- ನಿವೇಶನಗಳನ್ನು ವಿವಿಧ ಸ್ಕೀಂಗಳಲ್ಲಿ ಕಾನೂನು ಬಾಹೀರ ಹಂಚಿಕೆ - ೧೮ ಜನರ ವಿಚಾರಣೆ; ಇಂದು, ನಾಳೆಯೂ ವಿಚಾರಣೆ ಮುಂದುವರಿಕೆ ವಿಶೇಷ ವರದಿ ಕನ್ನಡಪ್ರಭ ವಾರ್ತೆ ಮಂಡ್ಯ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹೆಚ್ಚುವರಿ ಬಡ್ಡಿ, ಒಂದೇ ಕಂತು ಸ್ಕೀಂ, ನಿಮ್ಮ ಆಯ್ಕೆ ಸ್ಕೀಂನಡಿ ಹಂಚಿಕೆ ಮಾಡಿದ್ದ ನಿವೇಶನಗಳ ಕುರಿತಂತೆ ಸಿಬಿಐ ಅಧಿಕಾರಿಗಳು ಮತ್ತೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಆರಂಭಿಸಿದ್ದು, ಪ್ರಭಾವಿಗಳಿಗೆ ಶಾಕ್ ನೀಡಿದೆ. ಒಂದೇ ಕಂತು ಸ್ಕಿಂ ನಡಿ ೪೨೬, ನಿಮ್ಮ ಆಯ್ಕೆ ಸ್ಕಿಂ ನಡಿ ೩೪೪ ಹಾಗೂ ಅವಧಿ ವಿಸ್ತರಿಸಿ ಹೆಚ್ಚುವರಿ ಬಡ್ಡಿ ಪಾವತಿಸಿಕೊಂಡಿರುವ ಸುಮಾರು ೯೪೪ ನಿವೇಶನ ಪ್ರಕರಣ ಸೇರಿದಂತೆ ೧೮೨೧ ನಿವೇಶನಗಳ ಅಕ್ರಮ ಮಾರಾಟ ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿದ್ದ ಬಿ- ರಿಪೋರ್ಟ್‌ನ್ನು ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದ್ದರಿಂದ ಶುಕ್ರವಾರದಿಂದ ಸಿಬಿಐ ಅಧಿಕಾರಿಗಳು ಮತ್ತೆ ತನಿಖೆ ಕೈಗೊಂಡಿದ್ದಾರೆ. ಶುಕ್ರವಾರ ಮತ್ತು ಶನಿವಾರ ನಿವೇಶನ ಪಡೆದಿರುವ ೧೮ ಜನರಿಗೆ ನೋಟಿಸ್ ಜಾರಿ ಮಾಡಿ ಸ್ಥಳಕ್ಕೆ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ. ಸೋಮವಾರ ಮತ್ತು ಮಂಗಳವಾರವೂ ನಗರದಲ್ಲೇ ಠಿಕಾಣಿ ಹೂಡಿ ಮತ್ತಷ್ಟು ಜನರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಒಂದೇ ಕುಟುಂಬದ ಸದಸ್ಯರಿಗೆ ಎರಡು ನಿವೇಶನಗಳ ಹಂಚಿಕೆ, ಪ್ರಭಾವಿಗಳಿಗೆ ಒಂದೇ ಸ್ಥಳದಲ್ಲಿ ಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದು, ಸ್ಥಳೀಯರಲ್ಲದವರಿಗೆ ನಿವೇಶನ ಹಂಚಿರುವುದು, ಬೆಂಗಳೂರು, ಮೈಸೂರು ಸೇರಿದಂತೆ ಇತೆರೆಡೆ ನಿವೇಶನ ಹೊಂದಿರುವವರಿಗೂ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವುದು, ನಿಗದಿತ ಅವಧಿಗೆ ಮುನ್ನ ಹಾಗೂ ನಿಗದಿ ಪಡಿಸಿದಷ್ಟು ಬಡ್ಡಿಯನ್ನೂ ಕಟ್ಟಿಸಿಕೊಳ್ಳದೆ ಅಕ್ರಮವಾಗಿ ನಿವೇಶನಗಳ ಕ್ರಯ ಪತ್ರಗಳನ್ನು ಮಾಡಿರುವುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಒಂದೇ ಕುಟುಂಬದ ಸದಸ್ಯರು ಎರಡೆರಡು ನಿವೇಶನ ಪಡೆದಿರುವ ಕುರಿತಂತೆ ಸ್ಥಳಕ್ಕೆ ಅವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಕೆಲವರು ಸಿಬಿಐ ನೋಟಿಸ್‌ಗೆ ಹೆದರಿ ವಿಚಾರಣೆಗೆ ಹಾಜರಾಗದೆ ಹಿಂಜರಿಯುತ್ತಿದ್ದಾರೆ. ಮತ್ತೆ ಕೆಲವರು