ಹನುಮಸಾಗರದಲ್ಲಿ ಕಣ್ತೆರೆಯದ ಸಿಸಿ ಕ್ಯಾಮೆರಾ

KannadaprabhaNewsNetwork | Published : Apr 25, 2025 11:51 PM

ಸಾರಾಂಶ

ಕೆಲವೊಂದು ಬಾರಿ ಕಳ್ಳತನ ನಡೆದಾಗ ಅಪರಾಧ ಪ್ರಕರಣ ಭೇದಿಸುವುದು ಸೇರಿದಂತೆ ಕಳ್ಳರ ಪತ್ತೆಗೆ ಕೆಲ ಸಾಕ್ಷಿಗಳು ಬೇಕಾಗುತ್ತವೆ. ಅದರಲ್ಲಿ ಸಿಸಿ ಕ್ಯಾಮೆರಾವು ಒಂದು. ಆದರಿಂದ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಅಂಗಡಿಕಾರರಿಗೆ ಪೊಲೀಸರು ಹೇಳಿದ್ದಾರೆ.

ಏಕನಾಥ ಜಿ. ಮದಕೇರಿ

ಹನುಮಸಾಗರ:

ಜನರ ಭದ್ರತೆ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಅಳವಡಿಸಿರುವ ಸಿಸಿ ಕ್ಯಾಮೆರಾ ಕಾರ್ಯನಿರ್ವಹಿಸದೆ ಹಲವು ದಿನ ಕಳೆದರೂ ಪಂಚಾಯಿತಿ ಮಾತ್ರ ಅವುಗಳತ್ತ ನೋಡುತ್ತಿಲ್ಲ.

ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್‌ ವೃತ್ತ ಹಾಗೂ ಹಳೆ ಬಸ್ ನಿಲ್ದಾಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಂಬೇಡ್ಕರ್‌ ವೃತ್ತ ಕುಷ್ಟಗಿ, ಇಳಕಲ್, ಗಜೇಂದ್ರಗಡ ಮಾರ್ಗಗಳು ಕೂಡುವ ಮುಖ್ಯ ರಸ್ತೆಯಾಗಿದೆ. ಇನ್ನು ಹಳೆ ಬಸ್ ನಿಲ್ದಾಣ ಜನನಿಬಿಡ ಪ್ರವೇಶವಾಗಿದ್ದರಿಂದ ಕ್ಯಾಮೆರಾ ಅಳವಡಿಸಲಾಗಿದೆ. ಸದ್ಯ ಇವೆರಡು ಕಾರ್ಯನಿರ್ವಹಿಸುತ್ತಿಲ್ಲ.

ಪೊಲೀಸರಿಂದ ಜಾಗೃತಿ:

ಈಗಾಗಲೇ ಗ್ರಾಮದಲ್ಲಿ ಬಂಗಾರದ ಅಂಗಡಿ ಸೇರಿದಂತೆ ವಿವಿಧ ಅಂಗಡಿ ಮುಂಗಟ್ಟುದಾರರಿಗೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ಲಕ್ಷಾಂತರ ಬಂಡವಾಳ ಹಾಕಿ ವ್ಯಾಪಾರ ಮಾಡುತ್ತೀರಿ. ಕೆಲವೊಂದು ಬಾರಿ ಕಳ್ಳತನ ನಡೆದಾಗ ಅಪರಾಧ ಪ್ರಕರಣ ಭೇದಿಸುವುದು ಸೇರಿದಂತೆ ಕಳ್ಳರ ಪತ್ತೆಗೆ ಕೆಲ ಸಾಕ್ಷಿಗಳು ಬೇಕಾಗುತ್ತವೆ. ಅದರಲ್ಲಿ ಸಿಸಿ ಕ್ಯಾಮೆರಾವು ಒಂದು. ಆದರಿಂದ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಹೇಳಿದ್ದಾರೆ. ವ್ಯಾಪಾರಸ್ಥರು ಸಹ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ. ಈ ಮೂಲಕ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಮುಂದಾಗಿದೆ. ಆದರೆ, ಪಂಚಾಯಿತಿ ಮಾತ್ರ ಇರುವ ಸಿಸಿ ಕ್ಯಾಮೆರಾಗಳ ದುರಸ್ತಿಗೆ ಮುಂದಾಗದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಪಂ ಬೆಂಬಲ ಅವಶ್ಯ:

ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಹಾಗೂ ಅಪರಾಧ ಕೃತ್ಯ ನಡೆಯದಂತೆ ನೋಡಿಕೊಳ್ಳುವುದು ಗ್ರಾಮ ಪಂಚಾಯಿತಿ ಕರ್ತವ್ಯವೂ ಹೌದು. ಹೀಗಾಗಿ ಪೊಲೀಸರೊಂದಿಗೆ ಗ್ರಾಮ ಪಂಚಾಯಿತಿ ಕೈಜೋಡಿಸಿ ಸಿಸಿ ಕ್ಯಾಮೆರಾ ಅಳವಡಿಕೆ ಹೆಚ್ಚಿಸಬೇಕು. ಜತೆಗೆ ಇದೀಗ ಅಳವಡಿಸಿರುವ ಕ್ಯಾಮೆರಾಗಳು ಕಡಿಮೆ ಗುಣಮಟ್ಟದಿಂದ ಕೂಡಿದ್ದು ದೃಶ್ಯಗಳು ಸರಿಯಾಗಿ ಸೆರೆಯಾಗುತ್ತಿಲ್ಲ. ಹೀಗಾಗಿ ಪಂಚಾಯಿತಿ ಜನನಿಬಿಡ ಪ್ರದೇಶ, ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮಕೈಗೊಳ್ಳಬೇಕು. ಜತೆಗೆ ಹಾಳಾಗಿರುವ ಕ್ಯಾಮೆರಾ ದುರಸ್ತಿಗೆ ಆದ್ಯತೆ ನೀಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಗ್ರಾಮದಲ್ಲಿರುವ ಸಿಸಿ ಕ್ಯಾಮೆರಾಗಳ ನಿರ್ವಹಣೆಗೆ ಪಂಚಾಯಿತಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಹೊಸ ಬಸ್‌ ನಿಲ್ದಾಣದ ಮಾರ್ಗದಲ್ಲಿಯೂ ಕ್ಯಾಮೆರಾ ಅಳವಡಿಸಬೇಕಾಗಿದೆ. ಅಪರಾಧ ಕೃತ್ಯಗಳು ನಡೆದ ಬಳಿಕ ಎಚ್ಚರಗೊಳ್ಳುವ ಮೊದಲು ಈಗಾಗಲೇ ಅಂಗಡಿ-ಮುಂಗಟ್ಟು, ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಈ ಮೂಲಕ ಅಪರಾಧಿಕ ಕೃತ್ಯಕ್ಕೆ ಕಡಿವಾಣ ಹಾಕಲು ಜನರು ನಮ್ಮೊಂದಿಗೆ ಕೈಜೋಡಿಸಬೇಕು.

ಧನುಂಜಯ ಎಂ. ಪಿಎಸ್ಐ ಹನುಮಸಾಗರಗ್ರಾಮದಲ್ಲಿ ಎರಡು ಸಿಸಿ ಕ್ಯಾಮೆರಾ ಅಳವಡಿಸಿದ್ದು ಅವುಗಳ ಕಾರ್ಯನಿರ್ವಹಿಸುವ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.

ನಿಂಗಪ್ಪ ಮೂಲಿಮನಿ. ಪಿಡಿಒ ಹನುಮಸಾಗರ

Share this article