ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ!

KannadaprabhaNewsNetwork |  
Published : Jan 15, 2025, 12:46 AM IST
್್್್್್‌ | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ 2024-25ನೇ ಸಾಲಿನ ವಾರ್ಷಿಕ ಪರೀಕ್ಷೆಗೆ ಕಡ್ಡಾಯವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಆಯಾ ಕೇಂದ್ರಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ 2024-25ನೇ ಸಾಲಿನ ವಾರ್ಷಿಕ ಪರೀಕ್ಷೆಗೆ ಕಡ್ಡಾಯವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಆಯಾ ಕೇಂದ್ರಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈಗಾಗಲೇ ಅಂತಿಮ ವೇಳಾಪಟ್ಟಿ ಪ್ರಕಟಿಸಿರುವ ಮಂಡಳಿಯು ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೂ ಪರೀಕ್ಷೆ ನಡೆಸಲಿದೆ. ಈ ಸಂಬಂಧ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಅದರಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.ಈ ವರ್ಷ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 130 ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಬರೋಬ್ಬರಿ 45240 ವಿದ್ಯಾರ್ಥಿಗಳು ನೋಂದಣಿ ಆಗಿದ್ದು 23307 ಬಾಲಕರು, 21933 ಬಾಲಕಿಯರು ಇದ್ದಾರೆ. ವಿಶೇಷವೆಂದರೇ ಸರ್ಕಾರಿ ಶಾಲೆಯ 20165 ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. 16257 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿದ್ದರೆ, 8818 ವಿದ್ಯಾರ್ಥಿಗಳು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿದ್ದಾರೆ.ಇನ್ನು ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 601 ಶಾಲೆಗಳ ಪೈಕಿ 238 ಸರ್ಕಾರಿ, 152 ಅನುದಾನಿತ ಹಾಗೂ 211 ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಹಿಂದೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು 2021-22 ರಲ್ಲಿ ಶೇ.89.00 ಫಲಿತಾಂಶ ಪಡೆದಿದ್ದರೆ, 2022-23 ರಲ್ಲಿ ಶೇ. 90.39 ಫಲಿತಾಂಶ ಕಂಡುಕೊಂಡಿತ್ತು. ಕಳೆದ ವರ್ಷ 2023-24ನೇ ಸಾಲಿನಲ್ಲಿ ಶೇ. 85.17 ಫಲಿತಾಂಶ ಪಡೆದಿದೆ.ಪ್ರತಿ 4ನೇ ಶನಿವಾರ ಪಾಲಕ-ಪೋಷಕರ ಸಭೆ ಮತ್ತು ಮನೆಗೆ ಭೇಟಿ ನೀಡುವ ಕಾರ್ಯಕ್ರಮ, ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿ ನಡೆಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳಿಗೆ ಮಕ್ಕಳನ್ನು ದತ್ತು ನೀಡಿ ಓದುವಂತೆ ಪ್ರೋತ್ಸಾಹಿಸುವುದು. ಜಿಪಿಟಿ ಶಿಕ್ಷಕರಿಗೂ 2 ಮಕ್ಕಳನ್ನು ದತ್ತು ನೀಡುವುದು ಮತ್ತು ಮಾರ್ಗದರ್ಶನ ಮಾಡಲಾಗಿದೆ. ಇನ್ನು ಎಸ್‌ಎ-1 ಪರೀಕ್ಷೆಯಲ್ಲಿ ಶೇ.30 ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಕ್ರಮ ವಹಿಸಲಾಗಿದೆ.ಪರೀಕ್ಷಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಈ ಬಾರಿ ಕೂಡ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿಯೇ ನಡೆಸಲಿದೆ. ಈ ಹಿಂದೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅವ್ಯವಹಾರ ಪ್ರಕರಣಗಳಿದ್ದಲ್ಲಿ ಅಂತಹ ಕೇಂದ್ರಗಳನ್ನು ರದ್ದುಪಡಿಸುವುದು. ಹೆಚ್ಚುವರಿ ಕೇಂದ್ರಗಳನ್ನು ಅಗತ್ಯ ಬಿದ್ದರೆ ಜಿಲ್ಲಾಧಿಕಾರಿ ಅನುಮತಿಯೊಂದಿಗೆ ತೆರೆಯಬಹುದು ಎಂದು ಡಿಡಿಪಿಐ ಆರ್.ಎಸ್.ಸೀತಾರಾಮು, ಎಸ್‌ಎಸ್‌ಎಲ್‌ಸಿ ಜಿಲ್ಲಾ ನೋಡೆಲ್ ಅಧಿಕಾರಿ ವಿ.ಎಸ್.ಕಾಂಬಳೆ ತಿಳಿಸಿದ್ದಾರೆ.

ತಾಲೂಕುವಾರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಿವರ

ತಾಲೂಕು-ಬಾಲಕರು-ಬಾಲಕಿಯರು-ಒಟ್ಟು

ಅಥಣಿ-3325-3241-6566

ನಿಪ್ಪಾಣಿ-2087-1890-3977

ಚಿಕ್ಕೋಡಿ-2694-2768-5462

ಗೋಕಾಕ-2307-2264-4571

ಹುಕ್ಕೇರಿ-3650-3228-6878

ಕಾಗವಾಡ-1245-1098-2352

ಮೂಡಲಗಿ-4288-3797-8085

ರಾಯಬಾಗ-3702-3647-7349

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪರೀಕ್ಷಾರ್ಥಿಗಳು ಯಾವುದೇ ಭಯವಿಲ್ಲದೇ ಆತ್ಮಸ್ಥೆರ್ಯದಿಂದ ಪರೀಕ್ಷೆ ಎದುರಿಸಬೇಕು. ಫಲಿತಾಂಶ ವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು ಉತ್ತಮ ಫಲಿತಾಂಶದ ನಿರೀಕ್ಷೆಯಿದೆ.

- ಸೀತಾರಾಮು ಆರ್.ಎಸ್, ಡಿಡಿಪಿಐ ಚಿಕ್ಕೋಡಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳದಿ ಮಾರ್ಗ: 9 ಮೆಟ್ರೋ ನಿಲ್ದಾಣ ಬಳಿ ಹೊಸ ಬಿಎಂಟಿಸಿ ನಿಲ್ದಾಣ
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