ಸುಳ್ಳು ವಿಳಾಸಗಳನ್ನು ನೀಡಿದ್ದರೆ, ಹಲವರು ಬೇನಾಮಿ ಹೆಸರುಗಳಲ್ಲಿ ನಿವೇಶನಗಳನ್ನು ಖರೀದಿಸಿರುವುದರಿಂದ ಅವರಿಗೆ ನೋಟಿಸ್ ತಲುಪಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಸಮರ್ಪಕವಾದ ಮಾಹಿತಿಯೂ ಸಿಗುತ್ತಿಲ್ಲವೆಂದು ಹೇಳಲಾಗಿದೆ. ನಿವೇಶನ ಹಂಚಿಕೆ ಸಮಯದಲ್ಲಿ ಮುಡಾದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದೀಗ ನಿವೃತ್ತರಾಗಿರುವವರನ್ನೂ ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅವರು ತಾವೆಲ್ಲಿ ಪ್ರಕರಣದಲ್ಲಿ ಸಿಕ್ಕಿಬೀಳುತ್ತೇವೆಯೋ ಎಂಬ ಭಯದಿಂದ ಜಾರಿಕೆ ಉತ್ತರ ನೀಡುತ್ತಾ ನುಣುಚಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸುತ್ತಿರುವ ಸಿಬಿಐ ಅಧಿಕಾರಿಗಳು ಸಾಕ್ಷ್ಯದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಸಿಕೊಂಡು ಅವರಿಂದ ಮಾಹಿತಿ ಸಂಗ್ರಹಿಸುವುದಕ್ಕೆ ಮುಂದಾಗಿದ್ದಾರೆ ಎಂದು ಗೊತ್ತಾಗಿದೆ. ರಾಜಕೀಯ ತಿಕ್ಕಾಟ ಶುರು: ವಿವಿಧ ಸ್ಕೀಂಗಳಡಿ ನಿಯಮ ಬಾಹಿರವಾಗಿ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದೊಳಗಿರುವ ಪ್ರಭಾವಿಗಳಿದ್ದಾರೆ. ಇದೀಗ ಸಿಬಿಐ ವಿಚಾರಣೆ ನಡೆಯುತ್ತಿರುವುದರಿಂದ ಪಕ್ಷಗಳೊಳಗೆ ರಾಜಕೀಯ ತಿಕ್ಕಾಟ ಶುರುವಾಗಿದೆ. ಅಧಿಕಾರದಲ್ಲಿರುವವರ ವರ್ಚಸ್ಸಿಗೆ ಧಕ್ಕೆ ತರುವ ಸಲುವಾಗಿ ಅಧಿಕಾರ ವಂಚಿತರಾಗಿರುವವರು ದಾಖಲೆಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಕೆಲವು ದಾಖಲೆಗಳನ್ನು ಇಟ್ಟುಕೊಂಡಿರುವವರಿಗೆ ದೂರವಾಣಿ ಕರೆ ಮಾಡಿ ಅವುಗಳನ್ನು ನೀಡುವಂತೆ ಮನವಿ ಮಾಡುತ್ತಿದ್ದಾರೆ ಎಂದೂ ಹೇಳಲಾಗಿದೆ. ನಿವೇಶನ ಪಡೆದ ಸಮಯದಲ್ಲಿ ಒಂದು ಪಕ್ಷದಲ್ಲಿದ್ದ ಕೆಲವರು ಈಗ ಬೇರೆ ಪಕ್ಷದಲ್ಲಿ ಅಧಿಕಾರದಲ್ಲಿದ್ದಾರೆ. ಅವರು ತಮ್ಮದೇ ಪ್ರಭಾವ ಬಳಸಿ ಪ್ರಕರಣದಿಂದ ಪಾರಾಗುವ ಕುರಿತು ಯೋಚಿಸುತ್ತಿದ್ದಾರೆ. ಸಿಬಿಐ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡಗಳನ್ನು ಬೀರುವುದಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಬಾಕ್ಸ್..... ₹ ೩೦೦ ಕೋಟಿ ನಷ್ಟ; ಸರ್ಕಾರಕ್ಕೆ ಸಮಗ್ರ ವರದಿ ಮಂಡ್ಯದ ವಿವೇಕಾನಂದ ನಗರ ಬಡಾವಣೆಯಲ್ಲಿ ನಿಮ್ಮ ಆಯ್ಕೆ, ಒಂದೇ ಕಂತು, ಹೆಚ್ಚುವರಿ ಬಡ್ಡಿ ಪ್ರಕರಣವೂ ಸೇರಿದಂತೆ ವಿವಿಧ ಸ್ಕೀಂನಡಿ ೧೮೨೧ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಪ್ರಸಕ್ತ ಮಾರುಕಟ್ಟೆ ದರದಂತೆ ಪ್ರಾಧಿಕಾರಕ್ಕೆ ಸುಮಾರು ₹೩೦೦ ಕೋಟಿ ನಷ್ಟವಾಗಿದೆ. ಮುಡಾದಲ್ಲಿ ನಿವೇಶನ ಹಂಚಿಕೆ ಸಂಬಂಧ ನಡೆದಿರುವ ಅಕ್ರಮಗಳ ಕುರಿತು ಈ ಹಿಂದೆ ಸಲ್ಲಿಸಲಾಗಿರುವ ಎಲ್ಲ ವರದಿಗಳ ಅಂಕಿ-ಅಂಶಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಪರಿಷ್ಕೃತವಾದ ಸಮಗ್ರ ಅಂತಿಮ ವರದಿಯೊಂದನ್ನು ೨೦೧೪ರಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಬಾಕ್ಸ್... ನಕ್ಷೆಯಲ್ಲಿ ನ್ಯೂನತೆ ವಿವೇಕಾನಂದ ನಗರ ಬಡಾವಣೆಯ ಲೇ-ಔಟ್ ನಕ್ಷೆ ಅನುಮೋದನೆಯಾಗಿರುವ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಆದರೆ, ಸರ್ಕಾರದಿಂದ ಅನುಮೋದಿಸಲಾಗಿದೆ ಎನ್ನಲಾದ ಪತ್ರ ಈ ಕಚೇರಿಗೆ ಬಂದಿದ್ದರೂ ಆ ಪತ್ರದೊಂದಿಗೆ ನಕಾಶೆ ಕಚೇರಿಗೆ ಬಂದಿಲ್ಲ. ಆದಾಗ್ಯೂ ಅದೇ ನಕಾಶೆಯನ್ನೇ ಆಧಾರವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ ವಿವಿಧ ಸ್ಕೀಂಗಳಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಸರ್ಕಾರದ ಆದೇಶದಂತೆ ನೀಡಲಾದ ೯೦.೨೪ ಹೆಕ್ಟೇರ್ ವಿಸ್ತೀರ್ಣದ ಬಡಾವಣೆಯ ಪ್ರದೇಶವನ್ನು ಪರಿಷ್ಕರಿಸಿ ೮೬.೧೩ ಹೆಕ್ಟೇರ್ ಪ್ರದೇಶಕ್ಕೆ ಕೆಲವು ನಿಬಂಧನೆಗಳಿಗೆ ಒಳಪಟ್ಟು ಅನುಮೋದಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ವಿವೇಕಾನಂದ ನಗರ ಬಡಾವಣೆಯ ನಕಾಶೆಯಲ್ಲಿ ೨೬೫೮ ನಿವೇಶನಗಳಿದ್ದರೂ ಮಧ್ಯಂತರ ವಸತಿ ನಿವೇಶನಗಳು ೨೨೫೧ ಮತ್ತು ಮೂಲೆ ವಸತಿ ನಿವೇಶನಗಳು ೩೫೧ ಸೇರಿ ಒಟ್ಟು ೨೬೦೨ ನಿವೇಶನಗಳನ್ನು ಮಾತ್ರ ಕಾಣಿಸಲಾಗಿದೆ. ಬಾಕ್ಸ್.... ನಕಾಶೆಯಲ್ಲಿ ೫೬ ನಿವೇಶನ ಮಾಯ ವಿವೇಕಾನಂದ ನಗರ ಬಡಾವಣೆಯಲ್ಲಿ ಕ್ರಮ ಸಂಖ್ಯೆ ೧ ರಿಂದ ೨೮೬೮ರ ವರೆಗೆ ವಸತಿ ನಿವೇಶನಗಳಲ್ಲಿದ್ದು, ಇದರಲ್ಲಿ ೨೬೦ ನಿವೇಶನಗಳು ಕಂದಾಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಗೆ ನೀಡಬೇಕಾದ ಪ್ರದೇಶದಲ್ಲಿರುವ ಕಾರಣ ಆ ನಿವೇಶನಗಳನ್ನು ಕೈಬಿಡಲಾಗಿದೆ. ಜೊತೆಗೆ ನಿವೇಶನಗಳ ಸಂಖ್ಯೆಯನ್ನು ೧ರಿಂದ ೨೭೪೨ರವರೆಗೆ ತದ ನಂತರ ೨೭೫೮ ರಿಂದ ೨೮೬೮ರ ವರೆಗೆ ಮುಂದುವರೆಸಲಾಗಿದೆ. ಆದರೆ, ೨೭೪೩ರಿಂದ ೨೭೫೭ರ ವರೆಗೆ ಹಾಗೂ ಕ್ರಮ ಸಂಖ್ಯೆ ೧೯೧೪, ೨೧೩೫, ೨೧೩೬ ಕ್ರಮ ಸಂಖ್ಯೆಗಳನ್ನು ನಕಾಶೆಯಲ್ಲಿ ನಮೂದಿಸಿಲ್ಲ. ಇದಕ್ಕೆ ಕಾರಣವೇನೆಂಬುದು ಮಾತ್ರ ತಿಳಿದುಬಂದಿಲ್ಲ. ಕ್ರಮ ಸಂಖ್ಯೆ ೨೮೬೮ ನಮೂದಾಗಿದ್ದರೂ ವಾಸ್ತವದಲ್ಲಿ ೨೬೫೮ ನಿವೇಶನಗಳು ಮಾತ್ರ ಲಭ್ಯವಿದೆ. ಇದರಲ್ಲೂ ೫೬ ನಿವೇಶನಗಳು ನಕಾಶೆಯಿಂದ ಮಾಯವಾಗಿವೆ.