ ಬಂದ್ ಮಾಡಿಸಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಟ್ಯಾಕ್ಸಿ ಹಾಗೂ ಆಟೋ ಸಂಚಾರ ಸ್ಥಗಿತಗೊಳಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ. ಒಂದು ವೇಳೆ ಸಿಎನ್‌ಜಿ ಕೊಡಲು ಸಾಧ್ಯವಿಲ್ಲದಿದ್ದರೆ, ನಮ್ಮ ವಾಹನಗಳನ್ನು ಸರ್ಕಾರವೇ ವಾಪಸ್ ಪಡೆದು ಪೂರ್ತಿ ಹಣ ಮರಳಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ಈ ಸಂದರ್ಭ ಸಂಘದ ಉದಯ ನಾಯ್ಕ, ರಾಘು ಗೌಳಿ, ಶಾನ್ ಪಠಾಣ, ವಿನಾಯಕ ಶಿರಸಿ, ಪ್ರದೀಪ್ ಪವಾರ್, ಮಹೇಶ್ ನಾಯ್ಕ, ಅರುಣ್ ಸೇರಿದಂತೆ 50ಕ್ಕೂ ಹೆಚ್ಚು ಆಟೋ ಚಾಲಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಟಿಸಿಎಲ್ ಗ್ರಿಡ್ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಲು ಆಗ್ರಹ
ಎಸ್ಸಿ, ಎಸ್ಟಿ ಅಭಿವೃದ್ಧಿ ಅನುದಾನ ಸದ್ಬಳಕೆಯಾಗಲಿ: ಶ್ರೀಧರ್ ಚಿನಗುಂಡಿ